ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರದಿ.ಶ್ರೀರಾಮರೆಡ್ಡಿ ಮೇಷ್ಟ್ರ ನೆನಪಿನಾರ್ಥವಾಗಿ ಬುಡ್ಡಿ ದೀಪ ವೇದಿಕೆಯ ಪ್ರಾಯೋಜಕತೆಯಲ್ಲಿ ಸಂಸ್ಕೃತಿ ಸಂಗಮ-೩ರ ನೆಲ ಗಮಲು ನಾಟಕೋತ್ಸವ ಸಾಹಿತಿ ಕೋಟಿಗಾನ ರಾಮಯ್ಯರ ನಿರ್ದೇಶನದಲ್ಲಿ ೪ ನಾಟಕ ಪ್ರದರ್ಶನ ನಗರದ ಚನ್ನಯ್ಯ ರಂಗಮಂದಿರದಲ್ಲಿ ಮೇ ೧೮ ಮತ್ತು ೧೯ ರಂದು ಪ್ರದರ್ಶಿಸಲಿದೆ ಎಂದು ಸಾಹಿತಿ ಕೋಟಿಗಾನ ರಾಮಯ್ಯ ತಿಳಿಸಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋಲಾರದಲ್ಲಿ ಮೊಟ್ಟ ಮೊದಲ ಬಾರಿಗೆ ಮಕ್ಕಳು ನೋಡಲೇ ಬೇಕಾದ ನಾಟಕಗಳು ಇದಾಗಿವೆ ಎಂದರು.ಉದ್ಘಾಟನೆಗೆ ಡಿಐಜಿ:
ಕಾರ್ಯಕ್ರಮದ ಉದ್ಘಾಟನೆ ಕೇಂದ್ರ ವಲಯದ ಡಿ.ಐ.ಜಿ. ರವಿಕಾಂತೇಗೌಡ ನೆರವೇರಿಸಲಿದ್ದು, ಮುಖ್ಯ ಅತಿರ್ಥಿಗಳಾಗಿ ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸ ಆಶಯ ನುಡಿಗಳಾಡುವರು, ಜಿಲ್ಲಾಧಿಕಾರಿ ಅಕ್ರಂಪಾಷ ಮತ್ತು ಎಸ್ಪಿ ನಾರಾಯಣ.ಎಂ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ನಚಿಕೇತನ ನಿಲಯದ ಕಾರಂಜಿಯ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.ನೆಲಗಮಲು ನಾಟಕೋತ್ಸವ ಕಳೆದ ೩೦ ವರ್ಷದಿಂದ ಪ್ರಾಥಮಿಕ ಶಿಕ್ಷಣದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ಜಾನಪದ, ರಂಗಭೂಮಿ ಹೀಗೆ ಹಲವು ಜ್ಞಾನ ಶಿಸ್ತುಗಳನ್ನು ಬೆಸೆಯುವ ಪ್ರಯೋಗಗಳ ಅಂತಿಮ ಫಲವಾಗಿದೆ. ನುಡಿಗುರುತು- ನೆಲ ಗುರುತುಗಳ ಮೂಲಕ ಶಿಕ್ಷಣ ನೀಡ ಬೇಕೆಂಬ ಹೊಸ ನೋಟದ ತಿಳಿವಳಿಕೆಯಾಗಿದೆ ಎಂದು ತಿಳಿಸಿದರು.ಸಂಸ್ಕೃತಿ ಸಂಗಮ-೧ ಕಳೆದ ೨೦೨೩ರ ಅಕ್ಟೋಬರ್ ಮಾಹೆ ೧೨, ೧೩ ಹಾಗೂ ೧೪ ರಂದು ಕೋಲಾರದಿಂದ ಆರಂಭವಾಯಿತು. ಸಂಸ್ಕೃತಿ ಸಂಗಮ-೨ ಮಂಡ್ಯ ನೆಲದಲ್ಲಿ ೧೫ ನಾಟಕಗಳ ರಚನೆ ಮತ್ತು ೪ ನಾಟಕಗಳ ಪ್ರದರ್ಶನ ಮುಗಿಸಿಕೊಂಡು ಇದೀಗ ಸಂಸ್ಕೃತಿ ಸಂಗಮ-೩ಕ್ಕಾಗಿ ನೆಲ ಗಮಲು ನಾಟಕೋತ್ಸವ ಶೀರ್ಷಿಕೆಯಡಿ ದಿ.ಶ್ರೀರಾಮರೆಡ್ಡಿ ಮೇಷ್ಟ್ರು ನೆನಪಿನಲ್ಲಿ ನಾಲ್ಕು ನಾಟಕಗಳ ಪ್ರದರ್ಶನ ನಡೆಯಲಿದೆ ಎಂದು ವಿವರಿಸಿದರು. ನಚಿಕೇತನ ನಿಲಯದಲ್ಲಿ ವೇದಿಕೆ
ಮಕ್ಕಳಿಗೆ ಸಂಸ್ಕೃತಿಕವಾಗಿ ನಚಿಕೇತನ ನಿಲಯದಲ್ಲಿ ಒಂದು ವೇದಿಕೆ ಸರ್ಕಾರದ ಅನುದಾನ ರಹಿತವಾಗಿ ನಿರ್ಮಿಸಲು ಚಿಂತಿಸಲಾಗಿದೆ. ನಚಿಕೇತನ ನಿಲಯ ನಗರಸಭೆಯ ತೊಟ್ಟಿಯಾಗಿದ್ದು ಇದನ್ನು ಸ್ವಚ್ಛಗೊಳಿಸಲು ನಚಿಕೇತನ ಚಂದಗೊಳಿಸೋಣ ತಂಡ, ಪ್ರಬುದ್ಧ ಪ್ರಕಾಶನ, ಕೆ.ಇ.ಬಿ. ಪರಿಶಿಷ್ಟ ನೌಕರರ ಕಲ್ಯಾಣ ಸಂಘ ಸಹಕಾರದಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ಹೇಳಿದರು.ನಗರದ ನಚಿಕೇತನ ನಿಲಯದಲ್ಲಿ ಅಂಬೇಡ್ಕರ್ ಜ್ಞಾನ ಮಂದಿರ ಮುಂದಿನ ಮಕ್ಕಳ ಕಲಿಕಾ ಕೇಂದ್ರವನ್ನಾಗಿ ಪರಿವರ್ತಿಸಲು ಹಾಗೂ ನಾಟಕಗಳ ಪ್ರದರ್ಶನದ ಕಲಿಕಾ ಕೇಂದ್ರವನ್ನಾಗಿ ರೂಪಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಕೀಲ ಪ್ರಮೋದ್ ಕುಮಾರ್, ಪ್ರಕಾಶ್, ಶ್ರೀರಾಮ್, ಕಲಾವಿದ ರಾಮು, ಛಾಯಾಗ್ರಾಹಕ ರಾಜು, ಹಾಲೇರಿ ರಾಘವೇಂದ್ರ, ಚೇತನ ಬಾಬು ಇದ್ದರು.