ಮಾಗಡಿ: ನನಗೆ ಮುಖ್ಯಮಂತ್ರಿಗಳು ಪೌರಾಡಳಿತ ಖಾತೆ ವಹಿಸಿದ್ದಾರೆ. ಈ ಇಲಾಖೆಯ ವ್ಯವಸ್ಥೆ ಸರಿಪಡಿಸಬೇಕಾದರೆ ಮೊದಲು ನನ್ನ ಸ್ವಕ್ಷೇತ್ರದಲ್ಲೇ ಬದಲಾವಣೆ ಕಾಣಬೇಕು. ನನ್ನ ಕ್ಷೇತ್ರದಲ್ಲೇ ಪರಿಸ್ಥಿತಿ ಸರಿ ಇಲ್ಲದಿದ್ದರೆ ಹೊರಗಡೆ ಹೋಗಿ ನಾನು ಬೇರೆಯವರಿಗೆ ಏನು ಹೇಳಲಿ ಎಂದು ಪೌರಾಡಳಿತ ಖಾತೆ ಸಚಿವ ಬಾಲಕೃಷ್ಣ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು

ಮಾಗಡಿ: ನನಗೆ ಮುಖ್ಯಮಂತ್ರಿಗಳು ಪೌರಾಡಳಿತ ಖಾತೆ ವಹಿಸಿದ್ದಾರೆ. ಈ ಇಲಾಖೆಯ ವ್ಯವಸ್ಥೆ ಸರಿಪಡಿಸಬೇಕಾದರೆ ಮೊದಲು ನನ್ನ ಸ್ವಕ್ಷೇತ್ರದಲ್ಲೇ ಬದಲಾವಣೆ ಕಾಣಬೇಕು. ನನ್ನ ಕ್ಷೇತ್ರದಲ್ಲೇ ಪರಿಸ್ಥಿತಿ ಸರಿ ಇಲ್ಲದಿದ್ದರೆ ಹೊರಗಡೆ ಹೋಗಿ ನಾನು ಬೇರೆಯವರಿಗೆ ಏನು ಹೇಳಲಿ ಎಂದು ಪೌರಾಡಳಿತ ಖಾತೆ ಸಚಿವ ಬಾಲಕೃಷ್ಣ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪುರಸಭೆಗೆ ಭಾನುವಾರ ಮುಂಜಾನೆ ದಿಢೀರ್ ಭೇಟಿ ನೀಡಿದ ಸಚಿವರು, ಕಚೇರಿಯ ಕಾರ್ಯವೈಖರಿ ಹಾಗೂ ಪಟ್ಟಣದ ನೈರ್ಮಲ್ಯ ನಿರ್ವಹಣೆ ಪರಿಶೀಲಿಸಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಸಚಿವರು, ದೂರುಗಳನ್ನು ಕೇಳಿಕೇಳಿ ಸಾಕಾಗಿದೆ. ಇಲ್ಲಿ ಕೂತು ಕೆಲಸ ಮಾಡದಿದ್ದರೆ ಬೇರೆ ಜಾಗ ಹುಡುಕಿಕೊಳ್ಳಿ. ಎಲ್ಲರಿಗೂ ಬೇರೆಡೆಗೆ ವರ್ಗಾವಣೆ ಮಾಡುತ್ತೇನೆ. ಸ್ಥಳೀಯರಿದ್ದೇವೆ ಎಂಬ ಕಾರಣಕ್ಕೆ ಕರ್ತವ್ಯ ಲೋಪವೆಸಗಿದರೆ ಸಹಿಸುವುದಿಲ್ಲ. ಒಂದು ತಿಂಗಳಲ್ಲಿ ಪುರಸಭೆಯ ವ್ಯವಸ್ಥೆ ಸರಿಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಶಿಸ್ತುಕ್ರಮ ಅನಿವಾರ್ಯ ಎಂದು ಸಿಬ್ಬಂದಿಗೆ ಎಚ್ಚರಿಕೆ ನೀಡಿದ ಸಚಿವರು, ಪಟ್ಟಣದ ಸ್ವಚ್ಛತೆ ಕುರಿತು ಪೌರಕಾರ್ಮಿಕರು ಹಾಗೂ ಸ್ಯಾನಿಟರಿ ಸಿಬ್ಬಂದಿಯಿಂದ ಮಾಹಿತಿ ಪಡೆದು, ಡೋರ್-ಟು-ಡೋರ್ ಕಸ ಸಂಗ್ರಹಣೆ ಕಟ್ಟುನಿಟ್ಟಾಗಿ ನಡೆಯಬೇಕು ಎಂದು ತಾಕೀತು ಮಾಡಿದರು.

ಕಸ ವಿಂಗಡಣೆ ಕಡ್ಡಾಯ:

ಪಟ್ಟಣದ ಸುಮಾರು ೮,೦೦೦ ಮನೆಗಳಿಗೂ ಒಣ, ಹಸಿ ಹಾಗೂ ವಿಶೇಷ ತ್ಯಾಜ್ಯ ವಿಂಗಡಣೆಗೆ ಬಕೆಟ್‌ಗಳನ್ನು ವಿತರಿಸಬೇಕು. ಸಾರ್ವಜನಿಕರು ಕಸವನ್ನು ಸರಿಯಾಗಿ ವಿಂಗಡಿಸಿ ನೀಡದಿದ್ದರೆ ಅವರ ಕಸವನ್ನು ಅವರ ಮನೆಯ ಮುಂದೆಯೇ ಬಿಟ್ಟುಬನ್ನಿ. ಕಸದ ವಾಹನ ಚಲಿಸುವಾಗ ಕೆಲವರು ಸಿಬ್ಬಂದಿ ಮೇಲೆ ಕಸ ಎಸೆಯುತ್ತಾರೆ ಎಂಬ ದೂರಿಗೆ ಪ್ರತಿಕ್ರಿಯಿಸಿದ ಸಚಿವರು, ಪೌರಕಾರ್ಮಿಕರಿಗೂ ಸಾರ್ವಜನಿಕರಂತೆಯೇ ಗೌರವವಿದೆ. ವಾಹನದ ಮೇಲೆ ಅಥವಾ ಸಿಬ್ಬಂದಿ ಮೇಲೆ ಕಸ ಎಸೆಯುವವರ ಫೋಟೋ ಸಮೇತ ದೂರು ದಾಖಲಿಸಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಬೆಳಗ್ಗೆ ವೇಳೆಗೆ ರಸ್ತೆಗಳನ್ನು ಗುಡಿಸಿ, ಬ್ಲಾಕ್ ಸ್ಪಾಟ್‌ಗಳನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು ಎಂದು ಆದೇಶಿಸಿದರು.

ತಾವರೆಕೆರೆ ಮಾಗಡಿ ಕೆಶಿಪ್ ರಸ್ತೆ ಕಾಮಗಾರಿ ವಿಳಂಬವಾಗಿರುವುದಕ್ಕೆ ಸಾರ್ವಜನಿಕರ ಆಕ್ರೋಶದ ಕುರಿತು ಉತ್ತರಿಸಿದ ಸಚಿವರು, ಹಿಂದೆ ಇದ್ದವರು ಭೂಸ್ವಾಧೀನ ಪ್ರಕ್ರಿಯೆ ಮತ್ತು ಜಾಗವನ್ನು ಸರಿಯಾದ ಸಮಯಕ್ಕೆ ಹಸ್ತಾಂತರಿಸದ ಕಾರಣ ಕಾಮಗಾರಿ ವಿಳಂಬವಾಯಿತು. ಗುತ್ತಿಗೆದಾರನೂ ಸಹ ಕಾಮಗಾರಿ ಮುಗಿಸದೆ ನಿರ್ಲಕ್ಷ್ಯ ವಹಿಸಿದ್ದಾನೆ. ಈಗಾಗಲೇ ಆತನಿಗೆ ನೋಟಿಸ್ ಜಾರಿ ಮಾಡಿದ್ದು, ಆ ಗುತ್ತಿಗೆಯನ್ನು ರದ್ದುಪಡಿಸಿ ಮರು ಟೆಂಡರ್ ಕರೆಯಲು ಸೂಚಿಸಲಾಗಿದೆ. ಮುಂದಿನ 6 ತಿಂಗಳಿಂದ ಒಂದು ವರ್ಷದೊಳಗೆ ಈ ರಸ್ತೆ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಪುರಸಭೆಯಲ್ಲಿ ಸಿವಿಲ್ ಇಂಜಿನಿಯರ್, ಆರೋಗ್ಯ ಮೇಲ್ವಿಚಾರಕರೂ ಸೇರಿದಂತೆ ಪ್ರಮುಖ ಹುದ್ದೆಗಳ ಕೊರತೆ ಬಗ್ಗೆ ಪ್ರಸ್ತಾಪಿಸಿದಾಗ, ರಾಜ್ಯದ ಎಲ್ಲಾ ಪುರಸಭೆಗಳಲ್ಲೂ ಕನಿಷ್ಠ ಒಬ್ಬ ಮುಖ್ಯ ಅಧಿಕಾರಿ, ಕಂದಾಯ ಅಧಿಕಾರಿ ಪರಿಸರ ಇಂಜಿನಿಯರ್ ಹಾಗೂ ಎಫ್‌ಡಿಎ, ಎಸ್‌ಡಿಎ ಸಿಬ್ಬಂದಿ ಕಡ್ಡಾಯವಾಗಿ ಇರುವಂತೆ ವ್ಯವಸ್ಥೆ ರೂಪಿಸಲಾಗುತ್ತಿದೆ. ಹೆಚ್ಚುವರಿ ಸಿಬ್ಬಂದಿ ಇರುವ ಕಡೆಯಿಂದ ಕೊರತೆ ಇರುವ ಕಡೆಗೆ ನಿಯೋಜನೆ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಕೆಂಪೇಗೌಡ ವೃತ್ತದ ಅಭಿವೃದ್ಧಿ ಕಾಮಗಾರಿ ಹಾಗೂ ಪ್ರಮುಖ ರಸ್ತೆ ವೃತ್ತಗಳಿಗೆ ಮಹನೀಯರ ಹೆಸರುಗಳನ್ನು ನಾಮಕರಣ ಮಾಡುವ ಬಗ್ಗೆ ಸ್ಥಳೀಯರ ಸಲಹೆಗಳನ್ನು ಸ್ವೀಕರಿಸಿ ಮುಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ಬಾಲಕೃಷ್ಣ ತಿಳಿಸಿದರು.

(ಫೋಟೊ ಕ್ಯಾಪ್ಷನ್‌)

ಮಾಗಡಿ ಪಟ್ಟಣದ ತರಕಾರಿ ಮಾರುಕಟ್ಟೆಗೆ ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ಭಾನುವಾರ ಬೆಳಗ್ಗೆ ಭೇಟಿ ನೀಡಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಪುರಸಭೆ ಅಧಿಕಾರಿಗಳು ಸಿಬ್ಬಂದಿ ಹಾಜರಿದ್ದರು.