ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಜಿಲ್ಲೆ ಹಾಗೂ ನೆರೆಯ ಮಹಾರಾಷ್ಟ್ರ ರಾಜ್ಯದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಕೃಷ್ಣಾ ಸೇರಿದಂತೆ ಜಿಲ್ಲೆಯ ನದಿಗಳು ಉಕ್ಕಿ ಹರಿಯುತ್ತಿವೆ. ಜಿಲ್ಲೆಯಲ್ಲಿ 22 ಸೇತುವೆ ಮುಳುಗಡೆಯಾಗಿವೆ.ಕೃಷ್ಣಾ, ಮಲಪ್ರಭಾ, ಘಟಪ್ರಭಾ, ವೇದಗಂಗಾ, ದೂಧಗಂಗಾ, ಹಿರಣ್ಯಕೇಶಿ, ಮಾರ್ಕಂಡೇಯ ನದಿ ಸೇರಿ ಇತರ ನದಿಗಳು, ಹಳ್ಳ-ಕೊಳ್ಳ ತುಂಬಿ ಹರಿಯುತ್ತಿವೆ. ಖಾನಾಪುರ, ಗೋಕಾಕ, ಮೂಡಲಗಿ, ಹುಕ್ಕೇರಿ, ಚಿಕ್ಕೋಡಿ, ನಿಪ್ಪಾಣಿ ತಾಲೂಕುಗಳಲ್ಲಿ 22 ಸೇತುವೆ ಮುಳುಗಡೆಯಾಗಿವೆ.
ದೂಧಗಂಗಾ ನದಿ ಮೇಲಿನ ಭೋಜ-ಕಾರದಗಾ ಸೇತುವೆ ಮೇಲೆ 16 ಅಡಿ ಅಡಿ, ಮಲ್ಲಿಕವಾಡ-ದಾನವಾಡ ಸೇತುವೆ ಮೇಲೆ 13 ಅಡಿ ಹಾಗೂ ಭೋಜ ಜನವಾಡ-ನಿಪ್ಪಾಣಿ ಕೆಳಸೇತುವೆ ಮೇಲೆ 12 ಅಡಿಗಿಂತ ಹೆಚ್ಚು ನೀರು ಹರಿಯುತ್ತಿದೆ.ಚಿಕ್ಕಹಟ್ಟಿಹೊಳಿ–ಚಿಕ್ಕಮುನವಳ್ಳಿ, ಚಿಗಡೊಳ್ಳಿ–ನಲ್ಲಾನಟ್ಟಿ, ಗೋಕಾಕ–ಲೋಳಸೂರ, ಮುನ್ಯಾಳ–ಹುಣಶ್ಯಾಳ ಪಿ.ಜಿ, ಪಟಗುಂದಿ–ತಿಗಡಿ, ಸುಣಧೋಳಿ–ಮೂಡಲಗಿ, ಅವರಾದಿ–ಮಹಾಲಿಂಗಪುರ, ಉದಗಟ್ಟಿ–ವಡೇರಹಟ್ಟಿ, ಅರ್ಜುನವಾಡ–ಕೋಚರಿ, ಯರನಾಳ–ಹುಕ್ಕೇರಿ, ಕುರಣಿ–ಕೋಚರಿ, ಭೋಜ–ಕಾರದಗಾ, ಭೋಜವಾಡಿ–ನಿಪ್ಪಾಣಿ, ಮಲ್ಲಿಕವಾಡ–ದಾನವಾಡ, ಸಿದ್ನಾಳ–ಅಕ್ಕೋಳ, ಭಾರವಾಡ–ಕುನ್ನೂರ, ಭೋಜ-ಕುನ್ನೂರ, ಜತ್ರಾಟ–ಭೀವಶಿ, ಬಾವನಸೌಂದತ್ತಿ–ಮಾಂಜರಿ ಸೇತುವೆಗಳು ಮುಳುಗಡೆಯಾಗಿವೆ.
ಜಿಲ್ಲೆಯಾದ್ಯಂತ ಮಳೆ ಅಬ್ಬರ ಮುಂದುವರೆದಿದೆ. ಖಾನಾಪುರದಲ್ಲಿ 55.4 ಮಿಮೀ, ನಿಪ್ಪಾಣಿಯಲ್ಲಿ 37.4 ಮಿಮೀ, ಬೆಳಗಾವಿಯಲ್ಲಿ 22.7 ಮಿಮೀ, ಚಿಕ್ಕೋಡಿಯಲ್ಲಿ 21.0 ಮಿಮೀ, ಕಾಗವಾಡದಲ್ಲಿ 15.0 ಮಿಮೀ,ರಾಯಬಾಗದಲ್ಲಿ 14.7 ಮಿಮೀ ಮಳೆಯಾಗಿದೆ.ಜಿಲ್ಲೆಯಲ್ಲಿ ಒಟ್ಟಾರೆ 16.5 ಮಿಮೀ ಮಳೆಯಾಗಿದೆ.ಸತತವಾಗಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯಲ್ಲಿ ಒಟ್ಟು 160 ಮನೆಗಳು ಭಾಗಶಃ ಕುಸಿದು ಬಿದ್ದಿವೆ. ಖಾನಾಪುರ- 27, ಹುಕ್ಕೇರಿ-11, ಬೈಲಹೊಂಗಲ-2, ಕಿತ್ತೂರು-22, ಸವದತ್ತಿ-26,ರಾಮದುರ್ಗ 41, ಗೋಕಾಕ- 3,ಮೂಡಲಗಿ- 4, ಚಿಕ್ಕೋಡಿ- 1, ಯರಗಟ್ಟಿ- 20, ಅಥಣಿ- 2, ನಿಪ್ಪಾಣಿ- 2 ಮನೆಗಳು ಭಾಗಶಃ ಕುಸಿದು ಬಿದ್ದಿವೆ. ಖಾನಾಪುರ ಮತ್ತು ಸವದತ್ತಿಯಲ್ಲಿ ಎರಡು ಮನೆ ಸಂಪೂರ್ಣವಾಗಿ ಕುಸಿದುಬಿದ್ದಿವೆ. 7 ಜಾನುವಾರುಗಳ ಶೆಡ್ ಕುಸಿದುಬಿದ್ದಿವೆ. 51 ಹೆಕ್ಟೇರ್ ಪ್ರದೇಶದಲ್ಲಿನ ಕೃಷಿ ಹಾಗೂ 21.24 ಹೆಕ್ಟೇರ್ ಪ್ರದೇಶದಲ್ಲಿನತೋಟಗಾರಿಕೆ ಬೆಳೆ ಕೂಡ ಹಾನಿಗೀಡಾಗಿದೆ.
ಬೆಳಗಾವಿ ನಗರದಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ರಸ್ತೆಗಳ ಮೇಲೆ ನೀರು ಹರಿಯುತ್ತಿರುವುದರಿಂದ ರಸ್ತೆಗಳೆಲ್ಲವೂ ನದಿಗಳಂತೆ ಭಾಸವಾಗುತ್ತಿವೆ. ಇದರಿಂದಾಗಿ ದ್ವಿಚಕ್ರವಾಹನ ಸವಾರರು ಹರಸಾಹಸ ಮಾಡಿ ತೆರಳುತ್ತಿರುವುದು ಕಂಡುಬಂತು. ಭಾನುವಾರ ಪೇಟೆಯ ಕಾಂದಾ ಮಾರ್ಕೆಟ್ ನಲ್ಲಿ ಮಳೆ ನೀರು ನಿಂತಿದ್ದರಿಂದ ವ್ಯಾವಾರಸ್ಥರು ಹಾಗೂ ಗ್ರಾಹಕರಿಗೆ ತೀವ್ರ ತೊಂದರೆ ಉಂಟಾಯಿತು. ಮಾರ್ಕಂಡೇಯ ನದಿ ಹಾಗೂ ಬಳ್ಳಾರಿ ನಾಲೆ ಉಕ್ಕಿ ಹರಿಯುತ್ತಿದ್ದು, ಹೊಲಗದ್ದೆಗಳಿಗೆ ನೀರು ನುಗ್ಗಿದ್ದು, ಬೆಳೆಗಳು ನೀರಲ್ಲಿ ನಿಂತಿವೆ.ರಕ್ಕಸಕೊಪ್ಪ ಜಲಾಶಯಕ್ಕೆ ಪಾಲಿಕೆ ಆಯುಕ್ತರ ಭೇಟಿ:ಬೆಳಗಾವಿ: ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿದಾಂಗಿ ಬೆಳಗಾವಿ ನಗರಕ್ಕೆ ನೀರು ಸರಬರಾಜು ಮಾಡುವ ರಕ್ಕಸಕೊಪ್ಪ ಜಲಾಶಯ ಭರ್ತಿಯಾಗಿರುವುದರಿಂದ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿದರು. ಎರಡು ಗೇಟ್‌ಗಳನ್ನು ಎರಡು ಇಂಚು ತೆರೆಯುವ ಮೂಲಕ ಮಾರ್ಕಂಡೇಯ ನದಿಗೆ ನೀರನ್ನು ಹರಿಸಲು ತಾಂತ್ರಿಕ ಸಿಬ್ಬಂದಿಗೆ ಸೂಚಿಸಿದರು. ಕೆಯುಐಡಿಎಫ್‌ಸಿ ಕಾರ್ಯಪಾಲಕ ಅಭಿಯಂತರ ಅಶೋಕ ಬುರಕುಲೆ, ಸಹಾಯಕ ಕಾರ್ಯಪಾಲಕ ಅಭಿಯಂತರ ಶಶಿಕುಮಾರ ಹತ್ತಿ ಇತರರು ಉಪಸ್ಥಿತರಿದ್ದರು.