ನೇಹಾ ಹತ್ಯೆ ಪ್ರಕರಣ ಸಿಐಡಿಗೆ- ಯಡಿಯೂರಪ್ಪ ಸ್ವಾಗತ

| Published : Apr 23 2024, 12:45 AM IST

ಸಾರಾಂಶ

ಹುಬ್ಬಳ್ಳಿಯಲ್ಲಿ ನಡೆದ ಕಾಲೇಜು ವಿದ್ಯಾರ್ಥಿನಿ ನೇಹಾ ಹೀರೆಮಠ ಹತ್ಯೆ ಪ್ರಕರಣವನ್ನು ‌ರಾಜ್ಯ‌ ಸರ್ಕಾರ ಸಿಐಡಿ ತನಿಖೆಗೆ ವಹಿಸಿರುವುದನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ವಾಗತಿಸಿದ್ದಾರೆ.

ಶಿವಮೊಗ್ಗ: ಹುಬ್ಬಳ್ಳಿಯಲ್ಲಿ ನಡೆದ ಕಾಲೇಜು ವಿದ್ಯಾರ್ಥಿನಿ ನೇಹಾ ಹೀರೆಮಠ ಹತ್ಯೆ ಪ್ರಕರಣವನ್ನು ‌ರಾಜ್ಯ‌ ಸರ್ಕಾರ ಸಿಐಡಿ ತನಿಖೆಗೆ ವಹಿಸಿರುವುದನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ವಾಗತಿಸಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಐಡಿ ತನಿಖೆಗೆ ವಹಿಸಿದ್ದಾರೆ. ತನಿಖೆಯಿಂದ ಹೆಚ್ಚು ವಾಸ್ತವದ ಸತ್ಯ ಹೊರಬೀಳಲಿದೆ ಎಂದರು.

ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವ ನಿರೀಕ್ಷೆ ಇದೆ. ಶಿವಮೊಗ್ಗದಲ್ಲಿ ರಾಘವೇಂದ್ರ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಅಭಿವೃದ್ಧಿ ಕಾರ್ಯಗಳ ಹಿನ್ನೆಲೆ ರಾಘವೇಂದ್ರ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುತ್ತಾರೆ. ರಾಜ್ಯಾದ್ಯಾಂತ ಮೋದಿ ಪರವಾದ ಅಲೆ ಇದೆ ಎಂದರು.

ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ 20 ಕ್ಷೇತ್ರಗಳನ್ನು ಗೆಲ್ಲುವ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ನಾಯಕರಾಗಿ ಅವರು ಸೋಲುತ್ತೇವೆ ಎಂದು ಹೇಳಲು ಬರುತ್ತದೆಯೇ? ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ಗೆಲ್ಲುವ ನಾಲ್ಕು ಕ್ಷೇತ್ರಗಳ ಹೆಸರನ್ನು ಹೇಳಲಿ ಎಂದ ಅವರು, ಕಾಂಗ್ರೆಸ್ ಪಕ್ಷದ ಮುಂದಿನ ಪ್ರಧಾನಿ ಯಾರೆಂದು ಹೇಳಲಿ. ಕಾಂಗ್ರೆಸ್ ಪಕ್ಷದ ಮುಂದಿನ ಪ್ರಧಾನಿ ಯಾರು ಎಂಬ ಸ್ಪಷ್ಟತೆ ಅವರಲ್ಲಿ ಇಲ್ಲ. ಚೊಂಬು ಗ್ಯಾರಂಟಿ ವಿಚಾರ ಇದಕ್ಕೆಲ್ಲ ಏನು ಅರ್ಥ ಇಲ್ಲ ಎಂದರು.

ಈಶ್ವರಪ್ಪ ನಾಮಪತ್ರ ಹಿಂಪಡೆಯದ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನ್ಯಾಕಪ್ಪ ಅದರ ಬಗ್ಗೆ ಪ್ರತಿಕ್ರಿಯೆ ನೀಡಲಿ ಎಂದರು.

ಯತೀಂದ್ರ ಸಿದ್ದರಾಮಯ್ಯರವರು ಮೋದಿ ವಿರುದ್ಧ ಟೀಕೆ ಮಾಡಿದ ವಿಚಾರವಾಗಿ ಮಾತನಾಡಿ, ಹಗುರವಾಗಿ ಮಾತನಾಡುವವರಿಗೆ ನಾನೇನು ಮಾತನಾಡಲು ಆಗುತ್ತದೆ. ರಸ್ತೆಯಲ್ಲಿ ಹೋಗುವರೆಲ್ಲ ಮಾತನಾಡಿದರೆ ಮೋದಿ ಅವರ ಗೌರವ ಕಡಿಮೆಯಾಗುವುದಿಲ್ಲ ಎಂದರು.