ಸಾರಾಂಶ
ತುಮಕೂರು ಗ್ರಾಮಾಂತರ ಕ್ಷೇತ್ರದ ಬೆಳಗುಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದೂರು ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ವಿಫಲವಾಗಿರುವ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಯೋಗಾನಂದ್ ಅವರನ್ನು ಶಾಸಕ ಬಿ.ಸುರೇಶ್‌ಗೌಡರು ತರಾಟೆ ತೆಗೆದುಕೊಂಡರು.
ಕನ್ನಡಪ್ರಭ ವಾರ್ತೆ, ತುಮಕೂರು
ತುಮಕೂರು ಗ್ರಾಮಾಂತರ ಕ್ಷೇತ್ರದ ಬೆಳಗುಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದೂರು ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ವಿಫಲವಾಗಿರುವ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಯೋಗಾನಂದ್ ಅವರನ್ನು ಶಾಸಕ ಬಿ.ಸುರೇಶ್‌ಗೌಡರು ತರಾಟೆ ತೆಗೆದುಕೊಂಡರು.ಭಾನುವಾರ ಕುಂದೂರು ಗ್ರಾಮದಲ್ಲಿ ಮನೆಮನೆಗೆ ಕುಡಿಯುವ ನೀರು ಪೂರೈಸುವ ಜಲ ಜೀವನ್ ಮಿಷನ್ ಯೋಜನೆಯಡಿ 90 ಲಕ್ಷ ರೂ. ಅಂದಾಜು ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಶಾಸಕರು, ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿಗಳು ವಿಳಂಬವಾಗುತ್ತಿವೆ, ನಿಗಧಿತ ಅವಧಿಯಲ್ಲಿ ಪೂರ್ಣಗೊಳಿಸುತ್ತಿಲ್ಲ, ಈ ಬಗ್ಗೆ ಗ್ರಾಮಸ್ಥರಲ್ಲೂ ಆಕ್ಷೇಪಗಳು ವ್ಯಕ್ತವಾಗಿವೆ. ಯಾಕೆ ತಡ ಮಾಡುತ್ತೀರಿ, ಸಕಾಲದಲ್ಲಿ ಕಾಮಗಾರಿ ಮುಗಿಸಿ ಜನರಿಗೆ ಬೇಗ ಕುಡಿಯುವ ನೀರು ಕೊಡಬೇಕು ಎಂದು ಹೇಳಿದರು.
ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಲೇಬೇಕು, ಕಳಪೆ ಎಂಬುದು ಗೊತ್ತಾದರೆ ತಕ್ಕ ಪ್ರತಿಫಲ ಅನುಭವಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ ಶಾಸಕ ಸುರೇಶ್‌ಗೌಡರು, ನಿಗದಿತ ಅವಧಿಯಲ್ಲಿ ಗುಣಮಟ್ಟದ ಕೆಲಸ ಮಾಡಿದರೆ ಸರ್ಕಾರದ ಯೋಜನೆಗಳು ಫಲಪ್ರದವಾಗುತ್ತವೆ ಎಂದು ತಿಳಿಸಿದರು.ಈ ವೇಳೆ ಕುಂದೂರು ಗ್ರಾಮದಲ್ಲಿ ಎಲ್ಲೆಂದರಲ್ಲಿ ಕಸ ಬಿದ್ದಿರುವುದನ್ನು ಗಮನಿಸಿದ ಶಾಸಕರು, ಗ್ರಾಮ ಸ್ವಚ್ಛತೆ ನಿರ್ವಹಣೆಯಲ್ಲಿ ಪಿಡಿಓ ನಿರ್ಲಕ್ಷ್ಯತೆ ಮಾಡಿದ್ದಾರೆಂದು ಅವರನ್ನು ತರಾಟೆ ತೆಗೆದುಕೊಂಡರು. ಮಳೆಗಾಲದಲ್ಲಿ ರೋಗರುಜಿನ ಹರಡುವ ಭೀತಿ ಇರುವುದರಿಂದ ಗ್ರಾಮದ ನೈರ್ಮಲ್ಯತೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಬೆಳಗುಂಬ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಮ್ಮ ಚೌಡಪ್ಪ, ಪಿಡಿಒ ಯೋಗಾನಂದ್, ಮಾಜಿ ಅಧ್ಯಕ್ಷ ರಮೇಶ್, ರಂಗಧಾಮಯ್ಯ, ಸದಸ್ಯ ರಾಮಚಂದ್ರಪ್ಪ, ಮುಖಂಡರಾದ ನಾಗರಾಜು, ರಮೇಶ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೃಷ್ಣಕಾಂತ್, ಗುತ್ತಿಗೆದಾರ ಲಕ್ಷ್ಮಣ್ ಜಾದವ್ ಮೊದಲಾದವರು ಭಾಗವಹಿಸಿದ್ದರು.