ನೇಹಾ ಹತ್ಯೆ ಪ್ರಕರಣ ಸಿಬಿಐಗೆ ವಹಿಸಿ: ಕೆ.ಎಸ್‌. ಈಶ್ವರಪ್ಪ ಒತ್ತಾಯ

| Published : Apr 23 2024, 12:48 AM IST

ನೇಹಾ ಹತ್ಯೆ ಪ್ರಕರಣ ಸಿಬಿಐಗೆ ವಹಿಸಿ: ಕೆ.ಎಸ್‌. ಈಶ್ವರಪ್ಪ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗದ ಪ್ರಮುಖ ರಸ್ತೆಗಳಲ್ಲಿ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಅವರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಹುಬ್ಬಳ್ಳಿಯಲ್ಲಿ ಹಿಂದು ಯುವತಿ ನೇಹಾ ಹತ್ಯೆ ಖಂಡಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಹಿಂದು ಹೆಣ್ಣು ಮಕ್ಕಳನ್ನು ಕಗ್ಗೋಲೆ ಮಾಡುವುದು ರಾಕ್ಷಸ ಕೃತ್ಯ. ನೇಹಾ ಹತ್ಯೆ ಮಾಡಿದ ಮುಸ್ಲಿಂ ಗೂಂಡಾನಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಈ ಪ್ರಕರಣ ಸಿಬಿಐಗೆ ವಹಿಸಬೇಕು ಎಂದು ಲೋಕಸಭಾ ಚುನಾವಣೆ ಸ್ವತಂತ್ರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಒತ್ತಾಯಿಸಿದರು.

ಹುಬ್ಬಳ್ಳಿಯಲ್ಲಿ ಹಿಂದು ಯುವತಿ ನೇಹಾ ಹತ್ಯೆ ಖಂಡಿಸಿ ಮಹಾವೀರ ವೃತ್ತದಲ್ಲಿ ಸೋಮವಾರ ರಾಷ್ಟ್ರಭಕ್ತರ ಬಳಗದಿಂದ ನಡೆದ ಬೃಹತ್‌ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನೇಹಾ ಹತ್ಯೆ ವೈಯಕ್ತಿಕ ಕಾರಣಕ್ಕೆ ನಡೆದಿದೆಯೋ ಇಲ್ಲ ಲವ್‌ ಜಿಹಾದೋ ಎಂದು ತೀರ್ಮಾನ ಮಾಡುವುದು ನೀವಲ್ಲ, ಅಂದರೆ ಮುಖ್ಯಮಂತ್ರಿ ಅಥವಾ ಗೃಹ ಮಂತ್ರಿಯಲ್ಲ. ಪ್ರಕರಣ ತನಿಖೆ ಸಂಸ್ಥೆಗಳಿಗೆ ವಹಿಸಿ, ಸತ್ಯ ಹೊರ ತೆಗೆಯಬೇಕು ಎಂದು ಆಗ್ರಹಿಸಿದರು.

ಮುಸಲ್ಮಾನ್‌ ಗೂಂಡಾ ಕಾಲೇಜಿನ ಒಳಗಡೆ ಹೋಗಿ ಯುವತಿ ಕೊಲೆ ಮಾಡಿ ಇನ್ನೂ ಜೀವಂತವಾಗಿದ್ದಾನೆ ಎಂದು ಹೇಳುವುದಕ್ಕೆ ನಾಚಿಕೆಯಾಗುತ್ತಿದೆ. ಸುರ್ಜೆವಾಲ, ಸಿದ್ದರಾಮಯ್ಯ, ಜಿ. ಪರಮೇಶ್ವರ ಅವರುಗಳು ತಮ್ಮ ಮಗಳಿಗೆ ಈ ರೀತಿ ಆಗಿದ್ದರೆ ಇದು ಲವ್‌ ಜಿಹಾದ್‌ ಅಲ್ಲ, ಇದು ಆಕಸ್ಮಿಕ ಘಟನೆ ಎಂದು ಹೇಳುತ್ತಿದ್ರಾ? ಎಂದು ಪ್ರಶ್ನಿಸಿದರು.

ರಾಷ್ಟ್ರಭಕ್ತ ಬಳಗದಿಂದ ಕೆ.ಎಸ್‌.ಈಶ್ವರಪ್ಪ. ಪುತ್ರ ಕೆ.ಈ. ಕಾಂತೇಶ್ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ ನಗರದ ಜೈಲ್‌ ವೃತ್ತದಿಂದ ಆರಂಭಗೊಂಡು ದುರ್ಗಿಗುಡಿ ರಸ್ತೆ, ಸೀನಪ್ಪ ಶೆಟ್ಟಿ (ಗೋಪಿವೃತ್ತ) ವೃತ್ತ ಮಾರ್ಗವಾಗಿ ಮಹಾವೀರ ವೃತ್ತ ತಲುಪಿತು. ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಭಾಗಿವಹಿಸಿದ್ದರು.

ಪ್ರತಿಭಟನೆಯಲ್ಲಿ ಮಹಾನಗರ ಪಾಲಿಕೆ ಮಾಜಿ ಮೇಯರ್‌ ಸುವರ್ಣ ಶಂಕರ್‌, ಸದಸ್ಯರಾದ ವಿಶ್ವಾಸ್, ಶಂಕರ್ ಗನ್ನಿ, ಮಹಾಲಿಂಗ ಶಾಸ್ತ್ರಿ, ದಿಲೀಪ್ ಕುಮಾರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.