2024ರ ಏಪ್ರಿಲ್ 18ರಂದು ಇಲ್ಲಿನ ಖಾಸಗಿ ಕಾಲೇಜಿನಲ್ಲಿ ತರಗತಿ ಮುಗಿಸಿ ಹೊರಬರುತ್ತಿದ್ದ ವೇಳೆ ನೇಹಾನನ್ನು ಫಯಾಜ್ ಎಂಬಾತ ಬರ್ಬರವಾಗಿ ಇರಿದು ಹತ್ಯೆ ಮಾಡಿದ್ದ. ಈ ಘಟನೆ ರಾಜ್ಯವಷ್ಟೇ ಅಲ್ಲ. ದೇಶಾದ್ಯಂತ ಸಂಚಲನ ಮೂಡಿಸಿತ್ತು.
ಶಿವಾನಂದ ಗೊಂಬಿ
ಹುಬ್ಬಳ್ಳಿ:ಕಾಲೇಜು ಪ್ರಾಂಗಣದಲ್ಲಿ ಹಾಡಹಗಲೇ ನೇಹಾ ಹಿರೇಮಠ ಭೀಕರವಾಗಿ ಹತ್ಯೆಗೀಡಾಗಿ ಇಂದಿಗೆ (ಏಪ್ರಿಲ್ 18) ಬರೋಬ್ಬರಿ 2 ವರ್ಷ. ಆದರೆ, ಈ ವರೆಗೂ ಈಕೆಯ ಸಾವಿಗೆ ನ್ಯಾಯ ದೊರಕಿಲ್ಲ. ತ್ವರಿತ ನ್ಯಾಯಾಲಯ ಸ್ಥಾಪಿಸಿ ಶೀಘ್ರ ನ್ಯಾಯ ಕೊಡಿಸುತ್ತೇವೆ ಎಂದಿದ್ದ ಸರ್ಕಾರದ ಭರವಸೆ ಹುಸಿಯಾಗಿದೆ.
2024ರ ಏಪ್ರಿಲ್ 18ರಂದು ಇಲ್ಲಿನ ಖಾಸಗಿ ಕಾಲೇಜಿನಲ್ಲಿ ತರಗತಿ ಮುಗಿಸಿ ಹೊರಬರುತ್ತಿದ್ದ ವೇಳೆ ಆಕೆಯನ್ನು ಫಯಾಜ್ ಎಂಬಾತ ಬರ್ಬರವಾಗಿ ಇರಿದು ಹತ್ಯೆ ಮಾಡಿದ್ದ. ಈ ಘಟನೆ ರಾಜ್ಯವಷ್ಟೇ ಅಲ್ಲ. ದೇಶಾದ್ಯಂತ ಸಂಚಲನ ಮೂಡಿಸಿತ್ತು. ದೇಶಾದ್ಯಂತ ರಸ್ತೆ ತಡೆ, ಪ್ರತಿಭಟನೆಗಳೆಲ್ಲ ನಡೆದು ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ರಾಜಕೀಯ ಸಂಘರ್ಷಕ್ಕೂ ಈ ಪ್ರಕರಣ ನಾಂದಿಯಾಗಿತ್ತು.ಹುಸಿಯಾಯ್ತು ಭರವಸೆ:
ಲೋಕಸಭೆ ಚುನಾವಣೆ ವೇಳೆಯೇ ಆಗಿದ್ದ ಈ ಕೊಲೆ ಕಾಂಗ್ರೆಸ್ ಸರ್ಕಾರವನ್ನು ಅಕ್ಷರಶಃ ನಡುಗಿಸಿತ್ತು. ಅದರಲ್ಲೂ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನಯ್ಯ ಹಿರೇಮಠ ಪುತ್ರಿಯೇ ಮೃತಪಟ್ಟಿದ್ದು ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಿತ್ತು. ತನ್ನ ಪಕ್ಷದ ಕಾರ್ಯಕರ್ತರು, ಅವರ ಮಕ್ಕಳನ್ನೇ ರಕ್ಷಿಸದ ಸರ್ಕಾರ ಜನಸಾಮಾನ್ಯರ ರಕ್ಷಣೆ ಹೇಗೆ ಮಾಡುತ್ತದೆ ಎಂದೆಲ್ಲ ಬಿಜೆಪಿ ಹರಿಹಾಯ್ದಿತ್ತು.ಆಗ ಸಾರ್ವಜನಿಕರ ಒತ್ತಡಕ್ಕೆ ಮಣಿದು, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲೋ ಗೃಹ ಸಚಿವ ಜಿ. ಪರಮೇಶ್ವರ ಈ ಪ್ರಕರಣವನ್ನು ಅತ್ಯಂತ ಶೀಘ್ರದಲ್ಲೇ ಬಗೆಹರಿಸಲಾಗುವುದು. ನೇಹಾ ಸಾವಿಗೆ ನ್ಯಾಯ ಒದಗಿಸಲಾಗುವುದು. ಇದಕ್ಕಾಗಿ ತ್ವರಿತ ನ್ಯಾಯಾಲಯ ಸ್ಥಾಪಿಸುವುದಾಗಿ ಹೇಳಿದ್ದರು. ಆದರೆ, ಅದು ಭರವಸೆಯಾಗಿಯೇ ಉಳಿಯಿತು. ಈವರೆಗೂ ಫಾಸ್ಟ್‌ಟ್ರ್ಯಾಕ್ ಕೋರ್ಟ್ ಸ್ಥಾಪನೆಯಾಗಲಿಲ್ಲ.
ಈಗ ಏನಿದೆ ?ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವಿಶೇಷ ತನಿಖಾ ವಿಭಾಗಕ್ಕೆ (ಸಿಒಡಿ) ಪ್ರಕರಣ ನೀಡಲಾಯಿತು. ತನಿಖೆ ನಡೆಸಿ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದು, ಅದರಲ್ಲಿ ಪ್ರೀತಿ ನಿರಾಕರಣೆ ಕೊಲೆಗೆ ಕಾರಣ ಎಂಬ ಅಂಶ ಉಲ್ಲೇಖಿಸಿದೆ.
ಇದೀಗ ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಫಯಾಜ್ ಬಂಧನವಾಗಿ ಜೈಲು ಸೇರಿದ್ದಾನೆ. ಬರೋಬ್ಬರಿ 99 ಸಾಕ್ಷಿಗಳಿದ್ದು ಅವುಗಳ ವಿಚಾರಣೆ ನಡೆಯಬೇಕಿದೆ. ಹುಬ್ಬಳ್ಳಿ ಸೆಷನ್ಸ್ ನ್ಯಾಯಾಲಯದಲ್ಲಿ 2 ಬಾರಿ, ಹೈಕೋರ್ಟ್‌ಲ್ಲಿ 2 ಬಾರಿ ಆರೋಪಿಯ ಜಾಮೀನು ಅರ್ಜಿ ತಿರಸ್ಕಾರಗೊಂಡಿದೆ. ಇದೀಗ 5ನೇ ಬಾರಿಗೆ ಜಾಮೀನಿಗೆ ಹೈಕೋರ್ಟ್‌ಲ್ಲಿ ಅರ್ಜಿ ಸಲ್ಲಿಸಿದ್ದಾನೆ ಫಯಾಜ್.ಆಕ್ರೋಶ:
ಪ್ರಕರಣ ಇನ್ನೂ ಇತ್ಯರ್ಥ ಆಗದೆ ಇರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಸರ್ಕಾರ ಫಾಸ್ಟ್ ಟ್ರ್ಯಾಕ್ ಕೋರ್ಟ್ ರಚಿಸಿ ತ್ವರಿತ ನ್ಯಾಯ ಕೊಡಿಸಲಾಗುವುದು ಎಂದು ಹೇಳಿತ್ತು. ಅದು ಆಗಿಲ್ಲ. ಈ ಪ್ರಕರಣ ನಡೆದ ಮೇಲೂ ಸಾಕಷ್ಟು ಲವ್ ಜಿಹಾದ್‌ನಂತಹ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹೆಣ್ಣು ಮಕ್ಕಳಿಗೆ ಈ ಸರ್ಕಾರದಲ್ಲಿ ರಕ್ಷಣೆಯೇ ಇಲ್ಲದಂತಾಗಿದೆ. ಮೊದಲಿಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್ ಮಾಡಿ ನೇಹಾ ಸಾವಿಗೆ ನ್ಯಾಯ ಒದಗಿಸಬೇಕು ಎಂಬ ಬೇಡಿಕೆ ಸಾರ್ವಜನಿಕರದ್ದು.ಸಿಬಿಐ/ಎನ್‌ಐಎಗೆ ಕೊಡಿ:
ನಮಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ಇದಾದ ಬಳಿಕವೂ ಇಂಥ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಲೇ ಇವೆ. ಇದೊಂದು ದೊಡ್ಡ ಜಾಲ ಎಂದೆನಿಸುತ್ತದೆ. ಆದಕಾರಣ ನೇಹಾ ಪ್ರಕರಣವನ್ನು ಸಿಬಿಐ ಅಥವಾ ಎನ್‌ಐಎಗೆ ವಹಿಸಬೇಕು. ಜತೆಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್ ಮೂಲಕವೇ ತ್ವರಿತಗತಿಯಲ್ಲಿ ನ್ಯಾಯ ಸಿಗುವಂತೆ ಮಾಡಬೇಕು ಎಂದು ಕುಟುಂಬಸ್ಥರು ಆಗ್ರಹಿಸುತ್ತಾರೆ.ನಮ್ಮ ಮಗಳು ಮೃತಪಟ್ಟಾಗ ತ್ವರಿತ ನ್ಯಾಯಾಲಯದ ಮೂಲಕ ಶೀಘ್ರದಲ್ಲೇ ನ್ಯಾಯ ಒದಗಿಸುವುದಾಗಿ ಗೃಹ ಸಚಿವ ಜಿ. ಪರಮೇಶ್ವರ ಭರವಸೆ ನೀಡಿದ್ದರು. ಆದರೆ, ಅದು ಹುಸಿಯಾಗಿದೆ. ಇದು ಕೂಡ ಲವ್ ಜಿಹಾದ್ ಆಗಿತ್ತು. ಅಂಥ ಪ್ರಕರಣಗಳು ನಗರದಲ್ಲಿ ಸಾಕಷ್ಟು ನಡೆಯುತ್ತಿವೆ. ಅದಕ್ಕಾಗಿ ಸಿಬಿಐ ಅಥವಾ ಎನ್‌ಐಎ ತನಿಖೆಗೆ ನೀಡಬೇಕು.ನಿರಂಜನಯ್ಯ ಹಿರೇಮಠ, ನೇಹಾ ತಂದೆ, ಪಾಲಿಕೆ ಕಾಂಗ್ರೆಸ್ ಸದಸ್ಯ