ನೇಹಾ ಹತ್ಯೆ ಪ್ರಕರಣ: ವಿಚಾರಣೆ ಆರಂಭ

| Published : Apr 30 2025, 12:32 AM IST

ಸಾರಾಂಶ

ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಅವರು ವಿಚಾರಣೆ ಆರಂಭಿಸಿದರು. ಮೇ 3ನೆಯ ತಾರೀಖಿಗೆ ಮುಂದಿನ ವಿಚಾರಣೆ ಮುಂದೂಡಿದರು. ಆರೋಪಿ ಫಯಾಜ್ ಪರ ವಕಾಲತ್ತು ವಹಿಸಲು ಹುಬ್ಬಳ್ಳಿಯ ವಕೀಲರು ಮುಂದೆ ಬಾರದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ತಾಲೂಕು ಕಾನೂನು ಸೇವಾ ಸಮಿತಿಯಿಂದ ವಕೀಲರ ನೇಮಕ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಹುಬ್ಬಳ್ಳಿ: ಕಳೆದ ಒಂದು ವರ್ಷದ ಹಿಂದೆ ನಡೆದಿದ್ದ ನೇಹಾ ಹಿರೇಮಠ ಹತ್ಯೆ ಪ್ರಕರಣದ ವಿಚಾರಣೆಯು ಇಲ್ಲಿನ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮಂಗಳವಾರದಿಂದ ಶುರುವಾಯಿತು.

ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಅವರು ವಿಚಾರಣೆ ಆರಂಭಿಸಿದರು. ಮೇ 3ನೆಯ ತಾರೀಖಿಗೆ ಮುಂದಿನ ವಿಚಾರಣೆ ಮುಂದೂಡಿದರು.

ಆರೋಪಿ ಫಯಾಜ್ ಪರ ವಕಾಲತ್ತು ವಹಿಸಲು ಹುಬ್ಬಳ್ಳಿಯ ವಕೀಲರು ಮುಂದೆ ಬಾರದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ತಾಲೂಕು ಕಾನೂನು ಸೇವಾ ಸಮಿತಿಯಿಂದ ವಕೀಲರ ನೇಮಕ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ನೇಹಾ ಹತ್ಯೆ ಪ್ರಕರಣವನ್ನು ಬೆಳಗಾವಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾವಣೆ ಮಾಡುವಂತೆ ಆರೋಪಿ ಫಯಾಜ್ ಮನವಿ ಮಾಡಿದ್ದ. ಇದರ ವಿಚಾರಣೆ ಧಾರವಾಡ ಹೈಕೋರ್ಟ್‌ನಲ್ಲಿ ನಡೆದು, ಹತ್ಯೆಯನ್ನು ನೋಡಿರುವ ಪ್ರಮುಖ 99 ಸಾಕ್ಷಿಗಳು ಹುಬ್ಬಳ್ಳಿಯಲ್ಲಿವೆ. ಹೀಗಾಗಿ, ಪ್ರಕರಣದ ವಿಚಾರಣೆ ಹುಬ್ಬಳ್ಳಿಯಲ್ಲೇ ಆರಂಭ ಮಾಡಬೇಕೆಂದು ಪ್ರತಿವಾದ ಮಾಡಿದ್ದರು. ಹೀಗಾಗಿ ಹುಬ್ಬಳ್ಳಿಯಲ್ಲಿ ಪ್ರಕರಣದ‌ ವಿಚಾರಣೆ ನಡೆಸುವಂತೆ ಕೋರ್ಟ್ ಸೂಚನೆ ನೀಡಿತ್ತು. ಅದರಂತೆ ಇದೀಗ ಹುಬ್ಬಳ್ಳಿಯ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮಂಗಳವಾರದಿಂದ ವಿಚಾರಣೆ ಶುರುವಾಯಿತು.

ಕಳೆದ ವರ್ಷ ಏ. 18 ರಂದು ಬಿವಿಬಿ ಕಾಲೇಜ್ ಕ್ಯಾಂಪಸ್‌ನಲ್ಲಿ ನೇಹಾ ಹಿರೇಮಠ ಹತ್ಯೆಯಾಗಿತ್ತು. ಇದು ಇಡೀ ರಾಜ್ಯದಲ್ಲೇ ಭಾರೀ ಸಂಚಲನವನ್ನುಂಟು ಮಾಡಿತ್ತು. ಎಲ್ಲೆಡೆ ಭಾರೀ ಪ್ರತಿಭಟನೆ ನಡೆದಿತ್ತು. ಸಿಐಡಿ ಪ್ರಕರಣದ ತನಿಖೆ ನಡೆಸಿ 483 ಪುಟಗಳ ಚಾರ್ಜ್ ಶೀಟ್‌ ಕೋರ್ಟಗೆ ಸಲ್ಲಿಸಿತ್ತು.