ಸಾರಾಂಶ
ಹುಬ್ಬಳ್ಳಿ:
ಹಾಡಹಗಲೇ ಕಾಲೇಜು ಕ್ಯಾಂಪಸ್ನಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠಳನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದ ಆರೋಪಿ ಫಯಾಜ್ ನಾಯ್ಕನನ್ನು ಪಿಸಿ ಜಾಬೀನ್ ಸೈನ್ಸ್ ಕಾಲೇಜಿನಿಂದ ಅಮಾನತುಗೊಳಿಸಿ ಶುಕ್ರವಾರ ಆದೇಶ ಹೊರಡಿಸಲಾಗಿದೆ.ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ್ದ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣದ ಆರೋಪಿ ಫಯಾಜ್ ನಾಯ್ಕ ಜಾಬಿನ್ ಕಾಲೇಜಿನಲ್ಲಿ ಬಿಸಿಎ ಓದುತ್ತಿದ್ದ. ಆತ ಹತ್ಯೆಗೈದು ಜೈಲು ಸೇರಿದ್ದರೂ ಆತನ ನೋಂದಣಿ, ದಾಖಲಾತಿ ಕಾಲೇಜು ಈ ವರೆಗೂ ಮುಂದುವರಿಸಿತ್ತು. ಈ ಮಾಹಿತಿ ತಿಳಿದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಶುಕ್ರವಾರ ಕಾಲೇಜಿಗೆ ಭೇಟಿ ನೀಡಿ ಪ್ರಿನ್ಸಿಪಾಲ್ ಅವರಿಗೆ ಘೇರಾವ್ ಹಾಕಿ ತೀವ್ರ ತರಾಟೆಗೆ ತೆಗೆದುಕೊಂಡರು. ಕೊಲೆಗಡುಕನಿಗೆ ಶಿಕ್ಷಣದಲ್ಲಿ ಮುಂದುವರಿಯುವ ಯಾವ ಅರ್ಹತೆ ಇಲ್ಲ. ಆದರೆ, ಘಟನೆ ನಡೆದ ತತ್ಕ್ಷಣದಲ್ಲಿಯೇ ಆತನನ್ನು ವಜಾಗೊಳಿಸಿದ್ದರೆ, ಕಾಲೇಜಿನ ಕೀರ್ತಿ ಮತ್ತಷ್ಟು ಹೆಚ್ಚುತ್ತಿತ್ತು. ಕಾಲೇಜಿನ ಈ ಕ್ರಮ ಖಂಡನೀಯವಾಗಿದ್ದು, ಈ ಕೂಡಲೇ ಆರೋಪಿಯನ್ನು ಕಾಲೇಜಿನಿಂದ ಅಮಾನತುಗೊಳಿಸಬೇಕೆಂದು ಒತ್ತಾಯಿಸಿದರು.
ಇದರ ಬೆನ್ನಲ್ಲೆ ಎಚ್ಚೆತ್ತ ಪಿ.ಸಿ. ಜಾಬೀನ್ ಸೈನ್ಸ್ ಕಾಲೇಜಿನ ಪ್ರಿನ್ಸಿಪಾಲರು ಶುಕ್ರವಾರ ಆರೋಪಿ ಫಯಾಜ್ ನಾಯ್ಕನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ವಿಷಯವನ್ನು ಬಳಿಕ ಮಾಧ್ಯಮಗಳಿಗೆ ಮುತಾಲಿಕ ತಿಳಿಸಿದರು. ಫಯಾಜ್ ಬಿಸಿಎ ಪರೀಕ್ಷೆಯಲ್ಲಿ ಕೆಲ ವಿಷಯಗಳಲ್ಲಿ ಫೇಲ್ ಆಗಿದ್ದ. ಈಗ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶವಿಲ್ಲದಂತಾಗಿದೆ.ಈ ವೇಳೆ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಅಣ್ಣಪ್ಪ ದೇವಟಗಿ, ಉಪಾಧ್ಯಕ್ಷ ಗುಣಧರ ದಡೋತಿ, ಬಸು ದುರ್ಗದ, ಪ್ರವೀಣ ಮಾಳದಕರ ಸೇರಿದಂತೆ ಇತರರು ಇದ್ದರು.