ಎಂಎಸ್‌ಪಿ ಘೋಷಣೆ, ಸೇರಿದಂತೆ ವಿವಿಧ ಬೇಡಿಕೆ ಇಟ್ಟುಕೊಂಡು ಕಬ್ಬು ಬೆಳೆಗಾರರು ನಡೆಸುತ್ತಿದ್ದ ಹೋರಾಟಕ್ಕೆ ಸದ್ಯ ಬ್ರೇಕ್‌ ಬಿದ್ದಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೇತೃತ್ವದಲ್ಲಿ ನಡೆದ ಸಭೆಯು ರೈತರ ಮನವೊಲಿಸುವಲ್ಲಿ ಯಶಸ್ವಿಯಾಗಿದೆ.

ಹುಬ್ಬಳ್ಳಿ:

ಎಂಎಸ್‌ಪಿ ಘೋಷಣೆ, ಸೇರಿದಂತೆ ವಿವಿಧ ಬೇಡಿಕೆ ಇಟ್ಟುಕೊಂಡು ಕಬ್ಬು ಬೆಳೆಗಾರರು ನಡೆಸುತ್ತಿದ್ದ ಹೋರಾಟಕ್ಕೆ ಸದ್ಯ ಬ್ರೇಕ್‌ ಬಿದ್ದಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೇತೃತ್ವದಲ್ಲಿ ನಡೆದ ಸಭೆಯು ರೈತರ ಮನವೊಲಿಸುವಲ್ಲಿ ಯಶಸ್ವಿಯಾಗಿದೆ. ಈ ನಡುವೆ ಸದ್ಯಕ್ಕೆ ಹೋರಾಟವನ್ನು ಹಿಂಪಡೆದಿರುವ ಕಬ್ಬು ಬೆಳೆಗಾರರು ಬೇಡಿಕೆ ಈಡೇರಿಸಲು ನ.26ರ ವರೆಗೆ ಗಡವು ನೀಡಿದ್ದಾರೆ. ಅಷ್ಟರೊಳಗೆ ಬೇಡಿಕೆ ಈಡೇರದಿದ್ದಲ್ಲಿ ನ.27ರಂದು ಹುಬ್ಬಳ್ಳಿಯಲ್ಲಿ 1 ಕೋಟಿ ರೈತರೊಂದಿಗೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕಬ್ಬಿಗೆ ಎಂಎಸ್‌ಪಿ ಹೆಚ್ಚಳ ಮಾಡಬೇಕು. ಪ್ರತಿಟನ್‌ಗೆ ಕನಿಷ್ಠ ₹5500 ದರ ನಿಗದಿ ಪಡಿಸಬೇಕು. ಸ್ವಾಮಿನಾಥನ್‌ ಆಯೋಗ ಶಿಫಾರಸ್ಸು ಜಾರಿಗೊಳಿಸಬೇಕು ಸೇರಿದಂತೆ ಮತ್ತಿತರರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಳೆದ ಅ.13ರಂದು ಬರೋಬ್ಬರಿ 36 ಗಂಟೆ ರಾಜ್ಯದ ವಿವಿಧೆಡೆ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದ್ದರು. ಬಳಿಕ ಅ.14ರಿಂದ ಬೆಳಗಾವಿಯಿಂದ ಹುಬ್ಬಳ್ಳಿ ಚಲೋ ಪಾದಯಾತ್ರೆ ಆರಂಭಿಸಿದ್ದರು. ಹುಬ್ಬಳ್ಳಿಗೆ ಆಗಮಿಸಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನಿವಾಸದ ಎದುರು ಪ್ರತಿಭಟನೆ ನಡೆಸುವುದಾಗಿ ಘೋಷಿಸಿ, ಪಾದಯಾತ್ರೆ ನಡೆಸುತ್ತಿದ್ದರು.

ಸಂಧಾನ ಸಭೆ:

ಈ ನಡುವೆ ಯರಿಕೊಪ್ಪದ ಬಳಿ ಬೆಳಗಾವಿ, ಧಾರವಾಡ ಜಿಲ್ಲಾಧಿಕಾರಿಗಳು ರೈತರೊಂದಿಗೆ ಭಾನುವಾರ ಸಭೆ ನಡೆಸಿದ್ದರು. ಆದರೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಸಭೆ ನಡೆಸಿ ಭರವಸೆ ನೀಡಬೇಕು ಎಂದು ರೈತರು ಪಟ್ಟು ಹಿಡಿದಿದ್ದರು. ಅದರಂತೆ ಕೇಂದ್ರ ಸಚಿವ ಜೋಶಿ ನೇತೃತ್ವದಲ್ಲಿ ಭಾನುವಾರ ತಡರಾತ್ರಿ 1ರ ಸುಮಾರಿಗೆ ಹುಬ್ಬಳ್ಳಿ ಸರ್ಕ್ಯೂಟ್‌ ಹೌಸ್‌ನಲ್ಲಿ ಸಭೆ ನಡೆಯಿತು.

ಕಬ್ಬು ಬೆಳೆಗಾರರೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಿದ ಸಚಿವ ಜೋಶಿ ಅವರು, ಕಬ್ಬು ಬೆಳೆಗಾರರ ಸಮಸ್ಯೆ ಆಲಿಸಲು ಕೇಂದ್ರಕ್ಕೆ ವರದಿ ಕೊಡಲು ಕಮಿಟಿ ರಚಿಸಿಯಾಗಿದೆ. ಅದು ಶೀಘ್ರದಲ್ಲೇ ರಾಜ್ಯಕ್ಕೆ ಬರಲಿದೆ. ಜತೆಗೆ ಕಬ್ಬು ಬೆಳೆಯುವ ಎಲ್ಲ ರಾಜ್ಯಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಿದೆ. ಬಳಿಕ ಎಂಎಸ್‌ಪಿ ಸೇರಿದಂತೆ ರೈತರ ಬೇಡಿಕೆಗಳನ್ನು ಈಡೇರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕೇಂದ್ರದ ಮೋದಿ ನೇತೃತ್ವದ ಸರ್ಕಾರ ಯಾವಾಗಲೂ ರೈತರ ಪರವಾಗಿಯೇ ಇದೆ ಎಂದು ಭರವಸೆ ನೀಡಿದರು.

ಇದಕ್ಕೆ ಒಪ್ಪಿಕೊಂಡ ಕಬ್ಬು ಬೆಳೆಗಾರರು, ಈ ಬಗ್ಗೆ ರೈತರೊಂದಿಗೆ ಚರ್ಚಿಸಿ ಅಂತೀಮ ನಿರ್ಧಾರ ಪ್ರಕಟಿಸುವುದಾಗಿ ಘೋಷಿಸಿದರು. ಸಭೆಯಲ್ಲಿ ಮಾಜಿ ಸಿಎಂ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್‌, ಶಾಸಕರಾದ ಸಿ.ಸಿ.ಪಾಟೀಲ, ಮಹೇಶ ಟೆಂಗಿನಕಾಯಿ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಚೂನಪ್ಪ ಪೂಜಾರಿ, ಶಶಿಕಾಂತ ಗುರೂಜಿ, ರಾಜೇಂದ್ರ ಗಡದರಿ, ನಿತಿನ್ ಮ್ಯಾಗೇರಿ, ಪ್ರೇಮ್ ಚೌಗುಲಾ, ಮಹಾಲಿಂಗಪ್ಪ ತೇಲಿ, ಮಲ್ಲಪ್ಪ ಅಂಗಡಿ ಹಾಗೂ ಕಿಶನ್ ನಂದಿ ಮತ್ತಿತರರು ಇದ್ದರು.

ಸರ್ಕಾರಕ್ಕೆ ಗಡವು:

ಈ ನಡುವೆ ಕಬ್ಬು ಬೆಳೆಗಾರರು ಹೋರಾಟ ನಡೆಸುತ್ತಿರುವ ಧಾರವಾಡ ತಾಲೂಕಿನ ಯರಿಕೊಪ್ಪದ ಬಳಿ ಮತ್ತೆ ಸೋಮವಾರ ಬೆಳಿಗ್ಗೆ 11ರ ಸುಮಾರಿಗೆ ರೈತರು ಸಭೆ ನಡೆಸಿದರು. ಎಂಎಸ್‌ಪಿ ಘೋಷಣೆಗೆ ಕೇಂದ್ರ ಸಚಿವರು ಕಾಲಾವಕಾಶ ಕೇಳಿದ್ದಾರೆ. ಅವರ ಮಾತಿಗೆ ಬೆಲೆಕೊಟ್ಟು ಸದ್ಯಕ್ಕೆ ಪ್ರತಿಭಟನೆ ಹಿಂಪಡೆಯೋಣ. ನ.26ರವರೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಗಡುವು ನೀಡೋಣ ಎಂದು ರೈತ ಮುಖಂಡರು ತಿಳಿಸಿದರು.

ಇದರೊಂದಿಗೆ ಬೆಳಗಾವಿಯಲ್ಲಿ ನಾಲ್ಕೈದು ದಿನಗಳಲ್ಲಿ ಕಾರ್ಖಾನೆಯ ಮಾಲೀಕರ ಹಾಗೂ ರೈತರ ಮುಖಂಡರ ಸಭೆ ನಡೆಸಬೇಕು. ಸಕ್ಕರೆ ಕಾರ್ಖಾನೆಯಿಂದ ಯಾವುದೇ ಕಾರಣಕ್ಕೂ ಸಕ್ಕರೆ ಹೊರಗೆ ಹೋಗದಂತೆ ನೋಡಿಕೊಳ್ಳಬೇಕು. ನ.26ರೊಳಗೆ ಸಮಸ್ಯೆ ಬಗೆಹರಿಸದಿದ್ದಲ್ಲಿ ನ.27ರಂದು 1 ಕೋಟಿ ರೈತರನ್ನು ಸೇರಿಸಿ ಹುಬ್ಬಳ್ಳಿಯಲ್ಲಿ ಮತ್ತೆ ಹೋರಾಟ ಆರಂಭಿಸೋಣ ಎಂದು ಎಚ್ಚರಿಕೆಯನ್ನು ರೈತರ ಸಭೆಯಲ್ಲಿ ನೀಡಲಾಯಿತು.

ಅದರಂತೆ ಇದೀಗ ನ.26ರ ವರೆಗೆ ಗಡವು ನೀಡಿರುವ ರೈತರು, ಅಲ್ಲಿವರೆಗೂ ಕೇಂದ್ರ ನೇಮಿಸಿರುವ ಕಮಿಟಿ ಬರಬೇಕು. ಅದು ತನ್ನ ವರದಿಯನ್ನೂ ನೀಡಬೇಕು. ಜತೆಗೆ ಕೇಂದ್ರ ಸರ್ಕಾರ ಕೂಡ ಎಂಎಸ್‌ಪಿ ಘೋಷಣೆಯನ್ನು ಅಷ್ಟರೊಳಗೆ ಮಾಡಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಇದರಿಂದಾಗಿ ಸದ್ಯಕ್ಕಂತೂ ಕಬ್ಬು ಬೆಳೆಗಾರರ ಕಿಚ್ಚು ಶಾಂತವಾದಂತಾಗಿದೆ. ಇನ್ನು ನ.26ರೊಳಗೆ ಕ್ರಮವಾಗುತ್ತದೆಯೇ ಎಂಬುದನ್ನು ಕಾಯ್ದು ನೋಡಬೇಕಷ್ಟೇ.

ರೈತ ಮುಖಂಡರ ಜೊತೆ ಸೌಹಾರ್ದಯುತವಾಗಿ ಸಭೆ ನಡೆದಿದೆ. ಕೇಂದ್ರ ಸರ್ಕಾರ ಸಮಿತಿ ರಚನೆ ಮಾಡಿದ್ದು, ಅದು ರಾಜ್ಯಕ್ಕೆ ಭೇಟಿ ನೀಡಬೇಕೆಂದರೆ ಹೋರಾಟ ನಿಲ್ಲಿಸಬೇಕು ಎನ್ನುವ ಕುರಿತು ತಿಳಿಸಲಾಗಿದೆ. ಅದಕ್ಕೆ ರೈತ ಮುಖಂಡರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಶೀಘ್ರದಲ್ಲೇ ಸಮಿತಿ ಬಂದು ರೈತರ ಸಮಸ್ಯೆ ಆಲಿಸಲಿದೆ.ಪ್ರಹ್ಲಾದ ಜೋಶಿ, ಕೇಂದ್ರ ಸಚಿವ

ಎಂಎಸ್‌ಪಿ ಘೋಷಣೆ ಸೇರಿದಂತೆ ವಿವಿಧ ಸಮಸ್ಯೆ ಬಗೆಹರಿಸಲು ಕೇಂದ್ರ ಸಚಿವರು ಸಮಯ ಕೇಳಿದ್ದಾರೆ. ಅದರಂತೆ ಸದ್ಯಕ್ಕೆ ಹೋರಾಟ ಹಿಂಪಡೆದಿದ್ದೇವೆ. ನಮ್ಮ ಬೇಡಿಕೆ ಈಡೇರಿಸಲು ನ.26ರ ವರೆಗೆ ಗಡುವು ನೀಡಲಾಗಿದೆ. ಅಷ್ಟರಲ್ಲೇ ನಮ್ಮ ಬೇಡಿಕೆ ಈಡೇರಿಸಬೇಕು. ಬೇಡಿಕೆ ಈಡೇರದಿದ್ದಲ್ಲಿ ನ.27ರಂದು 1 ಕೋಟಿ ರೈತರೊಂದಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಮನೆಗೆ ಮುತ್ತಿಗೆ ಹಾಕುತ್ತೇವೆ.ಚೂನಪ್ಪ ಪೂಜಾರಿ, ಕಬ್ಬು ಹೋರಾಟಗಾರ