ಸಾರಾಂಶ
ಕಳೆದ ವರ್ಷ ಏಪ್ರಿಲ್ 18ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಹಾಳನ್ನು ಫಯಾಜ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಈ ಸಂಬಂಧ ಜೈಲಿನಲ್ಲಿರುವ ಫಯಾಜ್, ಜಾಮೀನಿಗಾಗಿ ಹುಬ್ಬಳ್ಳಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ.
ಧಾರವಾಡ: ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣದ ಆರೋಪಿ ಫಯಾಜ್ ಜಾಮೀನು ಅರ್ಜಿ ಹೈಕೋರ್ಟ್‌ನಲ್ಲಿಯೂ ವಜಾ ಆಗಿದೆ.
ಬುಧವಾರ ಧಾರವಾಡ ಹೈಕೋರ್ಟಿನಲ್ಲಿ ನಡೆದ ವಿಚಾರಣೆ ವೇಳೆ ಜಾಮೀನು ಅರ್ಜಿ ವಜಾಗೊಳಿಸುವುದಾಗಿ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದರಿಂದ ಫಯಾಜ್‌ನ ವಕೀಲರು ಅರ್ಜಿ ಹಿಂಪಡೆದಿದ್ದಾರೆ. ಇದರಿಂದಾಗಿ ಸದ್ಯಕ್ಕೆ ಫಯಾಜ್‌ಗೆ ಜೈಲೇ ಗತಿ ಎಂಬಂತಾಗಿದೆ.ಕಳೆದ ವರ್ಷ ಏಪ್ರಿಲ್ 18ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಹಾಳನ್ನು ಫಯಾಜ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಈ ಸಂಬಂಧ ಜೈಲಿನಲ್ಲಿರುವ ಫಯಾಜ್, ಜಾಮೀನಿಗಾಗಿ ಹುಬ್ಬಳ್ಳಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಈ ಅರ್ಜಿ ವಿಚಾರಣೆ ನಡೆಸಿದ್ದ ಹುಬ್ಬಳ್ಳಿ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಫಯಾಜ್ ಧಾರವಾಡ ಹೈಕೋರ್ಟ್ ಮೊರೆ ಹೋಗಿದ್ದ. ಆದರೆ, ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆ ಏಕ ಸದಸ್ಯ ಪೀಠದ ನ್ಯಾ.ವಿಶ್ವಜಿತ್ ಶೆಟ್ಟಿ ಅವರು ಜಾಮೀನು ಅರ್ಜಿಯನ್ನು ವಜಾಗೊಳಿಸುವುದಾಗಿ ತಿಳಿಸಿದರು.
ಈ ಸೂಚನೆ ಸಿಗುತ್ತಲೇ ಫಯಾಜ್ ವಕೀಲರು ಜಾಮೀನು ಅರ್ಜಿ ಹಿಂಪಡೆದಿದ್ದಾರೆ. ಹೀಗಾಗಿ, ಫಯಾಜ್‌ಗೆ ಜೈಲೇ ಗತಿಯಾಗಿದೆ. ನೇಹಾ ಹಿರೇಮಠ ಕುಟುಂಬಸ್ಥರಿಗೆ ಇದು ಕೊಂಚ ನೆಮ್ಮದಿಯನ್ನುಂಟು ಮಾಡಿದೆ. ನ್ಯಾಯಕ್ಕಾಗಿ ಹೋರಾಟ ಮುಂದುವರೆಸುತ್ತೇವೆ ಎಂದಿರುವ ನೇಹಾಳ ತಂದೆ ನಿರಂಜನಯ್ಯ ಹಿರೇಮಠ, ಯಾವುದೇ ಕಾರಣಕ್ಕೂ ಹಂತಕನಿಗೆ ಜಾಮೀನು ಸಿಗದಂತೆ ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ.ಒಂದು ವೇಳೆ ಅರ್ಜಿ ವಜಾ ಆಗಿದ್ದರೆ ಫಯಾಜ್ ಸುಪ್ರೀಂಕೋರ್ಟ್ ಮೆಟ್ಟಿಲೇರಬೇಕಿತ್ತು. ಆದರೆ, ಬೇರೆ ಕಾರಣ ಮುಂದಿಟ್ಟುಕೊಂಡು ಹೈಕೋರ್ಟಿಗೆ ಮತ್ತೊಮ್ಮೆ ಅರ್ಜಿ ಹಾಕುವ ಉದ್ದೇಶದಿಂದ ಅರ್ಜಿ ಹಿಂಪಡೆದಿದ್ದಾರೆ.