ನೇಹಾ, ಅಂಜಲಿ ಹತ್ಯೆ: ಸಿಐಡಿ ಡಿಜಿಪಿ ಸಲೀಂ ಭೇಟಿ

| Published : May 28 2024, 01:12 AM IST

ನೇಹಾ, ಅಂಜಲಿ ಹತ್ಯೆ: ಸಿಐಡಿ ಡಿಜಿಪಿ ಸಲೀಂ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ನೇಹಾ ಹಾಗೂ ಅಂಜಲಿ ಎರಡೂ ಪ್ರಕರಣ ತೀವ್ರ ಗಂಭೀರ ಸ್ವರೂಪದ್ದಾಗಿದ್ದು, ಪ್ರಕರಣದ ತಾರ್ಕಿಕ ಅಂತ್ಯಕ್ಕೆ ಸಾಕ್ಷ್ಯಧಾರ ಮತ್ತು ಸಾಕ್ಷಿಗಳ ಹೇಳಿಕೆ ಮುಖ್ಯವಾಗಿರುತ್ತದೆ. ಹಾಗಾಗಿ ಅಂಜಲಿ ಕೊಲೆಗೆ ಬಳಸಿದ ಚಾಕುವಿನ ಮಾಹಿತಿ ಪಡೆದು, ಅದನ್ನು ಪತ್ತೆ ಹಚ್ಚಬೇಕು ಎಂದು ಸಿಐಡಿ ಡಿಜಿಪಿ ಸಲೀಂ ಅಧಿಕಾರಿಗಳಿಗೆ ಹೇಳಿದ್ದಾರೆ.

ಹುಬ್ಬಳ್ಳಿ:

ಅಂಜಲಿ ಅಂಬಿಗೇರ ಹಾಗೂ ನೇಹಾ ಹಿರೇಮಠ ಹತ್ಯೆ ಪ್ರಕರಣದ ತನಿಖಾ ಹಂತ ಮತ್ತು ತನಿಖೆಯಲ್ಲಿ ಆದ ಪ್ರಗತಿ ಕುರಿತು ಸಿಐಡಿ ಡಿಜಿಪಿ ಡಾ. ಎಂ.ಎ. ಸಲೀಂ ಸೋಮವಾರ ಪರಿಶೀಲನೆ ನಡೆಸಿದರು. ಜತೆಗೆ ತನಿಖೆಗೆ ಪೂರಕವಾಗಿ ಕೆಲ ಸೂಚನೆ ನೀಡಿದ್ದಾರೆ. ಅಂಜಲಿ ಅಂಬಿಗೇರ ಮನೆಗೂ ಭೇಟಿ ನೀಡಿದ್ದರು.

ನಗರಕ್ಕೆ ಸಂಜೆ ಆಗಮಿಸಿದ ಡಿಐಜಿ ಡಾ. ಎಂ.ಎ. ಸಲೀಂ, ಪ್ರವಾಸಿ ಮಂದಿರಕ್ಕೆ ತೆರಳಿ ಅಲ್ಲಿ ಸಿಐಡಿ ಎಸ್ಪಿ ವೆಂಕಟೇಶ ನೇತೃತ್ವದ ತಂಡದೊಂದಿಗೆ ಬರೋಬ್ಬರಿ ಎರಡು ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿದರು.

ಈ ವೇಳೆ ಎರಡು ಪ್ರಕರಣದ ತನಿಖೆಯ ಪ್ರಗತಿ ಕುರಿತು ಮೇಲ್ವಿಚಾರಣೆ ಜತೆಗೆ ಪೂರಕ ಮಾಹಿತಿ ಪಡೆದುಕೊಂಡರು. ನಂತರದ ಅಗತ್ಯ ಸಾಕ್ಷ್ಯಾಧಾರ ಸಂಗ್ರಹಿಸುವ ಕುರಿತು ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಿದರು ಎಂದು ಹೇಳಲಾಗಿದೆ.

ಎರಡೂ ಪ್ರಕರಣ ತೀವ್ರ ಗಂಭೀರ ಸ್ವರೂಪದ್ದಾಗಿದ್ದು, ಪ್ರಕರಣದ ತಾರ್ಕಿಕ ಅಂತ್ಯಕ್ಕೆ ಸಾಕ್ಷ್ಯಧಾರ ಮತ್ತು ಸಾಕ್ಷಿಗಳ ಹೇಳಿಕೆ ಮುಖ್ಯವಾಗಿರುತ್ತದೆ. ಹಾಗಾಗಿ ಅಂಜಲಿ ಕೊಲೆಗೆ ಬಳಸಿದ ಚಾಕುವಿನ ಮಾಹಿತಿ ಪಡೆದು, ಅದನ್ನು ಪತ್ತೆ ಹಚ್ಚಬೇಕು. ಸ್ಥಳೀಯ ಪೊಲೀಸರ ಸಹಾಯ ಪಡೆದು, ಆರೋಪಿಯಿಂದ ಅಗತ್ಯ ಮಾಹಿತಿ ಕಲೆಹಾಕಬೇಕು ಎಂದು ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣದ ತನಿಖೆ ಬಹುತೇಕ ಪೂರ್ಣಗೊಂಡಿದ್ದು, ದಾಖಲೆಗಳ ಕ್ರೋಡೀಕರಣ ಹಾಗೂ ದೋಷಾರೋಪಣೆ ಪಟ್ಟಿಸಿದ್ಧಪಡಿಸಲಾಗುತ್ತಿದೆ ಎಂದು ಸಿಐಡಿ ತನಿಖಾ ತಂಡ ಡಿಜಿಪಿಗೆ ಮಾಹಿತಿ ನೀಡಿತು. ಅಲ್ಲದೇ, ತನಿಖೆಯ ಬೆಳವಣಿಗೆಯ ಕುರಿತು ಸಮಗ್ರವಾದ ಕಡತವನ್ನು ಸಿಐಡಿ ಡಿಜಿಪಿಗೆ ಹಸ್ತಾಂತರಿಸಿತು ಎಂದು ಮೂಲಗಳು ತಿಳಿಸಿವೆ.

ಅಂಜಲಿ ಅಂಬಿಗೇರ ಕೊಲೆ ಪ್ರಕರಣದ ಆರೋಪಿ ಅಪರಾಧ ಕೃತ್ಯದ ಹಿನ್ನೆಲೆ ಹೊಂದಿರುವ ಕಾರಣ ವಿಚಾರಣೆ ಸಂದರ್ಭದಲ್ಲಿ ಪದೇ ಪದೆ ತನ್ನ ಹೇಳಿಕೆ ಬದಲಿಸುತ್ತಿದ್ದಾನೆ. ಹೀಗಾಗಿ ಕೊಲೆಗೆ ಬಳಸಿದ ಚಾಕು ಇನ್ನೂ ಪತ್ತೆಯಾಗಿಲ್ಲ. ಆತ ನೀಡಿದ ಮಾಹಿತಿ ಅನುಸಾರ ವೀರಾಪೂರ ಓಣಿಯಲ್ಲಿ ಚಾಕು ಹುಡುಕಿದರೂ, ಪತ್ತೆಯಾಗಿಲ್ಲ ಎಂಬ ಮಾಹಿತಿ ಅಧಿಕಾರಿಗಳು ಡಿಜಿಪಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಆರೋಪಿಯು ಕೊಲೆಗೆ ಬಳಸಿದ ಚಾಕುವಿನ ಬಗ್ಗೆಯೂ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ದಾವಣಗೆರೆಯ ಮಾಯಕೊಂಡ ರೈಲು ನಿಲ್ದಾಣದ ಬಳಿ ರೈಲಿನಲ್ಲಿ ಮಹಿಳೆಗೆ ಹಲ್ಲೆ ನಡೆಸಲು ಬಳಸಿದ ಚಾಕುವಿನ ಬಗ್ಗೆಯೂ ಮಾಹಿತಿ ಸರಿಯಾಗಿ ನೀಡುತ್ತಿಲ್ಲ. ಎರಡೂ ಕೃತ್ಯಕ್ಕೆ ಒಂದೇ ಚಾಕು ಬಳಸಿದ್ದನೇ ಅಥವಾ ಹಲ್ಲೆಗೆ ಬೇರೆ ಆಯುಧ ಬಳಸಿದ್ದಾನೆಯೇ ಎನ್ನುವ ಮಾಹಿತಿ ಸ್ಪಷ್ಟವಾಗುತ್ತಿಲ್ಲ. ಹೀಗಾಗಿ ಭಾನುವಾರಷ್ಟೇ ಮಾಯಕೊಂಡ ರೈಲು ನಿಲ್ದಾಣದ ಬಳಿ ಆರೋಪಿಯಿಂದ ಹಲ್ಲೆಗೊಳಗಾಗಿದ್ದ ಮಹಿಳೆಯನ್ನು ಕರೆದು ವಿಚಾರಣೆ ಮಾಡಲಾಗಿದೆ. ಚಾಕು ಪತ್ತೆ ಹಂತದಲ್ಲಿ ಎರಡು ಬಗೆಯಲ್ಲಿ ತನಿಖೆ ಮುಂದುವರಿದೆ ಎಂದು ತಿಳಿಸಿದ್ದಾರೆನ್ನಲಾಗಿದೆ.

ಎರಡೂ ಪ್ರಕರಣದ ತನಿಖೆ ತಂಡದಿಂದ ತ್ವರಿತವಾಗಿ ನಡೆಯಬೇಕು. ಸಂಗ್ರಹಿಸಿರುವ ಸಾಕ್ಷ್ಯ ಹಾಗೂ ಸಾಕ್ಷಿಗಳು ನಿಖರವಾಗಿರಬೇಕು. ಸಾಕ್ಷಿಗಳ ಹೇಳಿಕೆಯನ್ನು ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಬೇಕು. ಅಗತ್ಯ ಬಿದ್ದರೆ ಮತ್ತೊಮ್ಮೆ ಎಲ್ಲ ಸಾಕ್ಷಿಗಳನ್ನು ಭೇಟಿ ಮಾಡಿ, ಮಾಹಿತಿ ಸಂಗ್ರಹಿಸಲು ಮುಂದಾಗಬೇಕು. ಕೋರ್ಟ್‌ಗೆ ಸಲ್ಲಿಸುವ ಸಾಕ್ಷ್ಯಗಳು ನಿಖರವಾಗಿದ್ದರೆ ಮಾತ್ರ, ಅಪರಾಧಿಗೆ ಶಿಕ್ಷೆ ಆಗಲು ಸಾಧ್ಯ. ಈ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ಸಾಕ್ಷ್ಯ ಸಂಗ್ರಹಿಸುವ ಜತೆಗೆ ಎಲ್ಲ ಆಯಾಮದಲ್ಲಿಯೂ ತನಿಖೆ ನಡೆಸಿ ಸೂಕ್ತ ಮತ್ತು ನಿಖರ ಸಾಕ್ಷ್ಯಾಧಾರ ಕಲೆ ಹಾಕಬೇಕೆಂದು ಸಿಐಡಿ ಡಿಜಿಪಿ ಡಾ. ಎಂ.ಎ. ಸಲೀಂ ಸಿಐಡಿ ತಂಡಕ್ಕೆ ಸಲಹೆ ನೀಡಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಡಿಐಜಿ ಆರೋಪಿಯನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಅಂಜಲಿ ಹತ್ಯೆ ಪ್ರಕರಣದ ಆರೋಪಿ ಗಿರೀಶ ಸಾವಂತನನ್ನು ಪ್ರವಾಸಿ ಮಂದಿರಕ್ಕೆ ಕರೆತಂದಿದ್ದರು. ಆದರೆ ಡಿಐಜಿ ಅವರು ಆರೋಪಿಯನ್ನು ವಿಚಾರಣೆ ಮಾಡಲಿಲ್ಲ. ಈ ವಿಚಾರದಲ್ಲಿ ಆರೋಪಿಯ ಹೇಳಿಕೆಯಲ್ಲಿ ಆಗುತ್ತಿರುವ ಬದಲಾವಣೆಯನ್ನು ಸೂಕ್ಷ್ಮವಾಗಿ ಗಮನಿಸಿ ಆರೋಪಿಯಿಂದ ಸೂಕ್ತ ಹೇಳಿಕೆ ದಾಖಲಿಸಬೇಕು ಎಂದು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಅಂಜಲಿ ಮನೆಗೆ ಭೇಟಿ:

ಪ್ರವಾಸಿ ಮಂದಿರದಲ್ಲಿ ಸಭೆ ಬಳಿಕ ಸಿಐಡಿ ಡಿಜಿಪಿ, ಅಂಜಲಿ ಅಂಬಿಗೇರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಗೌಪ್ಯವಾಗಿ ಕುಟುಂಬಸ್ಥರೊಂದಿಗೆ ಚರ್ಚಿಸಿದ ಅವರು, ಕೊಲೆ ನಡೆದ ದಿನದಂದು ಬಾಗಿಲು ತೆರೆದವರು ಯಾರು? ಘಟನೆ ಯಾವ ರೀತಿ ನಡೆಯಿತು? ಎಂಬಿತ್ಯಾದಿ ಅಂಶಗಳ ಕುರಿತು ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಸಿಐಡಿ ಎಸ್ಪಿ ವೆಂಕಟೇಶ, ಎಸಿಪಿ ಶಿವಪ್ರಕಾಶ ನಾಯ್ಕ ಸೇರಿದಂತೆ ಇತರರು ಇದ್ದರು.ಇಂದು ನೇಹಾ ನಿವಾಸಕ್ಕೆ ಭೇಟಿ?

ನೇಹಾ ಮತ್ತು ಅಂಜಲಿ ಹತ್ಯೆ ಪ್ರಕರಣದ ತನಿಖೆಯ ಮೇಲ್ವಿಚಾರಣೆಗೆ ಆಗಮಿಸಿರುವ ಸಿಐಡಿ ಡಿಜಿಪಿ ಡಾ. ಎಂ.ಎ. ಸಲೀಂ, ಸೋಮವಾರ ಹುಬ್ಬಳ್ಳಿಲ್ಲೇ ವಾಸ್ತವ್ಯ ಮಾಡಿದ್ದಾರೆ. ಹೀಗಾಗಿ ಮಂಗಳವಾರ ನೇಹಾ ಹಿರೇಮಠ ಹಾಗೂ ಬೆಂಡಿಗೇರಿ ಪೊಲೀಸ್‌ ಠಾಣೆಗೆ ಭೇಟಿ ನೀಡಿ ಇನ್ನಷ್ಟುಮಾಹಿತಿ ಪಡೆದು ಅಧಿಕಾರಿಗಳಿಗೆ ಮತ್ತಷ್ಟು ಸಲಹೆ ಸೂಚನೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.ನಮಗೆ ಧೈರ್ಯ ತುಂಬಿದರು

ಮನೆಗೆ ಬಂದಿದ್ದ ಸಿಐಡಿ ಅಧಿಕಾರಿಗಳು ನಮಗೆ ಧೈರ್ಯ ತುಂಬಿದರು. ನ್ಯಾಯ ಕೊಡಿಸುವ ಭರವಸೆ ನೀಡಿದರು. ಕೊಲೆ ನಡೆದ ದಿನ ಏನಾಯ್ತು ಎಂಬ ಮಾಹಿತಿ ಪಡೆದರು ಎಂದು ಅಂಜಲಿ ಸಹೋದರಿ ಸಂಜನಾ ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರೋಪಿಗೆ ಕಠಿಣ ಶಿಕ್ಷೆಯಾಗಬೇಕೆಂದು ನಾವು ಒತ್ತಾಯಿಸಿದೆವು. ಅದಕ್ಕೆ ಖಂಡಿತ ಶಿಕ್ಷೆಯಾಗುತ್ತದೆ ಎಂದು ಭರವಸೆ ನೀಡಿದರು.