ಸಾರಾಂಶ
, ಶಾಸಕ ಶರತ್ ಬಚ್ಚೇಗೌಡ ಶಿಕ್ಷಣ ಪ್ರೇಮಿಗಳಾಗಿ ತಾಲೂಕಿನಲ್ಲಿ ಸರ್ಕಾರಿ ಶಾಲೆಗಳ ಅಭ್ಯುದಯಕ್ಕೆ ಶ್ರಮಿಸುತ್ತಿದ್ದಾರೆ. ಸಿಎಸ್‌ಆರ್ ಅನುದಾನ ಬಳಕೆ ಮಾಡಿಕೊಂಡು ಸರ್ಕಾರಿ ಶಾಲೆಗಳಿಗೆ ಹೊಸ ರೂಪ ಕೊಡಲು ಮುಂದಾಗಿರುವುದು ಪ್ರಶಂಸನೀಯ.
ಕನ್ನಡಪ್ರಭವಾರ್ತೆ ಹೊಸಕೋಟೆ
ಭಾರತ ದೇಶದ ಪ್ರಥಮ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರು ತಮ್ಮ ಹುಟ್ಟುಹಬ್ಬವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಣೆ ಮಾಡಿಕೊಂಡಿದ್ದು ಮಕ್ಕಳ ಮೇಲಿನ ಅವರ ಪ್ರೀತಿ ಹಾಗೂ ದೇಶದ ಮುಂದಿನ ಸಾಕ್ಷರತೆ ಬಗ್ಗೆ ಇದ್ದ ಕಾಳಜಿ ತೋರುತ್ತದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.ನಗರದ ಜಿಕೆಬಿಎಂಎಸ್ ಶಾಲೆಯಲ್ಲಿ ಮಕ್ಕಳ ದಿನಾಚರಣೆ, ದಾನಿಗಳಿಂದ ಡೆಸ್ಕ್, ಬೋರ್ಡ್ ಹಾಗೂ 1000 ನೋಟ್ ಪುಸ್ತಕ ವಿತರಿಸಿ ಮಾತನಾಡಿದರು.
ಸ್ವಾತಂತ್ರ ಸಂದರ್ಭದಲ್ಲಿ ದೇಶದ ಸಾಕ್ಷರತೆ ಕೇವಲ 20 ರಷ್ಟಿತ್ತು. ಆದರೆ ಇಂದು ಶೇಕಡ 80ಕ್ಕೂ ಹೆಚ್ಚು ಸಾಕ್ಷರತಾ ರಾಷ್ಟ್ರವಾಗಿ ಮುನ್ನುಗುತಿದ್ದು ಇದಕ್ಕೆ ಕಾರಣ ನೆಹರು ಎಂದ ಅವರು, ದೇಶದಲ್ಲಿ ಐಐಟಿ, ಐಐಎಂ ಹಾಗೂ ಅನೇಕ ವಿಶ್ವವಿದ್ಯಾನಿಲಯಗಳ ಸ್ಥಾಪನೆಗೆ ನೆಹರುರವರೇ ಕಾರಣ ಎಂದ ಅವರು, ದೇಶ ಮುಂದುವರೆಯಬೇಕಾದರೆ ಶಿಕ್ಷಣ ಅತಿ ಮುಖ್ಯವಾಗಿದೆ. ಇದರ ಜೊತೆ ತಂತ್ರಜ್ಞಾನದಲ್ಲೂ ದೇಶ ಮುಂದುವರೆಯುತ್ತಿದ್ದು, ಇಂದಿನ ಮಕ್ಕಳು ಸಹ ಉತ್ತಮ ವಿದ್ಯಾಭ್ಯಾಸ ಹೊಂದಿ ದೇಶದ ಅಭಿವೃದ್ಧಿಯ ಭಾಗವಾಗಬೇಕು ಎಂದರು.ಎಸ್‌ಡಿಎಂಸಿ ಗೌರವಾಧ್ಯಕ್ಷ ಡಿ.ಎಸ್.ರಾಜ್ ಕುಮಾರ್ ಮಾತನಾಡಿ, ಶಾಸಕ ಶರತ್ ಬಚ್ಚೇಗೌಡ ಶಿಕ್ಷಣ ಪ್ರೇಮಿಗಳಾಗಿ ತಾಲೂಕಿನಲ್ಲಿ ಸರ್ಕಾರಿ ಶಾಲೆಗಳ ಅಭ್ಯುದಯಕ್ಕೆ ಶ್ರಮಿಸುತ್ತಿದ್ದಾರೆ. ಸಿಎಸ್‌ಆರ್ ಅನುದಾನ ಬಳಕೆ ಮಾಡಿಕೊಂಡು ಸರ್ಕಾರಿ ಶಾಲೆಗಳಿಗೆ ಹೊಸ ರೂಪ ಕೊಡಲು ಮುಂದಾಗಿರುವುದು ಪ್ರಶಂಸನೀಯ ಎಂದರು.
ನಗರಸಭೆ ಸದಸ್ಯ ಗೌತಮ್ ಸುಮಾರು 8 ಲಕ್ಷ ರು. ಮೊತ್ತದ 100 ಡೆಸ್ಕ್ ಹಾಗೂ ಬ್ರಿಗೇಡ್ ಗ್ರೂಪ್ ವತಿಯಿಂದ 4 ಲಕ್ಷ ರು. ವೆಚ್ಚದ ಆಧುನಿಕ ಅನ್ನ ಸಾಂಬರ್ ಮಾಡುವ ಅಡುಗೆ ಪರಿಕರ, ರೋಟರಿ ಸಂಸ್ಥೆ ವತಿಯಿಂದ ಒಂದು ಸಾವಿರ ನೋಟ್ ಪುಸ್ತಕಗಳ ವಿತರಣೆ ಹಾಗೂ ಗಾರ್ಡನ್ ಸಿಟಿ ಯೂನಿವರ್ಸಿಟಿ ವತಿಯಿಂದ 10 ಸಾವಿರ ರು. ವೆಚ್ಚದ 6 ಹೈಟೆಕ್ ಕಲಿಕಾ ಬೋರ್ಡ್ ಗಳನ್ನು ನೀಡಲಾಯಿತು. ತಾಲೂಕಿನ ಸರ್ಕಾರಿ ಶಾಲೆಯ 20 ಸಾವಿರ ವಿದ್ಯಾರ್ಥಿಗಳಿಗೆ ನಂದಿನಿ ಡೈರಿ ವತಿಯಿಂದ ಸಿಹಿ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಮಂಡಳಿಯ ಗೌರವಾಧ್ಯಕ್ಷ ಡಿ.ಎಸ್.ರಾಜ್ ಕುಮಾರ್, ನಗರಸಭೆ ಸದಸ್ಯ ಗೌತಮ್, ರೋಟರಿ ಅಧ್ಯಕ್ಷ ಮುನಿರಾಜ್, ಉದ್ಯಮಿ ಬಿ.ವಿ ಬೈರೇಗೌಡ, ಯೋಜನಾ ಪ್ರಾಧಿಕಾರದ ನಿರ್ದೇಶಕ ಡಾ.ಎಚ್.ಎಂ ಸುಬ್ಬರಾಜ್, ಮುಖಂಡರಾದ ಬಚ್ಚಣ್ಣ, ಆರ್‌ಟಿಸಿ ಗೋವಿಂದರಾಜ್, ವಿಜಯ್ ಕುಮಾರ್, ಶಾಂತಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ್, ಮುಖ್ಯ ಶಿಕ್ಷಕಿ ರಾಜೇಶ್ವರಿ, ಹಾಗೂ ಶಾಲಾ ಸಿಬ್ಬಂದಿ ಹಾಜರಿದ್ದರು.