ನೇಹಾ ಸಾವು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕಿಳಿದ ಬಿಜೆಪಿ

| Published : Apr 24 2024, 02:27 AM IST

ನೇಹಾ ಸಾವು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕಿಳಿದ ಬಿಜೆಪಿ
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣೆಗೆ ಹೋಗಲು ಯಾವುದೇ ವಿಷಯವಿಲ್ಲದೆ ಹತಾಶರಾಗಿರುವ ಬಿಜೆಪಿಯವರು ನೇಹಾ ಹಿರೇಮಠ ಸಾವಿನ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕಿಳಿದಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿಚುನಾವಣೆಗೆ ಹೋಗಲು ಯಾವುದೇ ವಿಷಯವಿಲ್ಲದೆ ಹತಾಶರಾಗಿರುವ ಬಿಜೆಪಿಯವರು ನೇಹಾ ಹಿರೇಮಠ ಸಾವಿನ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕಿಳಿದಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಮಂಗಳವಾರ ನೇಹಾ ಹಿರೇಮಠ ಆತ್ಮಕ್ಕೆ ಶಾಂತಿ ಸಿಗಲಿ, ಅಪರಾಧಿಗೆ ಕಠಿಣ ಶಿಕ್ಷೆಯಾಗಲಿ ಎಂದು ಆಗ್ರಹಿಸಿ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಳ್ಳಲಾಗಿದ್ದ ರ್‍ಯಾಲಿಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೇಹಾ ಹಿರೇಮಠ ಆತ್ಮಕ್ಕೆ ಶಾಂತಿ ಸಿಗಲಿ, ನ್ಯಾಯ ಸಿಗಲಿ ಎಂದು ಈ ರ್‍ಯಾಲಿಯ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುತ್ತಿದ್ದೇವೆ. ಇಂತಹ ನೀಚ ಕೃತ್ಯವನ್ನು ವಿಕೃತ ಮನುಷ್ಯನಷ್ಟೇ ಮಾಡಬಹುದು. ಕಾನೂನು ಪ್ರಕಾರ ಅಪರಾಧಿಗೆ ಕಠಿಣ ಶಿಕ್ಷೆ ಕೊಡಬೇಕು ಎಂದು ಆಗ್ರಹಿಸಿದರು.

ಸರ್ಕಾರ ಈಗಾಗಲೇ ಮಹಿಳೆಯರಿಗೆ ಆಗುವ ಅನ್ಯಾಯ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡಲೆಂದು ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಲು ನಿರ್ಧರಿಸಿದೆ. ತನ್ಮೂಲಕ ಮಹಿಳೆಯರ ಜತೆಗಿದ್ದೇವೆ ಎನ್ನುವುದನ್ನು ತೋರಿಸಿದ್ದೇವೆ. ಈ ವಿಷಯವನ್ನು ರಾಜಕೀಯ ಮಾಡಬೇಡಿ ಎಂದು ಈಗಾಗಲೇ ನೇಹಾ ತಂದೆ ನಿರಂಜನ ಹಿರೇಮಠ ಮನವಿ ಮಾಡಿದ್ದಾರೆ. ಎಲ್ಲ ಪಕ್ಷದವರೂ ತಮ್ಮ ಮನೆಗೆ ಬಂದು ಸಾಂತ್ವನ ಹೇಳಿದ್ದಾರೆ. ನ್ಯಾಯ ಕೊಡಿಸುವ ಭರವಸೆ ಸಿಕ್ಕಿದೆ ಎಂದು ಹೇಳಿದ್ದಾರೆ. ಇಷ್ಟಾದರೂ ಬಿಜೆಪಿಯವರು ಪ್ರಕರಣವನ್ನು ರಾಜಕೀಯಕ್ಕೆ ಬಳಸುತ್ತಿರುವುದನ್ನು ನಾವು ಖಂಡಿಸುತ್ತೇವೆ ಎಂದು ತಿಳಿಸಿದರು.

ಇಂತಹ ಕೃತ್ಯ ಯಾವ ಹೆಣ್ಣು ಮಗಳಿಗೂ ಆಗಬಾರದು. ಅಂತಹ ಶಿಕ್ಷೆ ಅಪರಾಧಿಗೆ ಆಗಬೇಕು. ಹಾಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಲಾಗಿದೆ. ಆದರೆ, ಬಿಜೆಪಿಯವರನ್ನು ನೋಡಿದರೇ ಪಾಪ ಎನಿಸುತ್ತಿದೆ. ಚುನಾವಣೆಗೆ ಹೋಗಲು ಅವರ ಬಳಿ ವಿಷಯವಿಲ್ಲ. ಬರಗಾಲಕ್ಕೆ ಕೇಂದ್ರ ಪರಿಹಾರ ಕೊಡಲಿಲ್ಲ ಎಂದು ಜನರು ಅವರು ಹೋದಲ್ಲೆಲ್ಲ ಕೇಳುತ್ತಿದ್ದಾರೆ. ಹಾಗಾಗಿ ದಿಕ್ಕು ತೋಚದೇ ಹತಾಶ ಮನೋಭಾವದಿಂದ ಸಾವಿನ ಮನೆಯಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದರು.ಸಾವಿನ ಮನೆಯಲ್ಲಿ ರಾಜಕೀಯ ಮಾಡುವ ಬಿಜೆಪಿಯ ಹಿಡನ್ ಅಜೆಂಡಾ ಯಶಸ್ವಿಯಾಗುವುದಿಲ್ಲ. ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಕುಟುಂಬಕ್ಕೆ ನ್ಯಾಯ ಸಿಗಬೇಕು. ಮುಂದೆ ಯಾರೂ ಇಂತಹ ಕೃತ್ಯಕ್ಕೆ ಇಳಿಯಬಾರದು ಎನ್ನುವುದು ನಮ್ಮ ಕಳಕಳಿ. ಪ್ರಧಾನಿ ನರೇಂದ್ರ ಮೋದಿಯವರು ಕೇವಲ ಬೇಜವಾಬ್ದಾರಿಯುತ ಭಾಷಣ ಮಾಡುವುದನ್ನು ಬಿಟ್ಟು ದೇಶದಲ್ಲಿ ಮಹಿಳೆಯರ ರಕ್ಷಣೆಗೆ ಕಠಿಣ ಕಾನೂನು ತರಲಿ. ರಾಜ್ಯ ಸರ್ಕಾರ ಕೈಗೊಂಡಂತೆ ವಿಶೇಷ ನ್ಯಾಯಾಲಯ ಸ್ಥಾಪನೆಯಂತಹ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿ.

-ಚನ್ನರಾಜ ಹಟ್ಟಿಹೊಳಿ,

ವಿಧಾನ ಪರಿಷತ್ ಸದಸ್ಯರು.