ಸಾರಾಂಶ
ಗುರುಮಠಕಲ್ ಸಮೀಪದ ಸೈದಾಪುರ ಪಟ್ಟಣದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಘಟನೆ ಖಂಡಿಸಿ ನಾಗರಿಕ ಹಿತರಕ್ಷಣಾ ವೇದಿಕೆಯಿಂದ ಉಪ ತಹಸೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಗುರುಮಠಕಲ್: ವಿದ್ಯಾರ್ಥಿನಿ ನೇಹಾ ಹಿರೇಮಠಳನ್ನು ಕೊಲೆ ಮಾಡಿದ ಆರೋಪಿ ಫಯಾಜ್ ಗೆ ಸಾರ್ವಜನಿಕವಾಗಿ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಸಮೀಪದ ಸೈದಾಪುರದಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆಯಿಂದ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಅಮಾನುಷ ಕೊಲೆಯನ್ನು ಕಠಿಣ ಶಬ್ದಗಳಲ್ಲಿ ಖಂಡಿಸಿದ ಪ್ರತಿಭಟನಾಕಾರರು, ಘೋಷಣೆ ಕೂಗುತ್ತಾ, ನಗರದ ರೈಲು ನಿಲ್ದಾಣದಿಂದ ಬಸವೇಶ್ವರ ವೃತ್ತ, ಕನಕ ವೃತ್ತ, ಬಸ್ ನಿಲ್ದಾಣದ ಮೂಲಕ ಪ್ರತಿಭಟನೆ ರ‍್ಯಾಲಿ ಕೈಗೊಂಡು ಮೃತಳ ಹತ್ಯೆಗೆ ನ್ಯಾಯ ಒದಗಿಸಿ ಕೊಡಬೇಕೆಂದು ಆಗ್ರಹಿಸಿ ಉಪ ತಹಸೀಲ್ದಾರರ ಮುಖಾಂತರ ರಾಜ್ಯಪಾಲರಿಗೆ ಮನವಿ ಮಾಡಿದರು.ಮುಖಂಡ ನಿತಿನ್ ತಿವಾರಿ ಮಾತನಾಡಿ, ಹತ್ಯೆ ಮಾಡಿದ ಆರೋಪಿ ಫಯಾಜ್ ರಕ್ಷಣೆಗೆ ಸರ್ಕಾರ ಮುಂದಾಗಿರುವುದು ನಮ್ಮ ದುರಂತ. ಲವ್ ಜಿಹಾದ್ ಹೆಸರಲ್ಲಿ ಕೊಲೆ ಮಾಡಿರುವ ಘಟನೆ ಕಣ್ಣಿಗೆ ಕಂಡರೂ ತುಷ್ಟೀಕರಣ ನೀತಿಯಿಂದಾಗಿ ಆರೋಪಿ ರಕ್ಷಣಗೆ ಮುಂದಾಗಿರುವುದು ಖಂಡನೀಯ. ಈ ಕೊಲೆ ಪ್ರಕರಣವನ್ನು ಉನ್ನತ ಮಟ್ಟದ ತನಿಖಾ ಸಂಸ್ಥೆಗೆ ಒಳಪಡಿಸಿ ಫಯಾಜ್‌ನನ್ನು ಶೀಘ್ರ ವಿಚಾರಣೆ ನಡೆಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.