ಬೆಳಗಾವಿಯಲ್ಲಿ ಕಾಂಗ್ರೆಸ್‌ ಬೆಂಬಲಿಸಿದ ನೇಹಾ ತಂದೆ!

| Published : May 03 2024, 01:07 AM IST

ಸಾರಾಂಶ

ನಮ್ಮ ಕಷ್ಟ ಕಾಲದಲ್ಲಿ ಪಕ್ಷಭೇದ ಮರೆತು, ಜಾತಿ ಭೇದ ಮರೆತು ಎಲ್ಲರೂ ನಮ್ಮ ನೆರವಿಗೆ ನಿಂತಿದ್ದಾರೆ. ಈ ಘಟನೆಯನ್ನು ರಾಜಕೀಯಕ್ಕೆ ಬಳಸಬಾರದೆಂದು ನಾನು ಮನವಿ ಮಾಡಿದ್ದೆ. ಆದರೆ ಕೆಲವರು ನನ್ನ ಮಗಳ ಹತ್ಯೆ ಪ್ರಕರಣವನ್ನು ತಮ್ಮ ರಾಜಕೀಯಕ್ಕೆ ಬಳಸುತ್ತಿರುವುದಕ್ಕೆ ಬೇಸರವಾಗಿದೆ.

ಹುಬ್ಬಳ್ಳಿ:

ಮಗಳ ಹತ್ಯೆಯಾದಾಗ ಮನೆಗೆ ಬಂದು ಸಾಂತ್ವನ ಹೇಳಿದ್ದಕ್ಕೆ ನೇಹಾ ಹಿರೇಮಠ ತಂದೆ-ತಾಯಿ ಇಬ್ಬರು ಬೆಳಗಾವಿಯಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಮನೆಗೆ ತೆರಳಿ ಧನ್ಯವಾದ ಹೇಳಿದರು. ಇದೇ ವೇಳೆ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಮೃಣಾಲ್‌ ಹೆಬ್ಬಾಳ್ಕರ್‌ಗೆ ಬೆಳಗಾವಿ ಜನತೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ನೇಹಾ ತಂದೆ ನಿರಂಜನ ಹಾಗೂ ತಾಯಿ ಗೀತಾ ಇಬ್ಬರು ಗುರುವಾರ ಸಂಜೆ ಬೆಳಗಾವಿಗೆ ತೆರಳಿ ಲಕ್ಷ್ಮಿ ಹೆಬ್ಬಾಳ್ಕರ್‌ ಮನೆಗೆ ಹೋಗಿ ಕೃತಜ್ಞತೆ ಸಲ್ಲಿಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ನಿರಂಜನ ಹಿರೇಮಠ, ನಮ್ಮ ಕಷ್ಟ ಕಾಲದಲ್ಲಿ ತಮ್ಮೆಲ್ಲ ಕೆಲಸ ಬಿಟ್ಟು, ಸುರಿಯುತ್ತಿದ್ದ ಮಳೆ ಲೆಕ್ಕಿಸದೇ ಲಕ್ಷ್ಮೀ ಹೆಬ್ಬಾಳ್ಕರ್‌ ನಮ್ಮ ಮನೆಗೆ ಬಂದು ನಮ್ಮ ದುಃಖದಲ್ಲಿ ಭಾಗಿಯಾದರು. ನಮಗೆ ಭದ್ರತೆ ಒದಗಿಸುವ, ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವ ಮತ್ತು ಪ್ರಕರಣದ ತನಿಖೆಗೆ ತ್ವರಿತಗತಿ ನ್ಯಾಯಾಲಯ ಸ್ಥಾಪನೆ ಮಾಡುವ ಕೆಲಸ ಮಾಡಿದರು. ಹಾಗಾಗಿ ಅವರಿಗೆ ಕೃತಜ್ಞತೆ ಸಲ್ಲಿಸಬೇಕೆಂದು ನಾವು ಇಲ್ಲಿಯವರೆಗೂ ಬಂದಿದ್ದೇವೆ ಎಂದು ತಿಳಿಸಿದರು.

ನಮ್ಮ ಕಷ್ಟ ಕಾಲದಲ್ಲಿ ಪಕ್ಷಭೇದ ಮರೆತು, ಜಾತಿ ಭೇದ ಮರೆತು ಎಲ್ಲರೂ ನಮ್ಮ ನೆರವಿಗೆ ನಿಂತಿದ್ದಾರೆ. ಈ ಘಟನೆಯನ್ನು ರಾಜಕೀಯಕ್ಕೆ ಬಳಸಬಾರದೆಂದು ನಾನು ಮನವಿ ಮಾಡಿದ್ದೆ. ಆದರೆ ಕೆಲವರು ನನ್ನ ಮಗಳ ಹತ್ಯೆ ಪ್ರಕರಣವನ್ನು ತಮ್ಮ ರಾಜಕೀಯಕ್ಕೆ ಬಳಸುತ್ತಿರುವುದಕ್ಕೆ ಬೇಸರವಾಗಿದೆ. ಆದರೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಯಾವ ಸ್ವಾರ್ಥವಿಲ್ಲದೆ ತಮ್ಮದೇ ಮಗಳು ಎನ್ನುವಂತೆ ಬಂದು ನಮ್ಮೊಂದಿಗೆ ನಿಂತಿದ್ದಾರೆ ಎಂದರು.

ಮೃಣಾಲ್ ಬೆಂಬಲಿಸಿ:

ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಮೃಣಾಲ ಹೆಬ್ಬಾಳ್ಕರ್‌ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದ ನಿರಂಜನ, ಇಂತಹ ಯುವ ಸಂಸದರಿದ್ದರೆ ಹೆಣ್ಣು ಮಕ್ಕಳಿಗೆ ಅನ್ಯಾಯವಾದಾಗ ಧ್ವನಿ ಎತ್ತುತ್ತಾರೆ. ನಮಗೆ ನ್ಯಾಯ ಒದಗಿಸುತ್ತಾರೆ. ಹಾಗಾಗಿ ಸಮಾಜದ ಎಲ್ಲರೂ ಅವರನ್ನು ಬೆಂಬಲಿಸಬೇಕು ಎಂದು ಕೈ ಮುಗಿದು ಮನವಿ ಮಾಡುತ್ತೇನೆ ಎಂದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಈ ಸಂದರ್ಭದಲ್ಲಿ ಇದ್ದರು.