ಸಾರಾಂಶ
ಬಾಲಕೃಷ್ಣ ಜಾಡಬಂಡಿ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಸ್ಮಾರ್ಟ್ಸಿಟಿ ಹುಬ್ಬಳ್ಳಿ ನಗರದ ಹೃದಯಭಾಗದಲ್ಲಿರುವ ನೆಹರು ಕ್ರೀಡಾಂಗಣ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ.
ಕ್ರೀಡಾಂಗಣದ ಆವರಣದಲ್ಲಿ ಒಂದು ಕಡೆ ಎಲ್ಲೆಂದರಲ್ಲಿ ಬಿದ್ದಿರುವ ಕಸ, ಮದ್ಯದ ಬಾಟಲ್‌ಗಳು, ಮತ್ತೊಂದು ಕಡೆ ಬಾಗಿಲು ಮುಚ್ಚಿರುವ ಶೌಚಾಲಯಗಳು. ಹಳೆ ಶೌಚಾಲಯ ಮತ್ತು ಸ್ಮಾರ್ಟ್‌ಸಿಟಿ ಯೋಜನೆಯಡಿ ಕ್ರೀಡಾಂಗಣ ಅಭಿವೃದ್ಧಿ ಪಡಿಸಿದಾಗ ನಿರ್ಮಿಸಿದ ಹೊಸ ಶೌಚಾಲಯದ ಕೊಠಡಿಗಳು ಈ ವರೆಗೆ ಬಾಗಿಲು ತೆರೆದಿಲ್ಲ. ಇದರಿಂದ ಕ್ರೀಡಾ ಪ್ರೇಮಿಗಳು ಮೂತ್ರವಿಸರ್ಜನೆಗೆ ಬಯಲನ್ನೇ ಅವಲಂಬಿಸಿದ್ದಾರೆ. ಇದು ಕ್ರೀಡಾಂಗಣದ ಸ್ವಚ್ಛತೆ ಹಾಗೂ ಅಭಿವೃದ್ಧಿಗೆ ಹಿನ್ನಡೆ ತಂದಿದೆ.ಸ್ಮಾರ್ಟ್‌ಸಿಟಿ ಯೋಜನೆಯಡಿ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಿ ವಾಯುವಿಹಾರಿಗಳಿಗೆ ಜಿಮ್ ಸಲಕರಣೆ ಅಳವಡಿಸಲಾಗಿದೆ. ವಾಲಿಬಾಲ್, ಬಾಸ್ಕೆಟ್ ಬಾಲ್ ಕೋರ್ಟ್ ಸಿದ್ಧಪಡಿಸಲಾಗಿದೆ. ಜೊತೆಗೆ ಇಲ್ಲಿ ನಿತ್ಯ ನೂರಾರು ಜನರು ಕ್ರಿಕೆಟ್, ಪುಟ್ಬಾಲ್, ವಾಲಿಬಾಲ್ ಆಡುತ್ತಾರೆ, ಬೆಳಗ್ಗೆ ಹಾಗೂ ಸಂಜೆ ವಾಯುವಿಹಾರ ಮಾಡುತ್ತಾರೆ. ಆದರೆ, ಇಲ್ಲಿ ಮೂಲಭೂತ ಸೌಲಭ್ಯ ಎನ್ನುವುದು ಮರೀಚಿಕೆಯಾಗಿದೆ.
ಈ ಮೈದಾನದಲ್ಲಿ ಕೆಲ ವರ್ಷಗಳ ಹಿಂದೆ ಕುಡಿಯಲು ನೀರು, ಶೌಚಾಲಯ ವ್ಯವಸ್ಥೆ ಉತ್ತಮವಾಗಿತ್ತು. ಸುಮಾರು 40ಕ್ಕೂ ಹೆಚ್ಚಿನ ನಳ ಇದ್ದವು. ಈಗ ಒಂದೂ ಇಲ್ಲವಾಗಿದೆ. ಕ್ರೀಡಾಪಟುಗಳು ಬೇಡವೆಂದರೂ ಕ್ರಿಕೆಟ್ ಅಂಗಣದಲ್ಲಿ ಬಾಸ್ಕೆಟ್‌ಬಾಲ್ ಅಂಕಣ ಹಾಕಲಾಗಿದೆ. ಜೊತೆಗೆ ಅಭಿವೃದ್ಧಿ ಹೆಸರಿನಲ್ಲಿ ಕ್ರೀಡಾಪ್ರೇಮಿಗಳನ್ನು ಮೂಲಭೂತ ಸೌಕರ್ಯಗಳಿಂದ ವಂಚಿಸಲಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಕ್ರೀಡಾಸಕ್ತರು ಆರೋಪಿಸಿದ್ದಾರೆ.6.4 ಎಕರೆ ವ್ಯಾಪ್ತಿಯಲ್ಲಿರುವ ನೆಹರು ಕ್ರೀಡಾಂಗಣ ಹೊರಾಂಗಣ ಮತ್ತು ಒಳಾಂಗಣವನ್ನು ಹೊಂದಿದೆ. ಒಳಾಂಗಣದಲ್ಲಿ ಶೆಟಲ್ ಬ್ಯಾಡ್ಮಿಂಟನ್, ಜಿಮ್, ಟೆಬಲ್ ಟೆನಿಸ್, ಕುಸ್ತಿ ಅಂಕಣ ಇದೆ. ಹೊರಾಂಗಣದಲ್ಲಿ ಕ್ರಿಕೆಟ್ ಮೈದಾನ, ಓಪನ್ ಜಿಮ್, ಬಾಸ್ಕೆಟ್ ಬಾಲ್, ವಾಲಿಬಾಲ್ ಅಂಕಣ ಇದೆ.
ಸ್ಮಾರ್ಟ್‌ಸಿಟಿ ಯೋಜನೆಯಡಿ ಸುಮಾರು ₹22 ಕೋಟಿ ವೆಚ್ಚದಲ್ಲಿ ನೆಹರು ಮೈದಾನವನ್ನು ಅಭಿವೃದ್ಧಿಪಡಿಸಲಾಗಿದೆ. ಒಳಾಂಗಣ ಮತ್ತು ಹೊರಾಂಗಣದಲ್ಲಿ ಸೂಕ್ತ ಕ್ರೀಡಾ ಅಂಕಣಗಳನ್ನು ನಿರ್ಮಿಸಲಾಗಿದೆ. ಪಾಲಿಕೆಗೆ ಹಸ್ತಾಂತರಿಸುವ ಪ್ರಕ್ರಿಯೆ ಹಂತದಲ್ಲಿದ್ದು, ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ. ಅದನ್ನು ಪಾಲಿಕೆಯಿಂದ ನಿರ್ವಹಣೆ ಮಾಡಬೇಕಾಗಿದೆ ಎನ್ನುತ್ತಾರೆ ಸ್ಮಾರ್ಟ್‌ಸಿಟಿ ಯೋಜನೆಯ ಉಪಪ್ರಧಾನ ವ್ಯವಸ್ಥಾಪಕ ಚನ್ನಬಸವರಾಜ ಧರ್ಮಂತಿ.ಕ್ರೀಡಾಂಗಣದ ಸ್ವಚ್ಛತೆಗೆ ರೋಲರ್ ನೀಡಬೇಕು. ಕ್ರೀಡೇತರ ಚಟುವಟಿಕೆಗಳಿಗೆ ಮೈದಾನದಲ್ಲಿ ಅವಕಾಶ ನೀಡಬಾರದು ಎನ್ನುವ ಒತ್ತಾಯವೂ ಇಲ್ಲಿನ ಕ್ರೀಡಾಪ್ರೇಮಿಗಳಿಂದ ಕೇಳಿಬರುತ್ತಿದೆ.
ನೆಹರು ಮೈದಾನ ಸ್ಮಾರ್ಟ್‌ಸಿಟಿ ಯೋಜನೆಯಡಿ ಅಭಿವೃದ್ಧಿಗೊಂಡಿದೆ. ಆದರೆ ಇನ್ನೂ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಶೀಘ್ರದಲ್ಲಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಕಲ್ಪಿಸಲು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ.ಕ್ರೀಡಾಂಗಣ ಅಭಿವೃದ್ಧಿ ಹೆಸರಿನಲ್ಲಿ ಸಾಕಷ್ಟು ಹಣ ಖರ್ಚು ಮಾಡಲಾಗಿದೆ. ಆದರೆ ಇಲ್ಲಿ ಅಭಿವೃದ್ಧಿಯೇ ಕಾಣುತ್ತಿಲ್ಲ. ನಿತ್ಯ ಬರುವವರಿಗೆ ಶೌಚಾಲಯ, ಕುಡಿಯಲು ನೀರಿನ ವ್ಯವಸ್ಥೆ ಇಲ್ಲ. ಸ್ವಚ್ಛತೆಯೂ ಮರೀಚಿಕೆಯಾಗಿದೆ ಎಂದು ನೆಹರು ಸ್ಟೇಡಿಯಂ ಯುನಿಟಿ ಮುಖಂಡ ಮಹಾದೇವ ಶಿಂದೆ ದೂರಿದ್ದಾರೆ.