ಎಪಿಎಂಸಿ ಮುಖ್ಯ ಮಾರುಕಟ್ಟೆಯಲ್ಲಿ ನಿವೇಶನಗಳನ್ನು ಮಂಜೂರು ಮಾಡುವಂತೆ ಆಗ್ರಹಿಸಿ ನೆಹರು ಮಾರ್ಕೇಟ್ ವರ್ತಕರ ಸಂಘದ ಪದಾಧಿಕಾರಿಗಳು ಹಾಗೂ ವರ್ತಕರು ಮಂಗಳವಾರ ಎಪಿಎಂಸಿ ಸಿಬ್ಬಂದಿ ಮೂಲಕ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು.

ರಾಣಿಬೆನ್ನೂರು: ಎಪಿಎಂಸಿ ಮುಖ್ಯ ಮಾರುಕಟ್ಟೆಯಲ್ಲಿ ನಿವೇಶನಗಳನ್ನು ಮಂಜೂರು ಮಾಡುವಂತೆ ಆಗ್ರಹಿಸಿ ನೆಹರು ಮಾರ್ಕೇಟ್ ವರ್ತಕರ ಸಂಘದ ಪದಾಧಿಕಾರಿಗಳು ಹಾಗೂ ವರ್ತಕರು ಮಂಗಳವಾರ ಎಪಿಎಂಸಿ ಸಿಬ್ಬಂದಿ ಮೂಲಕ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು.

ಈ ಸಮಯದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಎಪಿಎಂಸಿಯಿಂದ ಅಧಿಕೃತ ಲೈಸೆನ್ಸ್ ಪಡೆದು ನೆಹರು ಮಾರ್ಕೆಟ್ ಪ್ರದೇಶದಲ್ಲಿ ದಲಾಲರು, ಖರೀದಿದಾರರು ಹಲವಾರು ವರ್ಷಗಳಿಂದ ವಹಿವಾಟು ಮಾಡುತ್ತ ಬಂದಿದ್ದೇವೆ. ನಮ್ಮ ಸಂಘದ ವ್ಯಾಪ್ತಿಯಲ್ಲಿರುವ 61 ವ್ಯಾಪಾರಸ್ಥರು ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಇದು ವರೆಗೂ ಯಾವುದೇ ನಿವೇಶನ ಹೊಂದಿಲ್ಲ. ತಾವುಗಳು (ಎಪಿಎಂಸಿ ಕಾರ್ಯದರ್ಶಿಗಳು) ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ವ್ಯಾಪಾರ, ವಹಿವಾಟು ಮಾಡುವಂತೆ ನೋಟಿಸ್‌ ನೀಡಿದ್ದಿರಿ. ಆದರೆ, ನಮಗೆ ಅಲ್ಲಿ ವಹಿವಾಟು ಮಾಡಲು ನಿವೇಶನ ಇಲ್ಲ. ಕೂಡಲೇ ನಿವೇಶನಗಳನ್ನು ಮಂಜೂರು ಮಾಡಬೇಕು. ಇದಲ್ಲದೆ ಈ ಹಿಂದೆ ಎಪಿಎಂಸಿಗೆ ಸೇರಿದ ಜಾನುವಾರು ಮಾರುಕಟ್ಟೆ ಉಪ ಪ್ರಾಂಗಣದಲ್ಲಿ ತಾತ್ಕಾಲಿಕ ಶೆಡ್ ಸಹಿತ ಖುಲ್ಲಾ ಜಾಗೆಯನ್ನು ಲೀವ್ ಆಂಡ್ ಲೈಸೆನ್ಸ್ ಶುಲ್ಕದ ಆಧಾರದ ಮೇಲೆ ಹಂಚಿಕೆ ಮಾಡಿ ವ್ಯಾಪಾರಸ್ಥರಿಂದ ಬಾಡಿಗೆಯನ್ನು ತುಂಬಿಸಿಕೊಳ್ಳಲಾಗಿದೆ. ಆದರೆ, ಇದುವರೆಗೂ ನಮಗೆ ಅವುಗಳನ್ನು ತಾಬಾಕ್ಕೆ ನೀಡಿಲ್ಲ. ಇದಕ್ಕೆ ಸಂಬಂಧಿಸಿದಂತೆ ವ್ಯಾಪಾರಸ್ಥರು ಹಲವಾರು ಬಾರಿ ಮೌಖಿಕವಾಗಿ ತಮ್ಮ ಬಳಿ ವಿನಂತಿಸಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಏಕೆಂದರೆ ಆ ಜಾಗೆಯನ್ನು ಬೇರೆ ಇಲಾಖೆಯವರಿಗೆ ಹಸ್ತಾಂತರ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಆದ್ದರಿಂದ ನಮ್ಮ ವ್ಯಾಪಾರಸ್ಥರು ಅಧಿಕೃತವಾಗಿ ನೀಡಿರುವ ಹಣವನ್ನು ಕೂಡಲೇ ಇಲಾಖೆಯಿಂದ ಬಡ್ಡಿ ಸಮೇತ ಮರಳಿಸಬೇಕು ಎಂದು ಆಗ್ರಹಿಸಿದರು.

ಗದಿಗೆಪ್ಪ ಹೊಟ್ಟಿಗೌಡ್ರ, ಅಶೋಕ ಗಂಗನಗೌಡ್ರ, ಜಟ್ಟೆಪ್ಪ ಕರೇಗೌಡ್ರ, ಬಸವರಾಜ ಕಂಬಳಿ, ಗಣೇಶ ಕಂಬಳಿ, ಹಾಲಪ್ಪ ಮುದ್ದಿಯವರ, ಸೋಮು ಗೌಡಶಿವಣ್ಣನವರ, ಗೋಪಾಲರೆಡ್ಡಿ, ನಾಗರಾಜ ಬಣಕಾರ, ರಾಜು ನರಸಗೊಂಡರ, ನವೀನ ದೊಡ್ಡಗೌಡ್ರ, ಪುಟ್ಟನಗೌಡ್ರ ತೆಂಬದ, ಮಂಜು ಗೌಡಶಿವಣ್ಣನವರ, ಸತೀಶ ಅಜರೆಡ್ಡಿ, ಬಸವರಾಜ ಚೌಡಪ್ಪಳವರ ಮತ್ತಿತರರಿದ್ದರು.