ಸಿಸಿ ಕ್ಯಾಮೆರಾ ದೃಶ್ಯಾವಳಿ ನೀಡದೆ ಬೇಜವಾಬ್ದಾರಿ ತೋರಿದ ಕಾರಣಕ್ಕೆ ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿ ಬಿ.ಎಂ. ಶೋಭಾ ಅವರಿಗೆ ಕರ್ನಾಟಕ ಮಾಹಿತಿ ಹಕ್ಕು ಆಯೋಗವು 10 ಸಾವಿರ ರು. ದಂಡ ವಿಧಿಸಿ ಆದೇಶಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಿಸಿ ಕ್ಯಾಮೆರಾ ದೃಶ್ಯಾವಳಿ ನೀಡದೆ ಬೇಜವಾಬ್ದಾರಿ ತೋರಿದ ಕಾರಣಕ್ಕೆ ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿ ಬಿ.ಎಂ. ಶೋಭಾ ಅವರಿಗೆ ಕರ್ನಾಟಕ ಮಾಹಿತಿ ಹಕ್ಕು ಆಯೋಗವು 10 ಸಾವಿರ ರು. ದಂಡ ವಿಧಿಸಿ ಆದೇಶಿಸಿದೆ.

2023ರ ಅ.12 ರಂದು, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಬೆಂಗಳೂರು ಘಟಕದ ಉಪಾಧ್ಯಕ್ಷ ಶಿವರಾಮ್ ಅವರು, ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ಬಂದಿದ್ದು, ಅಲ್ಲಿ ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್‌ ಒಬ್ಬರಿಂದ ಕಚೇರಿ ಸಿಬ್ಬಂದಿಯೊಬ್ಬರು ಬಹಿರಂಗವಾಗಿ ಲಂಚ ಪಡೆದುಕೊಂಡಿದ್ದರು. ಈ ಬಗ್ಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷಕ್ಕೆ ದೂರು ಬಂದ ಹಿನ್ನೆಲೆಯಲ್ಲಿ ಇದರ ಕುರಿತು ಸಂಬಂಧಪಟ್ಟವರಿಗೆ ದೂರು ನೀಡಲು ಘಟನೆ ನಡೆದ ಕಮಿಷನರ್ ಕಚೇರಿಯ ಸ್ಥಳದ ಸಿಸಿ ಕ್ಯಾಮೆರಾದ ವಿಡಿಯೋವನ್ನು ನೀಡುವಂತೆ ಶ್ರೀರಾಮ್ ಅವರು, ಕಚೇರಿಯ ಮಾಹಿತಿ ಹಕ್ಕು ಅಧಿಕಾರಿಗೆ ಮನವಿ ಮಾಡಿದರೂ ಅವರು ಮಾಹಿತಿ ನೀಡದೆ ಬೇಜವಾಬ್ದಾರಿ ತೋರಿದ್ದರು ಎನ್ನಲಾಗಿದೆ. ಹೀಗಾಗಿ ಮಾಹಿತಿ ಹಕ್ಕು ಆಯೋಗವು ಆ ಅಧಿಕಾರಿಗೆ 10 ಸಾವಿರ ರು. ದಂಡ ವಿಧಿಸಿ ಆದೇಶ ಹೊರಡಿಸಿದೆ.

ಈ ಬಗ್ಗೆ ಪಕ್ಷದ ಕಾರ್ಯಾಧ್ಯಕ್ಷ ರಘು ಜಾಣಗೆರೆ ಪ್ರತಿಕ್ರಿಯಿಸಿ, ರಾಜ್ಯಾದ್ಯಂತ ಪೊಲೀಸ್ ಠಾಣೆಗಳಲ್ಲಿ ಭ್ರಷ್ಟಾಚಾರ ರಾಜಾರೋಷವಾಗಿ ನಡೆಯುತ್ತಿದೆ. ಇನ್ನೊಂದು ಕಡೆ ಪೊಲೀಸ್ ಠಾಣೆಗಳಲ್ಲೇ ಮಾನವ ಹಕ್ಕುಗಳ ಉಲ್ಲಂಘನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಸಂದರ್ಭದಲ್ಲಿ ಪೊಲೀಸ್ ಠಾಣೆಗಳಲ್ಲಿರುವ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಾರ್ವಜನಿಕರು ಆರ್‌ಟಿಐ ಮೂಲಕ ಪಡೆದುಕೊಳ್ಳಲು ಅವಕಾಶವಿದ್ದರೂ ಬೇಕಂತಲೇ ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಾರ್ವಜನಿಕರಿಗೆ ನೀಡುತ್ತಿಲ್ಲ. ಪೊಲೀಸ್ ಇಲಾಖೆಯಲ್ಲಿ ಕೆಳಗಿನಿಂದ ಮೇಲಿನವರೆಗೂ ಎಲ್ಲರೂ ಒಂದೇ ರೀತಿ ವರ್ತಿಸುತ್ತಿದ್ದಾರೆ ಎಂಬುದಕ್ಕೆ ಈ ಪ್ರಕರಣವೊಂದು ನಿದರ್ಶನವಾಗಿದೆ ಎಂದು ತಿಳಿಸಿದ್ದಾರೆ.