ನೇಜಾರು ಕೊಲೆ ಪ್ರಕರಣ: ವಿಚಾರಣೆಯ ಎವಿ ರೆಕಾರ್ಡಿಂಗ್‌ಗೆ ಆಕ್ಷೇಪ

| Published : Jan 05 2025, 01:33 AM IST

ನೇಜಾರು ಕೊಲೆ ಪ್ರಕರಣ: ವಿಚಾರಣೆಯ ಎವಿ ರೆಕಾರ್ಡಿಂಗ್‌ಗೆ ಆಕ್ಷೇಪ
Share this Article
  • FB
  • TW
  • Linkdin
  • Email

ಸಾರಾಂಶ

ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ಪ್ರಕರಣದ ಸಾಕ್ಷಿಗಳ ವಿಚಾರಣೆಯನ್ನು ಆಡಿಯೋ ವಿಡಿಯೋ (ಎವಿ) ರೆಕಾರ್ಡಿಂಗ್ ಮಾಡಬೇಕು ಎಂದು ಆರೋಪಿ ಪ್ರವೀಣ್ ಚೌಗುಲೆಯ ವಕೀಲರು, ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಇದಕ್ಕೆ ವಿಶೇಷ ಸರ್ಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ ಕೆ. ಶನಿವಾರ ಆಕ್ಷೇಪಣೆ ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ಪ್ರಕರಣದ ಸಾಕ್ಷಿಗಳ ವಿಚಾರಣೆಯನ್ನು ಆಡಿಯೋ ವಿಡಿಯೋ (ಎವಿ) ರೆಕಾರ್ಡಿಂಗ್ ಮಾಡಬೇಕು ಎಂದು ಆರೋಪಿ ಪ್ರವೀಣ್ ಚೌಗುಲೆಯ ವಕೀಲರು, ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಇದಕ್ಕೆ ವಿಶೇಷ ಸರ್ಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ ಕೆ. ಶನಿವಾರ ಆಕ್ಷೇಪಣೆ ಸಲ್ಲಿಸಿದ್ದಾರೆ.ಹೊಸ ಕಾನೂನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಕಲಂ 254ರಡಿ ತಿಳಿಸಿರುವಂತೆ ಈ ಪ್ರಕರಣದ ಸಾಕ್ಷಿಗಳ ವಿಚಾರಣೆಯ ಆಡಿಯೋ ಮತ್ತು ವಿಡಿಯೋ ದಾಖಲಿಸಬೇಕು ಎಂದು ಆರೋಪಿ ಚೌಗುಲೆ ಡಿಸೆಂಬರ್‌ನಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಶುಕ್ರವಾರ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ ಅವರು, ಈ ಪ್ರಕರಣದ ತನಿಖೆ, ದೋಷಾರೋಪಣಾ ಪಟ್ಟಿ, ಆಪಾದನೆ ರಚನೆ ಹಾಗೂ ಸಾಕ್ಷಿಗಳ ವಿಚಾರಣೆಗೆ ದಿನಾಂಕ ನಿಗದಿ ಪ್ರಕ್ರಿಯೆಯು ನೂತನ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಕಾನೂನು ಜಾರಿ ಬರುವ ಪೂರ್ವದಲ್ಲಿಯೇ ಆಗಿದೆ, ಆದ್ದರಿಂದ ಈ ಪ್ರಕರಣಗಳಲ್ಲಿ ಹೊಸ ಕಾನೂನು ಅಳವಡಿಸಲು ಅವಕಾಶ ಇಲ್ಲ ಎಂದ ಆಕ್ಷೇಪ ಸಲ್ಲಿಸಿ, ಪ್ರಕರಣವನ್ನು ಹಿಂದಿನ ದಂಡ ಪ್ರಕ್ರಿಯೆ ಸಂಹಿತೆಯಂತೆ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು.ಲಿಖಿತ ಆಕ್ಷೇಪಣೆಯನ್ನು ಸ್ವೀಕರಿಸಿದ ನ್ಯಾಯಾಧೀಶ ಸಮಿವುಲ್ಲಾ, ಆಕ್ಷೇಪಣೆ ಸಂಬಂಧ ವಿಶೇಷ ಅಭಿಯೋಜಕರು ವಾದ ಮಂಡಿಸಲು ಜ.25ಕ್ಕೆ ದಿನಾಂಕ ನಿಗದಿಪಡಿಸಿ ಆದೇಶ ನೀಡಿದರು.ಬೆಂಗಳೂರು ಜೈಲಿನಲ್ಲಿರುವ ಆರೋಪಿ ಪ್ರವೀಣ್ ಚೌಗುಲೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆರೋಪಿ ಪರ ವಕೀಲ ದಿಲ್ರಾಜ್ ರೋಹಿತ್ ಸಿಕ್ವೇರಾ ಹಾಜರಿದ್ದರು.