ಉನ್ನತೀಕರಿಸಿದ ಪ್ರಾಥಮಿಕ ಶಾಲೆಗಳಲ್ಲಿ ಟಿಜಿಟಿ ಶಿಕ್ಷಕರ ಕಡೆಗಣನೆ!

| Published : Aug 29 2025, 01:00 AM IST

ಉನ್ನತೀಕರಿಸಿದ ಪ್ರಾಥಮಿಕ ಶಾಲೆಗಳಲ್ಲಿ ಟಿಜಿಟಿ ಶಿಕ್ಷಕರ ಕಡೆಗಣನೆ!
Share this Article
  • FB
  • TW
  • Linkdin
  • Email

ಸಾರಾಂಶ

ಇದೀಗ ಟಿಜಿಟಿ ಶಿಕ್ಷಕ ವೃಂದ ಒಟ್ಟಾಗಿ ಹೋರಾಟಕ್ಕೆ ಅಣಿಯಾಗುತ್ತಿದೆ. ತಮ್ಮನ್ನು ಜಿಪಿಟಿ ಶಿಕ್ಷಕರೆಂದು ಪರಿಗಣಿಸಬಾರದು. ಜತೆಗೆ ಉನ್ನತೀಕರಿಸಿದ ಪ್ರಾಥಮಿಕ ಶಾಲೆಗಳಿಂದ ಮೇಲ್ದರ್ಜೆಗೇರಿ ಪ್ರೌಢಶಾಲೆಗಳಿಗೆ ತಮಗೆ ಹುದ್ದೆ ನೀಡಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಪ್ರೌಢಶಾಲಾ ಶಿಕ್ಷಕರ ನಡುವೆ ಟಿಜಿಟಿ (ಟ್ರೈನ್ಡ್‌ ಗ್ರ್ಯಾಜ್ಯುವೆಟ್‌ ಟೀಚರ್ಸ್‌) ಪದವೀದರರು ಅತಂತ್ರರಾಗುತ್ತಿದ್ದಾರೆ. ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇವರನ್ನು ಈಗ ಪ್ರಾಥಮಿಕ ಶಾಲಾ ಶಿಕ್ಷಕರು ಎಂದು ಪರಿಗಣಿಸಲಾಗುತ್ತಿದೆ. ಇದು ಟಿಜಿಟಿ ಶಿಕ್ಷಕರಲ್ಲಿ ಅಸಮಾಧಾನ, ಆಕ್ರೋಶಕ್ಕೆ ಕಾರಣವಾಗುತ್ತಿದೆ.

ರಾಜ್ಯದಲ್ಲಿ 2005, 2007 ಹಾಗೂ 2010ರಲ್ಲಿ ಪ್ರೌಢಶಾಲಾ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಯಿತು. ಆಗ ಪ್ರೌಢಶಾಲೆಗಳಲ್ಲಿ ಹುದ್ದೆಗಳು ಖಾಲಿ ಇಲ್ಲದ ಕಾರಣ ಉನ್ನತೀಕರಿಸಿದ ಪ್ರಾಥಮಿಕ ಶಾಲೆಗಳು ಅಂದರೆ 8ನೆಯ ತರಗತಿಯೂ ಇರುವ ಪ್ರಾಥಮಿಕ ಶಾಲೆಗಳಿಗೆ ಇವರನ್ನು ನೇಮಿಸಲಾಯಿತು. ಹೀಗೆ ರಾಜ್ಯದಲ್ಲಿ ಬರೋಬ್ಬರಿ 12 ಸಾವಿರಕ್ಕೂ ಅಧಿಕ ಶಿಕ್ಷಕರನ್ನು ಉನ್ನತೀಕರಿಸಿದ ಪ್ರಾಥಮಿಕ ಶಾಲೆಗಳಿಗೆ ಪ್ರೌಢಶಾಲಾ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಯಿತು. ಇವರನ್ನು ಟಿಜಿಟಿ ಎಂದು ಕರೆಯಲಾಯಿತು.

ಇವರು ಪ್ರಾಥಮಿಕ ಶಾಲೆಯಲ್ಲೇ ಇದ್ದರೂ 8ನೆಯ ತರಗತಿ ಬೋಧಿಸುತ್ತಿದ್ದರು. ಇವರು ಬಿಎಸ್ಸಿ ಬಿಇಡಿ, ಪದವೀಧರರು. 8ನೆಯ ತರಗತಿಗೆ ಗಣಿತ, ವಿಜ್ಞಾನ ಹೇಳಿಕೊಡುತ್ತಾರೆ. ಇವರಲ್ಲಿ ಹಲವರು ಬೇರೆ ಬೇರೆ ಪ್ರೌಢಶಾಲೆಗಳಿಗೆ ವರ್ಗವಾಗಿದ್ದಾರೆ. ಪ್ರಾರಂಭದಲ್ಲಿ ಇವರಿಗೆ ಪ್ರೌಢಶಾಲೆಗಳಿಗೆ ವರ್ಗ ಮಾಡಲು ಅಡೆತಡೆ ಮಾಡಲು ಪ್ರಯತ್ನಿಸಿದರು. ನ್ಯಾಯಾಲಯದ ಮೊರೆ ಹೋಗಿ ವರ್ಗ ಮಾಡಿಸಿಕೊಂಡು ಹೋಗಿರುವುದುಂಟು.

ಈಗೇನು ಸಮಸ್ಯೆ?: ಹೀಗೆ ವರ್ಗ ಮಾಡಿಸಿಕೊಂಡು ಹೋದವರನ್ನು ಬಿಟ್ಟು ಉನ್ನತೀಕರಿಸಿದ ಪ್ರಾಥಮಿಕ ಶಾಲೆಗಳಲ್ಲೇ ಇನ್ನು 2000ಕ್ಕೂ ಅಧಿಕ ಟಿಜಿಟಿ ಶಿಕ್ಷಕರಿದ್ದಾರೆ. ಇತ್ತೀಚಿಗೆ ರಾಜ್ಯ ಸರ್ಕಾರ ಉನ್ನತೀಕರಿಸಿದ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಪರಿವರ್ತಿಸುತ್ತಿವೆ. ಹೀಗೆ ಪ್ರೌಢಶಾಲೆಗಳನ್ನು ಪರಿವರ್ತಿಸುತ್ತಿರುವ ಸರ್ಕಾರ, ಅಲ್ಲಿಗೆ ಪ್ರೌಢಶಾಲೆಗೆ ಅರ್ಹರಾಗಿರುವ ಶಿಕ್ಷಕರನ್ನು ವರ್ಗ ಮಾಡಿಕೊಂಡು ಬರುತ್ತಿದೆ. ಆದರೆ, ಅದೇ ಶಾಲೆಗಳಲ್ಲಿರುವ ಟಿಜಿಟಿ ಶಿಕ್ಷಕರನ್ನು ಪರಿಗಣಿಸುತ್ತಿಲ್ಲ. ಟಿಜಿಟಿ ಹುದ್ದೆಯಲ್ಲಿರುವ ಶಿಕ್ಷಕರನ್ನು ಹೆಚ್ಚುವರಿ ಹುದ್ದೆ ಎಂದು ಹೇಳುತ್ತದೆ. ಜತೆಗೆ ಅಲ್ಲೇ ಪ್ರಾರಂಭವಾಗಿರುವ ಪ್ರೌಢಶಾಲೆಗಳಲ್ಲಿ ಇವರ ಹುದ್ದೆಗಳನ್ನು ಖಾಲಿ ಎಂದು ತೋರಿಸುತ್ತಿದೆ.

ಜತೆಗೆ ಉನ್ನತೀಕರಿಸಿದ ಶಾಲೆಗಳಲ್ಲಿ ಟಿಜಿಟಿ ಶಿಕ್ಷಕರನ್ನು ಜಿಪಿಟಿ ಶಿಕ್ಷಕರೆಂದು ಪರಿಗಣಿಸಲಾಗುತ್ತಿದೆ. ಜಿಪಿಟಿ ಎಂದು ಗ್ರ್ಯಾಜ್ಯುವೆಟ್‌ ಪ್ರಾಮರಿ ಟೀಚರ್ಸ್‌ (ಪದವೀಧರ ಪ್ರಾಥಮಿಕ ಶಾಲೆ ಶಿಕ್ಷಕರು) ಎಂದು ಹೇಳುತ್ತದೆ. ಇದರಿಂದ ಪ್ರೌಢಶಾಲೆಗೆ ಅರ್ಹರಾಗಿರುವ ಈ ಶಿಕ್ಷಕರನ್ನು ಹಿಂಬಡ್ತಿ ನೀಡಿದಂತಾಗುತ್ತಿದೆ. ಅಲ್ಲದೇ, ಅದೇ ಆವರಣದಲ್ಲಿ ಹೊಸದಾಗಿ ಪ್ರಾರಂಭವಾದ ಪ್ರೌಢಶಾಲೆಗೂ ಪರಿಗಣಿಸುತ್ತಿಲ್ಲವಾದ್ದರಿಂದ ಇವರು ಪ್ರಾಥಮಿಕ ಶಾಲೆಯಲ್ಲೇ ಉಳಿಯಬೇಕು. ಆಗ ಸಹಜವಾಗಿ ಹೆಚ್ಚುವರಿ ಶಿಕ್ಷಕರ ಪಟ್ಟಿಯಲ್ಲಿ ಬರುತ್ತಾರೆ.

ಹೋರಾಟಕ್ಕೆ ಅಣಿ: ಇದೀಗ ಟಿಜಿಟಿ ಶಿಕ್ಷಕ ವೃಂದ ಒಟ್ಟಾಗಿ ಹೋರಾಟಕ್ಕೆ ಅಣಿಯಾಗುತ್ತಿದೆ. ತಮ್ಮನ್ನು ಜಿಪಿಟಿ ಶಿಕ್ಷಕರೆಂದು ಪರಿಗಣಿಸಬಾರದು. ಜತೆಗೆ ಉನ್ನತೀಕರಿಸಿದ ಪ್ರಾಥಮಿಕ ಶಾಲೆಗಳಿಂದ ಮೇಲ್ದರ್ಜೆಗೇರಿ ಪ್ರೌಢಶಾಲೆಗಳಿಗೆ ತಮಗೆ ಹುದ್ದೆ ನೀಡಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. ಈ ಸಂಬಂಧ ಕೋರ್ಟ್‌ ಮೊರೆ ಹೋಗಲು ಸಿದ್ಧತೆ ನಡೆಸುವುದರ ಜತೆ ಜತೆಗೆ ಬೀದಿಗಿಳಿದು ಹೋರಾಟ ನಡೆಸಲು ಅಣಿಯಾಗುತ್ತಿದ್ದಾರೆ.

ಒಟ್ಟಿನಲ್ಲಿ ಸರ್ಕಾರ ಉನ್ನತೀಕರಿಸಿದ ಪ್ರಾಥಮಿಕ ಶಾಲೆಗಳನ್ನು ಮೇಲ್ದರ್ಜೆಗೇರಿಸಿ ಪ್ರೌಢಶಾಲೆಗಳನ್ನು ಮಾಡಲು ಹೊರಟಿರುವುದು ಒಳ್ಳೆಯದೇ. ಆದರೆ, ಅದೇ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ, ಪ್ರೌಢಶಾಲೆಗಳಿಗೆ ಕಲಿಸುವ ಅರ್ಹತೆ ಹೊಂದಿರುವ ಟಿಜಿಟಿ ಶಿಕ್ಷಕರನ್ನು ಕಡೆಗಣಿಸುತ್ತಿರುವುದಂತೂ ಸರಿಯಲ್ಲ. ಸರ್ಕಾರ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು ಎಂಬುದು ಶಿಕ್ಷಣ ಪ್ರೇಮಿಗಳ ಒಕ್ಕೊರಲಿನ ಆಗ್ರಹ.

ಇಂದು ಕೌನ್ಸಿಲಿಂಗ್‌: ಈ ನಡುವೆ ಆ. 29ಕ್ಕೆ ಹೆಚ್ಚುವರಿ ಶಿಕ್ಷಕರ ವರ್ಗಾವಣೆಗೆ ಕೌನ್ಸಿಲಿಂಗ್‌ ನಡೆಯಲಿದೆ. ಅಷ್ಟರೊಳಗೆ ತಮ್ಮ ಸಮಸ್ಯೆ ಬಗೆಹರಿಸಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಗಳಿಂದ ಪ್ರೌಢಶಾಲೆಗಳಾಗಿರಲ್ಲೇ ತಮ್ಮ ಹುದ್ದೆಯನ್ನು ಮುಂದುವರಿಸಬೇಕು. ಆ ಹುದ್ದೆಗಳನ್ನು ಖಾಲಿ ಎಂದು ತೋರಿಸಬಾರದು ಎಂಬುದು ಇವರ ಬೇಡಿಕೆ.

ಟಿಜಿಟಿ ಶಿಕ್ಷಕರನ್ನು ಮೇಲ್ದರ್ಜೆಗೇರಿದ ಪ್ರೌಢಶಾಲೆಗಳಲ್ಲೇ ಮುಂದುವರಿಸಬೇಕು. ಇಲ್ಲದಿದ್ದಲ್ಲಿ ಅವರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ನಿವೃತ್ತ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ ಸಜ್ಜನರ ಹೇಳಿದರು.