ನೇಹಾ ಕೊಲೆ ಕೇಸ್‌ ಸಿಬಿಐಗೆ ವಹಿಸಿ

| Published : Apr 25 2024, 01:01 AM IST / Updated: Apr 25 2024, 01:02 AM IST

ಸಾರಾಂಶ

ಕಾಲೇಜಿಗೆ ಬಂದಿದ್ದ ನೇಹಾ ಹಿರೇಮಠಳನ್ನು ಫಯಾಜ್‌ ಬರ್ಬರವಾಗಿ ಹತ್ಯೆ ಮಾಡಿರುವುದು ಖಂಡನಾರ್ಹ. ಈ ಘಟನೆಯಿಂದಾಗಿ ದೇಶವೇ ಬೆಚ್ಚಿ ಬಿದ್ದಿದೆ. ಇನ್ನು ಕಾಲೇಜಿಗೆ ಮಕ್ಕಳನ್ನು ಕಳಿಸಲು ಪಾಲಕರು ಭಯಪಡುತ್ತಿದ್ದಾರೆ.

ಹುಬ್ಬಳ್ಳಿ:

ವಿದ್ಯಾರ್ಥಿನಿ ನೇಹಾ ಹತ್ಯೆ ಖಂಡಿಸಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್‌ಎಸ್‌ಯುಐ)ದ ವತಿಯಿಂದ ವಿದ್ಯಾರ್ಥಿಗಳು ಬುಧವಾರ ನಗರದ ಬಿವಿಬಿ ಕಾಲೇಜು ಎದುರು ಬೃಹತ್‌ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ವಿದ್ಯಾರ್ಥಿಗಳು ಹಾಗೂ ಸಂಘಟನೆಯ ಮುಖಂಡರು, ಕಾಲೇಜಿಗೆ ಬಂದಿದ್ದ ನೇಹಾ ಹಿರೇಮಠಳನ್ನು ಫಯಾಜ್‌ ಬರ್ಬರವಾಗಿ ಹತ್ಯೆ ಮಾಡಿರುವುದು ಖಂಡನಾರ್ಹ. ಈ ಘಟನೆಯಿಂದಾಗಿ ದೇಶವೇ ಬೆಚ್ಚಿ ಬಿದ್ದಿದೆ. ಇನ್ನು ಕಾಲೇಜಿಗೆ ಮಕ್ಕಳನ್ನು ಕಳಿಸಲು ಪಾಲಕರು ಭಯಪಡುತ್ತಿದ್ದಾರೆ. ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ವಹಿಸಿದೆ. ಆದರೆ, ತೀವ್ರ ತನಿಖೆ ನಡೆಯುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದ್ದು, ಈ ಕೂಡಲೇ ಇದನ್ನು ಸಿಬಿಐಗೆ ಹಸ್ತಾಂತರಿಸಿ ಶೀಘ್ರವೇ ಆರೋಪಿಗೆ ಗಲ್ಲುಶಿಕ್ಷೆ ವಿಧಿಸಬೇಕು. ಒಂದು ವೇಳೆ ವಿಳಂಬ ತೋರಿದಲ್ಲಿ ರಾಜ್ಯಾದ್ಯಂತ ಎನ್‌ಎಸ್‌ಯುಐನಿಂದ ಉಗ್ರವಾದ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ರಸ್ತೆ ತಡೆದು ಆಕ್ರೋಶ:

ಪ್ರತಿಭಟನಾ ನಿರತ ಸಾವಿರಾರು ವಿದ್ಯಾರ್ಥಿಗಳು ಹುಬ್ಬಳ್ಳಿ-ಧಾರವಾಡ ರಸ್ತೆ ಹಾಗೂ ಬಿಆರ್‌ಟಿಎಸ್ ಕಾರಿಡಾರಿನಲ್ಲಿ ಚಿಗರಿ ಬಸ್‌ಗಳ ಸಂಚಾರ ಬಂದ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಎನ್‌ಎಸ್‌ಯುಐ ಬಾವುಟ ಹಾಗೂ ನೇಹಾ ಸಾವಿಗೆ ನ್ಯಾಯ ಬೇಕು ಎನ್ನುವ ಫಲಕ ಪ್ರದರ್ಶಿಸಿ, ಘೋಷಣೆ ಕೂಗಿದರು. ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲೇಬೇಕು ಎಂದು ಒತ್ತಾಯಿಸಿದರು. ಒಂದು ಗಂಟೆಗೂ ಹೆಚ್ಚುಕಾಲ ನಡೆದ ರಸ್ತೆ ತಡೆಯಿಂದಾಗಿ ಎರಡೂ ಬದಿಗಳಲ್ಲಿ ನೂರಾರು ವಾಹನಗಳು ನಿಂತು ಸಂಚಾರಕ್ಕೆ ತೊಂದರೆ ಉಂಟಾಯಿತು.

ಪ್ರತಿಭಟನಾ ಸ್ಥಳಕ್ಕೆ ಡಿಸಿಪಿ ರಾಜೀವ್ ಎಂ. ಆಗಮಿಸಿ ಮನವಿ ಸ್ವೀಕರಿಸಿದರು. ಈ ವೇಳೆ ವಿದ್ಯಾರ್ಥಿಗಳು ಆದಷ್ಟು ಬೇಗ ತನಿಖೆ ಪೂರ್ಣಗೊಳಿಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಆ್ಯಂಬುಲೆನ್ಸ್‌ಗೆ ದಾರಿ:

ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದ ವೇಳೆ 5ಕ್ಕೂ ಅಧಿಕ ಆ್ಯಂಬುಲೆನ್ಸ್‌ಗಳು ಬಂದ ವೇಳೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳೇ ವಾಹನ ಹೋಗಲು ಬೇಕಾದ ಜಾಗವನ್ನು ಬಿಟ್ಟರು.

ಈ ಸಂದರ್ಭದಲ್ಲಿ ರೋಹಿತ್ ಘೋಡಕೆ, ರಫೀಕ್ ಅಲಿ, ರೋಹನ್ ಹಿಪ್ಪರಗಿ, ವಿನಯ ಪಟ್ಟಣಶೆಟ್ಟಿ, ರಾಹುಲ್ ಬೆಳದಡಿ, ಬಸನಗೌಡ ಪಾಟೀಲ, ವಿಶಾಲ ಮಾನೆ, ಕಿರಣ ಗಾಂಧಾಳ, ಕಲ್ಮೇಶ ಉಳ್ಳಾಗಡ್ಡಿ, ನಿಖಿಲ್ ಹಿರೇಮಠ, ಕಿಶೋರ ಸಿರಸಂಗಿ ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.