2026ರ ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಒಟ್ಟು 421 ಕಲಾತಂಡಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸಾಂಸ್ಕೃತಿಕ ಉಪ ಸಮಿತಿಯ ಆಮಂತ್ರಣ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಓರ್ವೆಲ್‌ ಫರ್ನಾಂಡೀಸ್

ಹಳಿಯಾಳ: ಕರ್ನಾಟಕದ ಕಲೆ, ಸಂಸ್ಕೃತಿ, ಪರಂಪರೆಯನ್ನು ಜಗತ್ತಿಗೆ ಪರಿಚಯಿಸುವ ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ನಾಡಿನ ಹೆಮ್ಮೆಯ ಸೂತ್ರದ ಗೊಂಬೆಯಾಟಕ್ಕೆ ವೇದಿಕೆ ನಿರಾಕರಿಸಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಕಲಾವಿದ ಬಳಗದಲ್ಲಿ ನಿರಾಶೆ ಹಾಗೂ ಬೇಸರವನ್ನುಂಟು ಮಾಡಿದೆ.

2026ರ ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಒಟ್ಟು 421 ಕಲಾತಂಡಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸಾಂಸ್ಕೃತಿಕ ಉಪ ಸಮಿತಿಯ ಆಮಂತ್ರಣ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಆದರೆ, ಈ ಪಟ್ಟಿಯಲ್ಲಿ ಕರ್ನಾಟಕದ ವಿಶಿಷ್ಟ ಪರಂಪರೆಯ ಕಲೆಯಾದ ಸೂತ್ರದ ಗೊಂಬೆಯಾಟದ ಒಂದೇ ಒಂದು ತಂಡಕ್ಕೂ ಅವಕಾಶ ಸಿಕ್ಕಿಲ್ಲ ಎಂಬುವುದು ಆಶ್ಚರ್ಯಕರ ಬೆಳವಣಿಗೆಯಾಗಿದೆ.

ಕಲೆಗಳ ಸಮನ್ವಯ: ಸೂತ್ರದ ಗೊಂಬೆಯಾಟ ಕೇವಲ ಮನರಂಜನಾ ಕಲೆಯಲ್ಲ. ಇದು ಜನಪದ ಪರಂಪರೆ, ಪೌರಾಣಿಕ ಕಥನ, ಸಂಗೀತ, ಸಾಹಿತ್ಯ, ಅಭಿನಯ ಮತ್ತು ಕರಕುಶಲತೆಯ ಸುಂದರ ಸಮನ್ವಯ. ತಲೆಮಾರುಗಳಿಂದ ಉಳಿದು ಬಂದಿರುವ ಈ ಕಲೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವುದು ದಸರಾದಂತಹ ಉತ್ಸವಗಳ ಜವಾಬ್ದಾರಿಯಾಗಿದೆ ಎಂಬುದು ಗೊಂಬೆಯಾಟ ಕಲಾವಿದರ ಅಳಲಾಗಿದೆ. ಕಣ್ಮರೆಯಾಗದ ಆತಂಕ: ಈ ಬಾರಿಯ ನಾಡಹಬ್ಬ ದಸರಾದಲ್ಲಿ 421 ತಂಡಗಳಿಗೆ ಅವಕಾಶ ನೀಡಿರುವಾಗ ಕನಿಷ್ಠ ಒಂದು ಪ್ರದರ್ಶನಕ್ಕಾದರೂ ಅವಕಾಶ ನೀಡಬಹುದಿತ್ತು. ಪ್ರತಿಷ್ಠಿತ ವೇದಿಕೆಯಲ್ಲೇ ಅವಕಾಶ ಇಲ್ಲದಿದ್ದರೆ ಈ ಕಲೆ ಕಣ್ಮರೆಯಾಗುವ ಆತಂಕವಿದೆ ಎಂದು ಕಲಾಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಪರಂಪರೆಯ ಕನಿಷ್ಠ ಒಂದು ಅಥವಾ ಎರಡು ಪ್ರದರ್ಶನಗಳ ಅವಕಾಶ ನೀಡಲು ಸಾಧ್ಯವಾಗದಿರುವುದು ಕಲೆಯ ನಿರ್ಲಕ್ಷ್ಯಕ್ಕೆ ಕಾರಣವಾಗಬಹುದು. ಆಡಳಿತ ವ್ಯವಸ್ಥೆಯು ಹೀಗೆಯೇ ನಿರ್ಲಕ್ಷ್ಯದ ಭಾವನೆ ಮುಂದುವರೆಸಿದರೆ ಮುಂದಿನ ದಿನಗಳಲ್ಲಿ ಕಲಾವಿದರಿಗೆ ವೇದಿಕೆ ದೊರೆಯುವುದಷ್ಟೇ ಅಲ್ಲದೇ, ವಿಶಿಷ್ಟವಾದ ಸಾಂಪ್ರದಾಯಿಕ ಕಲಾಪ್ರಕಾರವೊಂದು ಸಾರ್ವಜನಿಕ ಸಾಂಸ್ಕೃತಿಕ ವೇದಿಕೆಯಿಂದ ಕ್ರಮೇಣ ಮರೆಯಾಗುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು.ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಕರ್ನಾಟಕದ ಒಂದೇ ಒಂದು ಸೂತ್ರದ ಗೊಂಬೆಯಾಟದ ತಂಡಕ್ಕೂ ಅವಕಾಶ ನೀಡದಿರುವುದು ಅತ್ಯಂತ ಬೇಸರದ ಸಂಗತಿ. ಈಗಾಗಲೇ ಅವಸಾನದ ಅಂಚಿನಲ್ಲಿರುವ ಈ ಸಾಂಪ್ರದಾಯಿಕ ಕಲೆಗೆ ಇಂತಹ ಪ್ರತಿಷ್ಠಿತ ವೇದಿಕೆಯಲ್ಲೂ ಅವಕಾಶ ಸಿಗದಿದ್ದರೆ ಈ ಕಲೆಯನ್ನು ಉಳಿಸುವುದು ಹೇಗೆ ಎಂದು ಅಂತಾರಾಷ್ಟ್ರೀಯ ಸೂತ್ರದ ಗೊಂಬೆಯಾಟದ ಕಲಾವಿದೆ ಸುಜಾತಾ ಬಿರಾದಾರ ತಿಳಿಸಿದರು.