ನೇಹಾ ಹತ್ಯೆ ಪ್ರಕರಣ ಬಿಜೆಪಿಗೆ ಹಬ್ಬವಾಗಿದೆ: ಸಚಿವ ಲಾಡ್‌

| Published : Apr 23 2024, 12:48 AM IST

ನೇಹಾ ಹತ್ಯೆ ಪ್ರಕರಣ ಬಿಜೆಪಿಗೆ ಹಬ್ಬವಾಗಿದೆ: ಸಚಿವ ಲಾಡ್‌
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ನಾಯಕರು ಹಿಂದೂಗಳ ಸಾವಿನ ಮೇಲೆ ಹಬ್ಬ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅದೆಷ್ಟೋ ಹಿಂದೂ ಮಹಿಳೆಯರ ಹತ್ಯೆ ಮತ್ತು ದೌರ್ಜನ್ಯಗಳಾಗಿದ್ದರೂ ಬಿಜೆಪಿಯವರು ಎಷ್ಟು ಪ್ರತಿಭಟನೆ ಮಾಡಿದ್ದಾರೆ.

ಹುಬ್ಬಳ್ಳಿ:

ನೇಹಾ ಹಿರೇಮಠ ಹತ್ಯೆ ಪ್ರಕರಣದಲ್ಲಿ ಧರ್ಮ, ಜಾತಿ ಮೀರಿ ಎಲ್ಲರೂ ನ್ಯಾಯಕ್ಕಾಗಿ ಒಗ್ಗೂಡಿದ್ದಾರೆ. ಆದರೆ ಬಿಜೆಪಿಗರು ಇದನ್ನು ಚುನಾವಣಾ ಅಸ್ತ್ರವನ್ನಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ. ನೇಹಾಳ ಸಾವನ್ನು ಹಬ್ಬದಂತೆ ಬಿಜೆಪಿಗರು ಮಾಡುತ್ತಿದ್ದಾರೆ ಎಂದು ಸಚಿವ ಸಂತೋಷ ಲಾಡ್‌ ಕಿಡಿಕಾರಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರು ಹಿಂದೂಗಳ ಸಾವಿನ ಮೇಲೆ ಹಬ್ಬ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅದೆಷ್ಟೋ ಹಿಂದೂ ಮಹಿಳೆಯರ ಹತ್ಯೆ ಮತ್ತು ದೌರ್ಜನ್ಯಗಳಾಗಿದ್ದರೂ ಬಿಜೆಪಿಯವರು ಎಷ್ಟು ಪ್ರತಿಭಟನೆ ಮಾಡಿದ್ದಾರೆ ಎಂದು ಪ್ರಶ್ನಿಸಿದ ಅವರು, ಇಲ್ಲಿ ಮುಸ್ಲಿಂ ಯುವಕ ಹಿಂದೂ ವಿದ್ಯಾರ್ಥಿನಿಯನ್ನು ಕೊಲೆ ಮಾಡಿದ್ದಾನೆ ಎಂಬ ಕಾರಣಕ್ಕೆ ರಾಜಕಾರಣ ಮಾಡುತ್ತಿದ್ದಾರೆ. ಸಾವಿನ ಮನೆಯಲ್ಲೂ ಪ್ರಚಾರ ಪಡೆಯುತ್ತಿದ್ದಾರೆ. ದುಃಖದ ಮನೆ ಬಿಜೆಪಿಗರ ಪ್ರಚಾರದ ತಾಣವಾದಂತಾಗಿದೆ ಎಂದು ಕಿಡಿಕಾರಿದರು.

ಹಿಂದೂ ಯುವತಿಯನ್ನು ಹಿಂದೂ ಯುವಕರು ಕೊಲೆ ಮಾಡಿದರೆ ಯಾರೂ ಹೋಗುವುದಿಲ್ಲ. ಆದರೆ ನೇಹಾಳ ಕೊಲೆ ವಿಚಾರದಲ್ಲಿ ರಾಷ್ಟ್ರೀಯ ನಾಯಕರಿಂದ ಹಿಡಿದು ಪ್ರಮುಖರು ಬರುತ್ತಿರುವುದರ ಹಿಂದೆ ರಾಜಕೀಯ ಇರುವುದು ಸ್ಪಷ್ಟ. ಯಾರೇ ಇಂತಹ ಪೈಶಾಚಿಕ ಕೃತ್ಯ ಮಾಡಿದರೂ ಅದು ಅಕ್ಷಮ್ಯ ಅಪರಾಧ ಹಾಗೂ ಕ್ಷಮೆಗೆ ಅರ್ಹರಲ್ಲ. ಇಲ್ಲಿ ಜಾತಿ, ಧರ್ಮ ಮೀರಿ ಎಲ್ಲರೂ ಒಗ್ಗೂಡಿದ್ದಾರೆ. ಆದರೆ ಬಿಜೆಪಿಗರು ಮಾತ್ರ ಇದನ್ನು ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಕಳೆದ ಮೂರು ವರ್ಷದಲ್ಲಿ ದೇಶದಲ್ಲಿ 13,000 ಮಹಿಳೆಯರ ನಾಪತ್ತೆಯಾಗಿದ್ದಾರೆ. ಗುಜರಾತಿನಲ್ಲಿ ನಿತ್ಯ 6 ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿದೆ ಎಂದು ಅಧಿಕೃತ ಅಂಕಿ-ಅಂಶಗಳೇ ಹೇಳುತ್ತಿವೆ. ಯಾರಾದರೂ ಈ ಬಗ್ಗೆ ಧ್ವನಿ ಎತ್ತಿದ್ದಾರಾ? ಸೌಜನ್ಯ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಒಬ್ಬನೆ ಒಬ್ಬ ಬಿಜೆಪಿ ನಾಯಕ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾನಾ? ಚುನಾವಣೆ ಸಮಯವಾಗಿರುವುದರಿಂದ ನೇಹಾ ಕೊಲೆ ಪ್ರಕರಣವನ್ನು ಸಂಪೂರ್ಣವಾಗಿ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದರು.ನಿರಂಜನಗೆ ಮನವಿ:

ನೇಹಾ ತಂದೆ ನಿರಂಜನ ಹಿರೇಮಠ ಮೂಲಕ ಬಿಜೆಪಿಗರು ತಮ್ಮ ವಿಚಾರಗಳನ್ನು ಹೇಳಿಸುತ್ತಿದ್ದಾರೆ. ಘಟನೆಯ ಬಳಿಕ ನಿರಂಜನ ನಮ್ಮ, ನಮ್ಮ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ. ಈ ರೀತಿ ಮಾತನಾಡುವುದರಿಂದ ನಿಮಗೆ ಅನುಕೂಲವಾಗುವುದಿದ್ದರೆ ಮಾತನಾಡಿ. ಆದರೆ ನೇಹಾಳ ಹತ್ಯೆಯನ್ನು ಬಿಜೆಪಿಗರು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದನ್ನು ನೀವು ಅರ್ಥ ಮಾಡಿಕೊಳ್ಳಬೇಕು ಎಂದು ಸಂತೋಷ ಲಾಡ್ ಮನವಿ ಮಾಡಿದ್ದಾರೆ.