ನೇಜಾರು ತಾಯಿ, ಮಕ್ಕಳ ಹತ್ಯೆ ಪ್ರಕರಣದ ಕಾರಣ ಬಹಿರಂಗ

| Published : Nov 17 2023, 06:45 PM IST

ಸಾರಾಂಶ

ಈಗಾಗಲೇ ವಿವಾಹಿತನಾಗಿದ್ದ ಆತ ಆಕೆಯನ್ನು ವಿಪರೀತ ನಿಯಂತ್ರಣ (ಓವರ್ ಪೊಸೆಸಿವ್)ದಲ್ಲಿಡಲು ಬಯಸುತ್ತಿದ್ದ. ಅದು ಸಾಧ್ಯವಾಗದಿದ್ದಾಗ ಆತ ಆಕೆಯ ಮೇಲೆ ಅಸೂಯೆಗೊಂಡು, ದ್ವೇಷ ಸಾಧಿಸುವುದಕ್ಕಾಗಿ ಕೊಲೆ ಮಾಡಿದ್ದಾನೆ ಎಂದು ಎಸ್ಪಿ ಡಾ. ಅರುಣ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ನೇಜಾರಿನಲ್ಲಿ ನಡೆದ ತಾಯಿ, ಮಕ್ಕಳ ಕೊಲೆಗೆ ದ್ವೇಷ ಸಾಧನೆ ಮತ್ತು ಸಾಕ್ಷ್ಯನಾಶದ ಯತ್ನವೇ ಕಾರಣ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಪತ್ತೆಯಾಗಿದೆ.

ಆರೋಪಿ ಪ್ರವೀಣ್ ಚೌಗುಲೆ ತನ್ನ ಸಹೋದ್ಯೋಗಿ ಅಯ್ನಾಝ್ ರನ್ನು ಅಸೂಯೆ ಮತ್ತು ಅದರ ಕಾರಣದಿಂದ ಉಂಟಾದ ದ್ವೇಷದಿಂದ ಕೊಲೆ ಮಾಡಿದ್ದಾನೆ.

ಈಗಾಗಲೇ ವಿವಾಹಿತನಾಗಿದ್ದ ಆತ ಆಕೆಯನ್ನು ವಿಪರೀತ ನಿಯಂತ್ರಣ (ಓವರ್ ಪೊಸೆಸಿವ್)ದಲ್ಲಿಡಲು ಬಯಸುತ್ತಿದ್ದ. ಅದು ಸಾಧ್ಯವಾಗದಿದ್ದಾಗ ಆತ ಆಕೆಯ ಮೇಲೆ ಅಸೂಯೆಗೊಂಡು, ದ್ವೇಷ ಸಾಧಿಸುವುದಕ್ಕಾಗಿ ಕೊಲೆ ಮಾಡಿದ್ದಾನೆ ಎಂದು ಎಸ್ಪಿ ಡಾ. ಅರುಣ್ ತಿಳಿಸಿದ್ದಾರೆ.

ಆತನ ಉದ್ದೇಶ ಅಯ್ನಾಜ್ ಳನ್ನು ಕೊಲೆ ಮಾಡುವುದೇ ಆಗಿದ್ದು, ಅದಕ್ಕಾಗಿ ಪೂರ್ವ ತಯಾರಿಯೊಂದಿಗೆ ಬಂದಿದ್ದ. ಆಕೆಯನ್ನು ಚೂರಿಯಿಂದ ಯದ್ವಾತದ್ವಾ ಇರಿದು ಕೊಲೆ ಮಾಡಿದ್ದ, ತಡೆಯಲು ಬಂದ ತಾಯಿ, ಅಕ್ಕ ಮತ್ತು ತಮ್ಮ ತನ್ನನ್ನು ನೋಡಿರುವುದರಿಂದ, ಅವರನ್ನು ಕೊಂದು ಸಾಕ್ಷ್ಯನಾಶ ಮಾಡಿ ಪರಾರಿಯಾಗಿದ್ದ.

ಆದರೆ, ಪೊಲೀಸರ ತಂತ್ರಜ್ಞಾನ ಆಧಾರಿತ ತನಿಖೆಯಿಂದ ಆರೋಪಿ ಸಿಕ್ಕಿಬಿದ್ದಿದ್ದಾನೆ. 14 ದಿನಗಳ ಪೋಲೀಸ್ ಕಸ್ಟಡಿಯಲ್ಲಿರುವ ಆತನನ್ನು ತೀವ್ರವಾಗಿ ವಿಚಾರಣೆಗೊಳಪಡಿಸಲಾಗುತ್ತಿದೆ.