ಸಾರಾಂಶ
ಕನ್ನಡಪ್ರಭ ವಾರ್ತೆ ಕಂಪ್ಲಿ
ನೇಹಾ ಹಿರೇಮಠ ಹತ್ಯೆ ಪ್ರಕಾರಣವನ್ನು ಸರ್ಕಾರ (ಎನ್ ಐ ಎ) ರಾಷ್ಟೀಯ ತನಿಖಾ ದಳಕ್ಕೆ ಒಪ್ಪಿಸಬೇಕು ಎಂದು ವಿಜಯ ಕರುನಾಡ ರಕ್ಷಣಾ ವೇದಿಕೆಯ ರಾಜ್ಯ ಕಾರ್ಯಾಧ್ಯಕ್ಷ ಬಿ. ವಿರೂಪಾಕ್ಷಿ ಯಾದವ್ ಅಗ್ರಹಿಸಿದರು.ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ವಿಜಯ ಕರುನಾಡ ರಕ್ಷಣಾ ವೇದಿಕೆಯ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು
ನೇಹಾ ಹಿರೇಮಠ ಎಂಬ ಅಮಾಯಕ ವಿದ್ಯಾರ್ಥಿನಿಯನ್ನು ಫಯಾಜ್ ಎಂಬ ಸಮಾಜಘಾತುಕ ವ್ಯಕ್ತಿ ಕಾಲೇಜಿನಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದು ಇಡೀ ಸಮಾಜವೆ ತಲೆ ತಗ್ಗಿಸುವಂತಾಗಿದೆ. ಈ ತರಹದ ಘಟನೆಗಳಿಂದಾಗಿ ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿ ಫಯಾಜ್ ಹಾಗೂ ಈ ಹತ್ಯೆಗೆ ಸಹಕರಿಸಿದ ಸಹಚರರಿಗೂ ಗಲ್ಲು ಶಿಕ್ಷೆ ನೀಡಬೇಕು. ಅಲ್ಲದೇ ಈ ತರಹದ ಕೃತ್ಯಗಳು ಮರುಕಳಿಸದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಬಳಿಕ ಈ ಕುರಿತು ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಶಿವರಾಜ್ ಶಿವಪುರ ಅವರಿಗೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಕರುನಾಡ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಬಿ. ಮಂಜುಳಾ, ವಿಜಯ ಕರುನಾಡ ರಕ್ಷಣಾ ವೇದಿಕೆಯ ರೈತ ಘಟಕದ ರಾಜ್ಯ ಉಪಾಧ್ಯಕ್ಷ ಕೆ. ದೊಡ್ಡಬಸಪ್ಪ, ಕಂಪ್ಲಿ ತಾಲೂಕು ಗೌರವ ಅಧ್ಯಕ್ಷ ಗೋಪಾಲ, ತಾಲೂಕು ಅಧ್ಯಕ್ಷ ಜೆ.ಶಿವಕುಮಾರ್, ನಗರ ಘಟಕ ಅಧ್ಯಕ್ಷ ಕೆ. ಶಬ್ಬೀರ್, ಉಪಾಧ್ಯಕ್ಷ ವೈ.ಯಲ್ಲಪ್ಪ, ಮಹಿಳಾ ಘಟಕದ ನಗರ ಅಧ್ಯಕ್ಷೆ ಹುಲಿಗೆಮ್ಮ, ಪ್ರಮುಖರಾದ ಎನ್. ಗಂಗಮ್ಮ ಯಲ್ಲಮ್ಮ, ಮಹಾಲಕ್ಷ್ಮೀ, ಚಂದ್ರಮ್ಮ ಸೇರಿದಂತೆ ಇತರರಿದ್ದರು.
ಸರ್ಕಾರ ಸರಿ ತಪ್ಪುಗಳಿಗೆ ಜಾತಿ ಧರ್ಮ ನೋಡದೆ ತಕ್ಕ ಕ್ರಮ ಕೈಗೊಳ್ಳಲಿಕನ್ನಡಪ್ರಭ ವಾರ್ತೆ ಕಂಪ್ಲಿನೇಹಾ ಹಿರೇಮಠ ಹತ್ಯೆ ಖಂಡನೀಯ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ ಮಹಿಳಾ ಸಾಕ್ಷರತೆಗೆ ಪೆಟ್ಟು ಬೀಳುವ ಸಾಧ್ಯತೆ ಹೆಚ್ಚಿದೆ. ಸರ್ಕಾರ ಸರಿ ತಪ್ಪುಗಳಿಗೆ ಜಾತಿ ಧರ್ಮ ನೋಡದೆ ತಕ್ಕ ಕ್ರಮ ಕೈಗೊಳ್ಳಬೇಕು ಎಂದು ಎಮ್ಮಿಗನೂರಿನ ಹಂಪಿಸಾವಿರದೇವರಮಠದ ಶ್ರೀವಾಮದೇವ ಶಿವಾಚಾರ್ಯರು ಹೇಳಿದರು.
ಮಂಗಳವಾರ ಪತ್ರಿಕಾ ಹೇಳಿಕೆ ನೀಡಿ, ಉನ್ನತ ಅಂಕಗಳನ್ನು ಗಳಿಸಿ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿಯರಿಗೆ ನೇಹಾ ಹತ್ಯೆ ಘಟನೆ ಆಘಾತ ತಂದಿದೆ. ಕಾಲೇಜಿನ ಆವರಣದಲ್ಲೇ ರಕ್ಷಣೆ ಇಲ್ಲ ಅಂದರೆ ವಿದ್ಯಾರ್ಥಿನಿಯರ ಪಾಡೇನು? ಇಂತಹ ಘಟನೆ ಮರುಕಳಿಸದಿರಲು ವಿಶೇಷ ಕಾನೂನು ರಚಿಸಿ, ನ್ಯಾಯಾಲಯ ಸ್ಥಾಪಿಸಿ, ಸಾಕ್ಷಿ ಸಮೇತ ಸಿಕ್ಕಿಬಿದ್ದ ಭಯಾನಕ ಕ್ರೂರಿಗಳಿಗೆ 48 ಗಂಟೆಯೊಳಗೆ ಗಲ್ಲು ಶಿಕ್ಷೆ ವಿಧಿಸಬೇಕು. ಪಾಪಿಗೆ ಶಿಕ್ಷೆ ಕೊಡದಿದ್ದರೆ ಜನರ ಮನಸ್ಸಿನ ಭವಿಷ್ಯದಲ್ಲಿ ಸರ್ಕಾರಕ್ಕೆ ಶಿಕ್ಷೆ ಕೊಟ್ಟಾರು. ಪ್ರಜೆಗಳ ರಕ್ಷಣೆಯಾದಾಗ ಮಾತ್ರ ಪ್ರಜಾಪ್ರಭುತ್ವ ಸಾರ್ಥಕವಾಗುತ್ತದೆ. ವಿದ್ಯಾರ್ಥಿಗಳೂ ವಿದ್ಯಾರ್ಜನೆ ಸಂದರ್ಭದಲ್ಲಿ ಬ್ರಹ್ಮಚರ್ಯವನ್ನು ಕಟ್ಟುನಿಟ್ಟಾಗಿ ಪರಿಪಾಲಿಸಬೇಕು. ಶಿಕ್ಷಣಕ್ಕೆ ಆದ್ಯತೆ ನೀಡಿ ಪ್ರೀತಿ, ಪ್ರೇಮ, ಸಂಸಾರ ಸೇರಿ ಬೌತಿಕ ಲಕ್ಷಣಗಳಿಗೆ ಬೆಲೆ ಕೊಡಬಾರದು ಎಂದರು.