ಸಾರಾಂಶ
ಕನ್ನಡಪ್ರಭ ವಾರ್ತೆ ಶಹಾಪುರ
ಹುಬ್ಬಳ್ಳಿಯಲ್ಲಿ ಯುವತಿ ನೇಹಾಳನ್ನು ಅಮಾನುಷವಾಗಿ ಕೊಲೆ ಮಾಡಿದ ಆರೋಪಿ ಫಯಾಜ್‌ನಿಗೆ ಕಠಿಣ ಶಿಕ್ಷೆ ನೀಡುವ ಮೂಲಕ ಯುವತಿಯ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿ ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಯುವ ಘಟಕದ ವತಿಯಿಂದ ನಗರದ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಉಮಾಕಾಂತ ಹಳ್ಳಿ ಅವರ ಮುಖಾಂತರ ಗೃಹ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.ಈ ವೇಳೆ ಮಾತನಾಡಿದ ವೀರಶೈವ ಸಮಾಜದ ಯುವ ಅಧ್ಯಕ್ಷ ಶಂಭುಲಿಂಗ ಗೋಗಿ, ಹೆಣ್ಣನ್ನು ತಾಯಿ, ಭೂತಾಯಿ, ಪೂಜ್ಯ ಭಾವನೆಯಿಂದ ಕಾಣುತ್ತೇವೆ. ಇಂಥ ನಾಡಿನಲ್ಲಿ ಈ ರೀತಿ ಅಮಾನುಷವಾಗಿ ಹಾಡಹಗಲೇ ಕೊಲೆ ಮಾಡಲಾಗುತ್ತಿದೆ ಎಂದರೆ ಈ ದೇಶದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವುದಕ್ಕೆ ಇದೊಂದು ತಾಜಾ ಉದಾಹರಣೆಯಾಗಿದೆ ಎಂದರು.
ಪ್ರೀತಿ ನಿರಾಕರಿಸಿದ್ದಕ್ಕೆ ಆರೋಪಿ ಕೊಲೆ ಮಾಡಿದ್ದಾನೆ. ಲವ್ ಜಿಹಾದ್‌ಗೆ ಮುಗ್ದ ಹೆಣ್ಣು ಮಗಳು ಬಲಿಯಾಗಿದ್ದಾಳೆ. ಈ ಘಟನೆಯಿಂದ ಮಹಿಳೆಯರು ಮನೆಯಿಂದ ಹೊರಗೆ ಬರಬಾರದಂತ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಎಲ್ಲಾ ಕಡೆ ಭಯದ ವಾತಾವರಣ ನಿರ್ಮಾಣವಾಗಿದೆ. ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಒಬ್ಬ ಪ್ರಭಾವಿ ಜನಪ್ರತಿನಿಧಿಯ ಮಗಳಾಗಿದ್ದಾಳೆ. ರಾಜಕಾರಣಿಗಳ ಮಕ್ಕಳೇ ಹೀಗಾದರೆ ಇನ್ನು ಜನಸಾಮಾನ್ಯರ ಗತಿಯೇನು ಎಂದು ಆಕ್ರೋಶ ವ್ಯಕ್ತಪಡಿಸಿದರು.ಸರ್ಕಾರ ಆರೋಪಿ ಬಂಧಿಸಿರಬಹುದು. ಆದರೆ, ವಿಚಾರಣೆ ನೆಪದಲ್ಲಿ ವರ್ಷಗಳು ಉರುಳುತ್ತವೆ. ಆರೋಪಿಗಳು ನಿರಪರಾಧಿ ಎಂದು ಸಾಬೀತುಪಡಿಸಲು ಅವಕಾಶಗಳು ಇವೆ. ಕೊಲೆ ಪಾತಕನಿಗೆ ವಿಚಾರಣೆ ಅಗತ್ಯವಿಲ್ಲ. ಕಠೋರ ಶಿಕ್ಷೆ ನೀಡಿದಾಗ ಮಾತ್ರ ಈ ಸಮಾಜದಲ್ಲಿ ಇಂತಹ ಘಟನೆಗಳು ಮರುಕಳಿಸುವುದಿಲ್ಲ. ಈ ಕೊಲೆ ಪ್ರಕರಣದ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಅವರು ಎಚ್ಚರಿಕೆ ನೀಡಿದರು.
ವೀರಶೈವ ಸಮಾಜದ ಮುಖಂಡರಾದ ಡಾ. ಎಂಪಿ ಹಿರೇಮಠ, ಸಿದ್ದು ಆರಬೋಳ, ರಾಜು ಮಡ್ನಾಳ, ಬಸವರಾಜು ವಸ್ತ್ರದ, ಮಾಹಾದೇವಯ್ಯ ಸ್ವಾಮಿ, ವಿಜಯಕುಮಾರ್ ಸ್ವಾಮಿ, ಸಿದ್ದು ಮಡ್ನಾಳ, ಮಲ್ಲಯ್ಯ ಸ್ವಾಮಿ ಇಟಗಿ, ಉದಯ ಡವಳಗಿ, ಬಸವರಾಜ್ ಕಡಗಂಚಿ, ಮಲ್ಲು ಜಾಕಾ, ಶಿವು ಮುಂಡಾಸ, ಸಿದ್ದು ಆನೆಗುಂದಿ ಮಲ್ಲು ಹೂಗಾರ್, ಗುಂಡು ತೋಟಗೇರಿ, ಅಂಬರೀಶ್, ಕರುಣಾಸಾಗರ, ಶಿವಕುಮಾರ, ರೇವಣಸಿದ್ದಯ್ಯ, ವೆಂಕಟೇಶ್, ಮೌನೇಶ ಹಳಿಸಗರ್ ಸೇರಿದಂತೆ ಇತರರಿದ್ದರು.ಹುಬ್ಬಳ್ಳಿಯ ಯುವತಿಯ ಕೊಲೆ ಅತ್ಯಂತ ದುಃಖಕರ ಮತ್ತು ಆಘಾತಕಾರಿ ಘಟನೆಯಾಗಿದೆ. ಕಾಲೇಜು ಕ್ಯಾಂಪಸ್‌ನಲ್ಲಿ, ಅದೂ ಹಾಡಹಗಲೇ ಇಂತಹ ಘಟನೆಯಿಂದ ನಾಗರಿಕ ಸಮಾಜವೇ ತಲೆತಗ್ಗಿಸುವಂತಾಗಿದೆ. ಹೆಣ್ಣು ಮಕ್ಕಳ ಮಾನ ಪ್ರಾಣಕ್ಕೆ ಧಕ್ಕೆ ತರುವ ಯಾವುದೇ ಜಾತಿ, ಧರ್ಮದ ಆರೋಪಿಗಳಾಗಿರಲಿ ಅವರಿಗೆ ಗಲ್ಲು ಶಿಕ್ಷೆ ನೀಡಬೇಕು.
ಶರಣು ಗದ್ದುಗೆ, ಉತ್ತರ ಕರ್ನಾಟಕ ಕರವೇ ಅಧ್ಯಕ್ಷರು.