ನೇಹಾ ಕೊಲೆಗಾರನಿಗೆ ಗಲ್ಲು ಶಿಕ್ಷೆಯಾಗಲಿ: ಗುರು ಮಠಪತಿ

| Published : Apr 21 2024, 02:15 AM IST

ನೇಹಾ ಕೊಲೆಗಾರನಿಗೆ ಗಲ್ಲು ಶಿಕ್ಷೆಯಾಗಲಿ: ಗುರು ಮಠಪತಿ
Share this Article
  • FB
  • TW
  • Linkdin
  • Email

ಸಾರಾಂಶ

ನೇಹಾ ಹಿರೇಮಠ ಅವಳನ್ನು ಕೊಲೆಗೈದ ದುಷ್ಕರ್ಮಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ವೀರಶೈವ ಸಮಾಜ ಹಾಗೂ ಬೇಡಜಂಗಮ ಸಮಾಜದ ವತಿಯಿಂದ ದಾಂಡೇಲಿಯಲ್ಲಿ ರಾಜ್ಯಪಾಲರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

ದಾಂಡೇಲಿ: ನೇಹಾ ಹಿರೇಮಠ ಅವಳನ್ನು ಕೊಲೆಗೈದ ದುಷ್ಕರ್ಮಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ವೀರಶೈವ ಸಮಾಜ ಹಾಗೂ ಬೇಡಜಂಗಮ ಸಮಾಜದ ವತಿಯಿಂದ ರಾಜ್ಯಪಾಲರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬೇಡಜಂಗಮ ಸಮಾಜದ ಉಪಾಧ್ಯಕ್ಷ ಗುರು ಮಠಪತಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸದಸ್ಯ ನಿರಂಜನ ಹಿರೇಮಠ ಪುತ್ರಿಯನ್ನು ಫಯಾಜ್ ಚಾಕುವಿನಿಂದ ಇರಿದು ಹತ್ಯೆ ಗೈದಿರುವುದು ಖಂಡನೀಯ. ಇಂತಹ ಜಿಹಾದಿ ಮನಸ್ಥಿತಿಗಳು ಕರ್ನಾಟಕದಲ್ಲಿ ಹೆಚ್ಚುತ್ತಿರುವುದು ಹಾಗೂ ಇದಕ್ಕೆ ಆಡಳಿತ ಪಕ್ಷದ ಬೆಂಬಲವಿರುವುದು ಖೇದಕರ ಸಂಗತಿ. ಇಂತಹ ಕೃತ್ಯ ಎಸಗಿದ ವ್ಯಕ್ತಿಯ ವಿರುದ್ಧ ಪೊಲೀಸ್ ವಿಚಾರಣೆ ತೀವ್ರಗೊಳಿಸಿ ದುಷ್ಕರ್ಮಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಸಮುದಾಯದ ಪರವಾಗಿ ಆಗ್ರಹಿಸಿದರು. ವೀರಶೈವ ಸಮಾಜದ ಅಧ್ಯಕ್ಷ ಬಸವರಾಜ ಕಲಶೆಟ್ಟಿ ಮಾತನಾಡಿ, ನೇಹಾ ಹಿರೇಮಠ ಅವಳನ್ನು ಅದೇ ಕಾಲೇಜಿನ ಫಯಾಜ್ ಎಂಬಾತನು ಪ್ರೀತಿಸಲು ಒತ್ತಾಯಿಸಿ ಕಿರುಕುಳ ನೀಡುತ್ತಿದ್ದನು. ಅದನ್ನು ವಿರೋಧಿಸಿದ ನೇಹಾಳನ್ನು ಗುರುವಾರ ಏಕಾಏಕಿ ಚಾಕುವಿನಿಂದ ಇರಿದು ಹತ್ಯಗೈದಿದ್ದಾನೆ. ಭಾರತ ಸೌಹಾರ್ದಯುತ ರಾಷ್ಟ್ರ. ಇಂತಹ ಕೃತ್ಯಗಳಿಂದ ಹೆಣ್ಣುಮಕ್ಕಳ ಜೀವ ರಕ್ಷಣೆ ದುಸ್ತರವಾಗುತ್ತಿದೆ. ರಾಜ್ಯ ಸರ್ಕಾರದ ಆಡಳಿತ ವೈಫಲ್ಯವು ಕೂಡ ಈ ಘಟನೆಯಿಂದ ಎದ್ದು ಕಾಣುತ್ತಿದೆ. ಮೃತ ಯುವತಿಯ ಕುಟುಂಬಕ್ಕೆ ನೇಹಾಳ ಸಾವನ್ನು ತಡೆದುಕೊಳ್ಳುವ ಶಕ್ತಿಯನ್ನು ಆ ದೇವರು ನೀಡಲಿ. ಇಂತಹ ದುಷ್ಕೃತ್ಯವನ್ನು ಎಸಗಿದ ದುಷ್ಕರ್ಮಿಗೆ ಸಮಾಜದಲ್ಲಿ ಜೀವಿಸಲು ಯಾವುದೇ ಅರ್ಹತೆ ಇಲ್ಲ. ಇಂತಹ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಆಗ ಮಾತ್ರ ತಪ್ಪು ಮಾಡುವ ರಾಕ್ಷಸರಿಗೆ ಭಯ ಹುಟ್ಟುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಸಾಮೂಹಿಕವಾಗಿ ನೇಹಾ ಹಿರೇಮಠ ಭಾವಚಿತ್ರಕ್ಕೆ ಮೇಣದ ಬತ್ತಿ ಬೆಳಗುವ ಮೂಲಕ ನೇಹಾ ಹಿರೇಮಠ ಅವಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ದಾಂಡೇಲಿ ತಹಸೀಲ್ದಾರ್‌ ಕಚೇರಿ ಸಿಬ್ಬಂದಿ ಗೌಡಪ್ಪ ಬಾನಕದಿನ್ನಿ ಮನವಿ ಸ್ವೀಕರಿಸಿದರು.

ಸಮುದಾಯದ ಪ್ರಮುಖರಾದ ಮಧುಕೇಶ್ವರ ಹಿರೇಮಠ, ಡಾ. ಶೇಖರ ಹಂಚಿನಾಳಮಠ, ಶಂಕ್ರಯ್ಯ ಹಿರೇಮಠ, ಚಂದ್ರು ಮಾಳಿ, ಶಂಕರಯ್ಯ ಜಡೆಹಿರೇಮಠ, ಈರಯ್ಯ ಸಾಲಿಮಠ, ಹನುಮಂತ ಕಾರಗಿ, ಶ್ರೀಶೈಲ ಹಿರೇಮಠ, ಗೀತಾ ಶಿಕಾರಿಪುರ, ಕೆಬಿ ನಂಜುಂಡಪ್ಪ, ಡಾ. ಕೆಂಬಾವಿ, ಮಂಗಳಾ ವಡೇಕರ, ಮೈತ್ರಾ ಜಿಗಳಿ, ಅಕ್ಷತಾ, ಗಿರಿಜಾ ಹಿರೇಮಠ, ಸಾವಿತ್ರಿ ಬಡಿಗೇರ, ದೇವಕ್ಕ ಕೆರೆಮನೆ, ಸುಜಾತಾ ಎಲಿಗಾರ ಇದ್ದರು.

ನೇಹಾ ಹಿರೇಮಠ ಹತ್ಯೆ: ಕಠಿಣ ಶಿಕ್ಷೆಗೆ ಆಗ್ರಹ

ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಮಾಡಿದವನ ಮೇಲೆ ಕಾನೂನು ಕ್ರಮ ಕೈಗೊಂಡು ಕಠಿಣ ಶಿಕ್ಷೆ ವಿಧಿಸಬೇಕೆಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎನ್. ದುಂಡಸಿ ಆಗ್ರಹಿಸಿದ್ದಾರೆ.

ಶನಿವಾರ ಮುಂಡಗೋಡದಲ್ಲಿ ಪತ್ರಿಕಾ ಹೇಳಿಕೆ ನೀಡಿದ ಅವರು, ಕಾರಣ ಏನೇ ಇರಬಹುದು, ಆದರೆ ಒಬ್ಬ ಹೆಣ್ಣು ಮಗಳನ್ನು ಅಮಾನುಷವಾಗಿ ಹತ್ಯೆ ಮಾಡಿರುವುದು ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಕೃತ್ಯವಾಗಿದೆ. ಇದನ್ನು ಯಾರೂ ಸಹಿಕೊಳ್ಳಲಾಗುವುದಿಲ್ಲ. ಪೊಲೀಸ್ ಇಲಾಖೆ ಹಾಗೂ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಆರೋಪಿ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಕಠಿಣ ಶಿಕ್ಷೆಗೊಳಪಡಿಸಬೇಕಲ್ಲದೇ ಇನ್ನು ಮುಂದೆ ಕೂಡ ಇಂತಹ ಘಟನೆ ನಡೆಯದಂತೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.