ಸಾರಾಂಶ
ರೈತರಿಗೆ ₹1.50 ಕೋಟಿ ನೀಡದ ಹಿನ್ನೆಲೆ ನ್ಯಾಯಾಲಯ ಆದೇಶದಂತೆ ಕ್ರಮದಂತೆ ಸಹಾಯಕ ಆಯುಕ್ತರ ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ರಾಯಚೂರು
ರಸ್ತೆ ನಿರ್ಮಾಣ ಹಾಗೂ ಏತ ಸಣ್ಣ ನೀರಾವರಿ ಇಲಾಖೆಯಿಂದ ಭೂಮಿ ಸ್ವಾಧೀನಪಡಿಸಿಕೊಂಡು ರೈತರಿಗೆ ಪರಿಹಾರ ನೀಡದೆ ನಿರ್ಲಕ್ಷ್ಯ ತೋರಿದಕ್ಕೆ ಸಹಾಯಕ ಆಯುಕ್ತರ ಕಚೇರಿಯ ಪೀಠೋಪಕರಣಗಳನ್ನು ನ್ಯಾಯಾಲಯದ ಆದೇಶದಂತೆ ಮಂಗಳವಾರ ಜಪ್ತಿ ಮಾಡಲಾಯಿತು.ತಾಲೂಕಿನ ಜೆ. ಮಲ್ಲಾಪುರ ಗ್ರಾಮದಲ್ಲಿ ರಸ್ತೆ ನಿರ್ಮಾಣ ಮಾಡಿರುವುದು ಹಾಗೂ ಮಾನ್ವಿ ತಾಲೂಕಿನ ದದ್ದಲ್ ಗ್ರಾಮದಲ್ಲಿ ಏತ ನೀರಾವರಿಗೆ ಯೋಜನೆಗಾಗಿ, ಸುಂಕೇಶ್ವರಹಾಳ ಗ್ರಾಮದಲ್ಲಿಯೂ ಕ್ರಮವಾಗಿ 2008, 2009 ಹಾಗೂ 2012ರಲ್ಲಿ ಭೂಸ್ವಾಧೀನ ಪಡಿಸಿಕೊಳ್ಳಲಾಯಿತು. ಭೂಮಿ ಕಳೆದುಕೊಂಡ ರೈತರಿಗೆ ಸುಮಾರು 1.50 ಕೋಟಿ ಪರಿಹಾರ ಹಣ ನೀಡಬೇಕಿತ್ತು. ಆದರೆ, ಪರಿಹಾರ ನೀಡಲು ಒತ್ತಾಯಿಸುತ್ತಾ ಬರಲಾಗಿದೆ. ಅಲ್ಲದೇ ಈ ಬಗ್ಗೆ ನ್ಯಾಯಾಲಯವು ಐದು ಬಾರಿ ಜಪ್ತಿ ಆದೇಶ ಹೊರಡಿಸಿದರೂ ಸಹಾಯಕ ಆಯುಕ್ತರು ಯಾವುದೇ ಕ್ರಮ ತೆಗೆದುಕೊಳ್ಳದ ಕಾರಣ ಪ್ರಿನ್ಸಿಪಲ್ ಸಿಜೆಎಂ ನ್ಯಾಯಾಲಯ ಹಾಗೂ ಎರಡನೇ ಹೆಚ್ಚುವರಿ ನ್ಯಾಯಾಲಯದ ಆದೇಶದಂತೆ ಪೀಠೋಪಕರಣಗಳನ್ನು ಜಪ್ತಿ ಮಾಡಲಾಗಿದೆ.
ರಾಯಚೂರು ತಾಲೂಕಿನ ಜೆ.ಮಲ್ಲಾಪುರ ಗ್ರಾಮದಲ್ಲಿ ರಸ್ತೆ ನಿರ್ಮಾಣಕ್ಕೆ ಹಾಗೂ ಮಾನ್ವಿ ತಾಲೂಕಿನ ದದ್ದಲ್, ಸುಂಕೇಶ್ವರಹಾಳ ಗ್ರಾಮದಲ್ಲಿ ಏತನೀರಾವರಿ ಯೋಜನೆಗಾಗಿ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತು. ಪರಿಹಾರಕ್ಕಾಗಿ ನಿರಂತರವಾಗಿ ಹೋರಾಟ ಮಾಡುತ್ತಾ ಬರಲಾಗಿದೆ. ಆದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದ ಅನ್ವಯ ಸಹಾಯಕ ಆಯುಕ್ತರ ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡಲಾಗಿದೆ ಎಂದು ವಕೀಲರಾದ ಬಸಪ್ಪ, ಹುಲಿಗೆಪ್ಪ ಅವರು ತಿಳಿಸಿದರು.