ನೆಕ್ಕಂಟಿ ನಾಗರಾಜ ನನಗೆ ಆತ್ಮೀಯ, ತಂಗಡಗಿಗೆ ಸ್ನೇಹಿತ: ಬಸವರಾಜ ದಢೇಸೂಗುರು

| Published : Jul 12 2024, 01:30 AM IST

ಸಾರಾಂಶ

ವಾಲ್ಮೀಕಿ ನಿಗಮದ ಅಕ್ರಮದಲ್ಲಿ ಕೇವಲ ಸಚಿವರು ಮತ್ತು ಅಧಿಕಾರಿಗಳು ಮಾತ್ರ ಭಾಗಿಯಾಗಿದ್ದಾರೆ ಎಂದರೆ ಸರಿಯಲ್ಲ. ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ. ಅವರ ಅನುಮತಿ ಇಲ್ಲದೆ ಅಷ್ಟೊಂದು ದೊಡ್ಡ ಮೊತ್ತದ ಹಣ ವರ್ಗಾವಣೆಯಾಗಲು ಸಾಧ್ಯವೇ ಇಲ್ಲ ಎಂದು ಕನಕಗಿರಿಯ ಮಾಜಿ ಶಾಸಕ ಬಸವರಾಜ ದಢೇಸೂಗೂರು ಹೇಳಿದ್ದಾರೆ.

ಕೊಪ್ಪಳ: ವಾಲ್ಮೀಕಿ ನಿಗಮದ ಹಗರಣದಲ್ಲಿ ಬಂಧನವಾಗಿರುವ ನೆಕ್ಕಂಟಿ ನಾಗರಾಜ ಅಮಾಯಕನಾಗಿದ್ದು, ನನಗೂ ಆತ್ಮೀಯ ಮತ್ತು ಸಚಿವ ಶಿವರಾಜ ತಂಗಡಗಿ ಅವರಿಗೂ ಸ್ನೇಹಿತ ಎಂದು ಕನಕಗಿರಿಯ ಮಾಜಿ ಶಾಸಕ ಬಸವರಾಜ ದಢೇಸೂಗೂರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆಕ್ಕಂಟಿ ನಾಗರಾಜ ಯಾವುದೇ ಅಧಿಕಾರಿಯೂ ಅಲ್ಲ, ಆತ ಸಚಿವರ ಪಿಎನೂ ಅಲ್ಲ. ಹೀಗಾಗಿ, ಆತ ಏನು ಮಾಡಲು ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ.

ಆತ ಬಂಧಿತನಾಗಿರಬಹುದು. ಬಂಧಿಯಾದ ತಕ್ಷಣ ಅಪರಾಧಿಯಲ್ಲ, ವಿಚಾರಣೆ ನಡೆಯುತ್ತಿದ್ದು, ಮುಂದೆ ಆತ ನಿರಾಪರಾಧಿಯಾಗಬಹುದು ಎಂದು ಹೇಳಿದ್ದಾರೆ.

ಯಾಕೆ ನೆಕ್ಕಂಟಿ ಪರವಾಗಿ ನೀವು ಮಾತನಾಡುತ್ತಿದ್ದೀರಲ್ಲ ಎಂದು ಪದೇ ಪದೇ ಕೇಳಿದಾಗಲೂ ಆತ ಅಮಾಯಕ ಎಂದೇ ಉತ್ತರಿಸಿದ್ದಾರೆ.

ಅಧಿಕಾರಿಗಳೊಂದಿಗೆ ಮಾತನಾಡಿದ್ದಾನಲ್ಲ, ಒತ್ತಡ ಹಾಕಿದ್ದಾನಲ್ಲ ಎಂದು ಕೇಳಿದರೆ, ನೋಡಿ, ಈ ಸರ್ಕಾರದಲ್ಲಿ ಅದು ಸಾಧ್ಯವಾಗುತ್ತದೆ. ನಮ್ಮ ಸರ್ಕಾರದಲ್ಲಿ ಆಗಿದ್ದರೆ ಆಗುತ್ತಿರಲಿಲ್ಲ ಎಂದು ತಿಪ್ಪೆಸಾರಿಸಿದರು.

ವಾಲ್ಮೀಕಿ ನಿಗಮದ ಅಕ್ರಮದಲ್ಲಿ ಕೇವಲ ಸಚಿವರು ಮತ್ತು ಅಧಿಕಾರಿಗಳು ಮಾತ್ರ ಭಾಗಿಯಾಗಿದ್ದಾರೆ ಎಂದರೆ ಸರಿಯಲ್ಲ. ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ. ಅವರ ಅನುಮತಿ ಇಲ್ಲದೆ ಅಷ್ಟೊಂದು ದೊಡ್ಡ ಮೊತ್ತದ ಹಣ ವರ್ಗಾವಣೆಯಾಗಲು ಸಾಧ್ಯವೇ ಇಲ್ಲ ಎಂದರು.

ವರ್ಗಾವಣೆ ದಂಧೆ ನಮ್ಮ ಸರ್ಕಾರದಲ್ಲಿ ಇರಲಿಲ್ಲ, ನೀವೇ ನೋಡಿದ್ದೀರಲ್ಲ, ಪದೇ ಪದೇ ವರ್ಗಾವಣೆ ನಮ್ಮ ಸರ್ಕಾರದಲ್ಲಿ ಆಗುತ್ತಿರಲಿಲ್ಲ, ಈಗಿನ ಸರ್ಕಾರದಲ್ಲಿ ಆಗುತ್ತಿದೆ. ವರ್ಗಾವಣೆ ದಂಧೆ ನಡೆಯುತ್ತಿದೆ. ಸಚಿವ ಶಿವರಾಜ ತಂಗಡಗಿ ಅವರು ಅಧಿಕಾರಿಗಳನ್ನು ಪದೇ ಪದೇ ವರ್ಗಾಯಿಸುತ್ತಿದ್ದಾರೆ ಎಂದರೆ ಏನರ್ಥ ಎಂದು ಮರು ಪ್ರಶ್ನೆ ಮಾಡಿದರು.

ಕೊಪ್ಪಳ ಎಸ್ಪಿ ವರ್ಗಾವಣೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಭಯ್ಯಾಪುರ, ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು ಬೇಡ ಎಂದರೂ ಸಚಿವ ಶಿವರಾಜ ತಂಗಡಗಿ ಅವರು ವರ್ಗಾವಣೆ ಮಾಡಿಸಿದ್ದಾರೆ ಎಂದರೆ ಏನರ್ಥ ಎಂದು ಪ್ರಶ್ನೆ ಮಾಡಿದರು. ಅವರ ಸರ್ಕಾರದಲ್ಲಿಯೇ ಹೊಂದಾಣಿಕೆ ಇಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ, ಡಾ. ಬಸವರಾಜ, ಪ್ರಮೋದ ಕಾರ್ಕೋನ ಮೊದಲಾದವರು ಇದ್ದರು.