ಜನಪ್ರತಿನಿಧಿಗಳು, ಸರ್ಕಾರದ ಉನ್ನತ ಅಧಿಕಾರಿಗಳು ಬೆಂಗಾವಲಿನಲ್ಲಿ ಇಲ್ಲಿನ ಮಹಾಬಲೇಶ್ವರ ಮಂದಿರಕ್ಕೆ ಬಂದು, ಜನಸಾಮಾನ್ಯರನ್ನ ತಡೆದು ನಿಲ್ಲಿಸಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ದಿ, ತಮ್ಮ ಕುಟುಂಬದ ಒಳಿತಿಗೆ ಪ್ರಾರ್ಥಿಸಿ ತೆರಳುತ್ತಾರೆ. ಆದರೆ ಪ್ರತಿ ಮಳೆಗಾಲದಲ್ಲಿ ಮಹಾಬಲನ ಆತ್ಮಲಿಂಗಕ್ಕೆ ಹೊಲಸು ನೀರು ನುಗ್ಗದಂತೆ ತಡೆಯವ ಕ್ರಮ ಏಕೆ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಗೋಕರ್ಣ

ತಮ್ಮ ಒಳಿತು ಬಯಸಿದಂತೆ ಭಗವಂತನ ಆಲಯವು ಶುಚಿಯಾಗಿ ಸರಿಯಾದ ರೀತಿಯಲ್ಲಿ ಇರುವಂತೆ ಆಗಲು ಏಕೆ ಪ್ರಯತ್ನಿಸುತ್ತಿಲ್ಲ, ತಮಗೆ ಸಂಕಷ್ಟ ಬಂದಾಗ, ಅಧಿಕಾರ ಬೇಕೆಂದಾಗ ದೇವರಲ್ಲಿ ಪ್ರಾರ್ಥಿಸುವವರು ದೇವಾಲಯದ ಅಭಿವೃದ್ದಿಗೆ ನಿರಾಸಕ್ತಿ ತೋರುತ್ತಿರುವುದು ಸರಿಯಲ್ಲ ಎನ್ನುವುದು ಜನರ ಅಭಿಪ್ರಾಯವಾಗಿದೆ.

ಏನು ಮಾಡಬಹುದಿತ್ತು?:

ಇಲ್ಲಿನ ವಿವಿಧೆಡೆ ಹಳ್ಳಗಳು ಒಂದಾಗಿ ಸೇರುವ ರಾಜಕಾಲುವೆ ಎಂದೇ ಕೆರೆಯುವ ಸಂಗಮ ನಾಲಾಕ್ಕೆ ಮಹಾಬಲೇಶ್ವರ ದೇವಾಲಯದ ಉತ್ತರ ದಿಕ್ಕಿನಿಂದ ಬರುವ ಸೋಮಸೂತ್ರ ತೀರ್ಥ ಬರುವ ಕಾಲುವೆ ಸೇರುತ್ತದೆ. ಐದಾರು ಕಿಮೀ ಹೆಚ್ಚು ವ್ಯಾಪ್ತಿಯಿಂದ ಬರುವ ಹಳ್ಳದ ಮಳೆ ನೀರು, ಚರಂಡಿಯ ಹೊಲಸು ನೀರು ಈ ಸ್ಥಳದಲ್ಲಿ ಸಂಗಮವಾಗುತ್ತದೆ. ಇಲ್ಲಿಂದ ಮುಂದೆ ಮುಖ್ಯಕಡಲತೀರದಲ್ಲಿ ಸಮುದ್ರ ಸೇರುತ್ತದೆ. ಮಳೆಗಾಲದಲ್ಲಿ ಸಮುದ್ರ ಅಬ್ಬರವಿದ್ದಾಗ ಮರಳಿನ ರಾಶಿ ಬಿದ್ದು ನೀರು ಒಳಬರದಂತೆ ತಡೆಯುವುದು ಒಂದಾದರೆ, ಇನ್ನೊಂದೆಡೆ ಭರತವಿದ್ದಾಗ ನೀರು ಅಲೆಯ ಅಬ್ಬರಕ್ಕೆ ವಾಪಸ್‌ ಬರುತ್ತದೆ. ಹೀಗೆ ನೀರು ನಾಲಾದಲ್ಲಿ ಸಂಗ್ರಹ ಹೆಚ್ಚಾಗಿ ಸೋಮಸೂತ್ರದ ಮೂಲಕ ಗರ್ಭಗುಡಿಗೆ ತುಂಬುತ್ತದೆ.

ಸಂಗಮ ನಾಲಾವನ್ನ ಹೂಳೆತ್ತಿ, ದೇವಾಲಯದ ತೀರ್ಥ ಸೇರುವಲ್ಲಿ ವೈಜ್ಞಾನಿಕ ರೀತಿಯಲ್ಲಿ ಜಂತ್ರಡ್ಡಿ ನಿರ್ಮಿಸಿ ಹೊರಗಿನ ನೀರು ನುಗ್ಗದಂತೆ ತಡೆಯುವ ಯೋಜನೆ ರೂಪಿಸಿ ಕಾರ್ಯಗತಗೊಳಿಸಬಹುದಿತ್ತು.

ಏನಾಗುತ್ತಿದೆ?:

ಸಂಗಮ ನಾಲಾ ಅಕ್ಕಪಕ್ಕ ಅನಧಿಕೃತ ಕಟ್ಟಡಗಳು, ವಸತಿ ಗೃಹಗಳು ತೆಲೆ ಎತ್ತಿವೆ. ಹಲವೆಡೆ ಹಳ್ಳವನ್ನ ಒತ್ತುವರಿ ಮಾಡಲಾಗಿದೆ. ಅಲ್ಲದೇ ಶೌಚಾಲಯದ ಹಾಗೂ ಇತರೆ ತ್ಯಾಜ್ಯದ ನೀರನ್ನ ನೇರವಾಗಿ ನಾಲಾಕ್ಕೆ ಬಿಡುತ್ತಿದ್ದಾರೆ. ತ್ಯಾಜ್ಯಗಳನ್ನ ಇಲ್ಲಿಯೇ ಎಸೆಯುತ್ತಿದ್ದಾರೆ. ಇಂತವರ ಮೇಲೆ ಕ್ರಮ ತೆಗೆದುಕೊಳ್ಳಬೇಕಾದ ಗ್ರಾಪಂ ಮಾಮೂಲಿ ಪಡೆದು ತೆಪ್ಪಗೆ ಕುಳಿತಿದೆ ಎಂಬ ಆರೋಪ ಕೇಳಿಬರುತ್ತಿದೆ. ಇದರಿಂದ ಜಗತ್ತಿನಲ್ಲಿಯೇ ಪರಶಿವನ ಆತ್ಮಲಿಂಗವಿರುವ ಏಕೈಕ ಸ್ಥಳವನ್ನ ಆಡಳಿತ ನಿರ್ಲಕ್ಷವೇ ಮಲೀನಗೊಳಿಸುವಂತಿದೆ.