ಸಾರಾಂಶ
- ಹುಣಸಗಿಯಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ । ಪೊಲೀಸ್ ವ್ಯವಸ್ಥೆ ವಿರುದ್ಧ ಮಲ್ಲಿಕಾರ್ಜುನ ಕ್ರಾಂತಿ ಆಕ್ರೋಶ
------ಕನ್ನಡಪ್ರಭ ವಾರ್ತೆ ಹುಣಸಗಿ
ರೇಪ್ ಕೇಸ್ ನೀಡಿದ್ದಾರೆಂದು ಆಕ್ರೋಶಗೊಂಡು ಗ್ರಾಮದಲ್ಲಿ ದಲಿತರಿಗೆ ಬಹಿಷ್ಕಾರ, ಕೊಡೇಕಲ್ ಠಾಣಾ ವ್ಯಾಪ್ತಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಯತ್ನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದರೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿ, ಬಸವೇಶ್ವರ ವೃತ್ತದಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ದಲಿತರ ಮೇಲೆ ನಿತ್ಯವೂ ಹಲವು ಘಟನೆಗಳು ನಡೆದುಕೊಂಡು ಬರುತ್ತಿರುವುದು ಹೊಸದೇನಲ್ಲ. ಆದರೂ ಕೆಲವೊಮ್ಮೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳ ಬಂಧಿಸುವಲ್ಲಿಯೂ ಪೊಲೀಸ್ ಅಧಿಕಾರಿಗಳು ವಿಳಂಬ ಅನುಸರಿಸುತ್ತಿರುವುದು ದುರ್ದೈವದ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊಡೇಕಲ್ ಠಾಣಾ ವ್ಯಾಪ್ತಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಯತ್ನದಡಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಇದು ಅನ್ಯಾಯವೇ ಆಗಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ದಲಿತರಿಗೆ ಬಹಿಷ್ಕಾರಕ್ಕೆ ಕುಮ್ಮಕ್ಕು ನೀಡಿದವರ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲು ವಿಳಂಬ ಮಾಡಲಾಗಿದೆ. ಅತ್ಯಾಚಾರಕ್ಕೆ ಒಳಗಾದ ಕುಟುಂಬಕ್ಕೆ ಶಾಶ್ವತ ಪರಿಹಾರ ವಿತರಿಸಬೇಕು. ನಿರ್ಲಕ್ಷ್ಯ ವಹಿಸಿದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದರು.ರಾಜ್ಯ ರೈತ ಸಂಘ(ಹಸಿರು ಸೇನೆ) ರಾಜ್ಯ ಮಹಿಳಾ ಉಪಾಧ್ಯಕ್ಷ ಮಹಾದೇವಿ ಬೇನಾಳಮಠ ಮಾತನಾಡಿ, ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಮೇಲೆ ಅತ್ಯಾಚಾರ ನಡೆಯುತ್ತಲೇ ಇವೆ. ಇಂತಹ ಘಟನೆಗಳನ್ನು ಮಟ್ಟಹಾಕಲು ಕಾನೂನಿನ ರಕ್ಷಣೆ ಜತೆಗೆ ಕಠಿಣ ಶಿಕ್ಷೆ ಆಗಬೇಕು. ಆರೋಪಿಗಳು ಯಾರಿದ್ದರೂ ಕಾನೂನಿನಡಿ ಬಂಧಿಸಬೇಕು ಎಂದು ಒತ್ತಾಯಿಸಿದರು.
ದಲಿತ ಯುವ ಮುಖಂಡ ಬಸವರಾಜ ಕಟ್ಟಿಮನಿ ಕಾಮನಟಗಿ ಮಾತನಾಡಿ, ಸಮಾಜದಲ್ಲಿ ಹೆಣ್ಣುಮಕ್ಕಳ ವಿಷಯದಲ್ಲಿ ಎಂದೂ ಕೂಡ ನಿರ್ಲಕ್ಷ್ಯ ವಹಿಸಬಾರದು. ಹೆಣ್ಣು ಈ ದೇಶ ಕಣ್ಣು. ಹೀಗಾಗಿ ಪೊಲೀಸ್ ಇಲಾಖೆ ಅಧಿಕಾರಿಗಳು ಅತ್ಯಾಚಾರ ಆರೋಪಿಗಳನ್ನು ಮುಲಾಜಿಲ್ಲದೆ ಕಸ್ಟಡಿಗೆ ತೆಗೆದುಕೊಳ್ಳಬೇಕು ಎಂದು ದೂರಿದರು.ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ಡಿವೈಎಸ್‌ಪಿ ಜಾವೀದ್ ಇನಾಮದಾರ್ ಅವರಿಗೆ ಸಲ್ಲಿಸಲಾಯಿತು. ನಿಂಗಣ್ಣ ಗೋನಾಲ, ಹುಲಗಪ್ಪ ಬೈಲಕುಂಟಿ, ಅಂಬ್ಲಪ್ಪ ಹಳ್ಳಿ, ಶಿವಪ್ಪ ಸದಬ, ನಂದಪ್ಪ ಪೀರಾಪುರ, ಭೀಮಣ್ಣ ತಳ್ಳಳಿ, ಕಾಶಿನಾಥ ಹಾದಿಮನಿ, ಪವಡೆಪ್ಪ ಮ್ಯಾಗೇರಿ, ಚನ್ನಪ್ಪ ತೀರ್ಥ, ಮಲ್ಲು ವಜ್ಜಲ್, ತಾಯಪ್ಪ ಕನ್ನೆಳ್ಳಿ, ನಾಗರಾಜ ಹೋಕಳಿ, ಮರೆಪ್ಪ ಕಾಂಗ್ರೆಸ್ ಕಕ್ಕೇರಾ, ನಾಗಪ್ಪ ಬೋಯಿ ಹುಣಸಗಿ, ಸಂಗಮೇಶ ಮಾಸ್ತರ್ ಕೊಡೇಕಲ್ ಸೇರಿದಂತೆ ಇತರರಿದ್ದರು.
-----23ವೈಡಿಆರ್13: ಅತ್ಯಾಚಾರ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಕೆಎಸ್ಡಿಎಸ್‌ಎಸ್ ವತಿಯಿಂದ ಸೋಮವಾರ ಹುಣಸಗಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಲಾಯಿತು.