ನೆಲಮಂಗಲ ವ್ಯಕ್ತಿ ಕೊಲೆ ಪ್ರಕರಣ: 8 ಮಂದಿ ಆರೋಪಿಗಳ ಬಂಧನ

| Published : Apr 06 2025, 01:52 AM IST

ಸಾರಾಂಶ

ಮಾರ್ಚ್ 26 ರಂದು ಕುಣಿಗಲ್ ರಂಗಸ್ವಾಮಿ ಗುಡ್ಡದಲ್ಲಿ ಅಪರಿಚಿತ ವ್ಯಕ್ತಿ ಕೊಲೆ ಮಾಡಿದ ಸಂಬಂಧ 8 ಮಂದಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಕುಣಿಗಲ್ ಮಾರ್ಚ್ 26 ರಂದು ಕುಣಿಗಲ್ ರಂಗಸ್ವಾಮಿ ಗುಡ್ಡದಲ್ಲಿ ಅಪರಿಚಿತ ವ್ಯಕ್ತಿ ಕೊಲೆ ಮಾಡಿದ ಸಂಬಂಧ 8 ಮಂದಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ. ಮಾರ್ಚ್ 26ರಂದು ರಂಗಸ್ವಾಮಿ ಗುಡ್ಡದ ಅರಣ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅರಣ್ಯ ರಕ್ಷಕ ಕೃಷ್ಣಮೂರ್ತಿ ಕರ್ತವ್ಯ ಸಂದರ್ಭದಲ್ಲಿ ಕೊಳೆತ ಸ್ಥಿತಿಯಲ್ಲಿರುವ ಶವ ಒಂದು ಪತ್ತೆ ಆಗಿತ್ತು. ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.ವ್ಯಕ್ತಿಯ ಕೊಲೆ ಸಂಬಂಧಿಸಿದಂತೆ ಎಲ್ಲಾ ಪೊಲೀಸ್ ಠಾಣೆಗಳಿಗೂ ಮಾಹಿತಿ ರವಾನೆ ಆದಂತೆ ನೆಲಮಂಗಲದ ಪೊಲೀಸ್ ಠಾಣೆಗೂ ಕೂಡ ಮಾಹಿತಿ ರವಾನೆ ಆಗಿತ್ತು. ನೆಲಮಂಗಲದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 12ನೇ ತಾರೀಕು ಮಧ್ಯರಾತ್ರಿ 1.30 ರ ಸಂದರ್ಭದಲ್ಲಿ ಹಾಜರುದ್ದೀನ್ ಎಂಬ ವ್ಯಕ್ತಿ ನಾಪತ್ತೆ ಆಗಿರುವ ಸಂಬಂಧ ದೂರು ದಾಖಲಾಗಿತ್ತು. ಕುಣಿಗಲ್ ಪೊಲೀಸರು ತನಿಖೆ ಆರಂಭಿಸಿದಾಗ ಮೃತ ಹಾಜರುದ್ದಿನ್ ಹಾಗೂ ಆತನ ಸ್ನೇಹಿತರ ಫೈರೋಜ್ ಇವರಿಗೆ ಗಾಂಜಾ ಮಾರಾಟ ಮತ್ತು ಕೆಲವು ವ್ಯವಹಾರಗಳಲ್ಲಿ ಸಣ್ಣಪುಟ್ಟ ಜಗಳಗಳು ಆಗಿತ್ತು ಎಂದು ತಿಳಿದು ಬಂದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವ ಕುರಿತು ಮಾಹಿತಿ ನೀಡಿದ್ದಾರೆ.

ಈ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಆರೋಪಿಗಳಾದ ಫೈರೋಜ್, ಸಲ್ಮಾನ್ ಖಾನ್, ನಯಾಬ್ ಖಾನ್, ಅರ್ಬಸ್ ಪಾಶ, ಸಲೀಂ, ಜಬಿವುಲ್ಲಾ, ಸಾದೀಕ್, ಅನ್ವರ್ ಪಾಷಾ ಮತ್ತು ಮಹಮದ್ ಮುಬಾರಕ್ ಎಂಬುವರನ್ನು ವಶಕ್ಕೆ ಪಡೆದಿದ್ದು ಕೃತ್ಯಕ್ಕೆ ಬಳಸಿದ್ದ ಎರಡು ಕಾರುಗಳು ಮತ್ತು ಆತನ ಕೊಲೆಗೆ ಬಳಸಿದ್ದ ಕಲ್ಲುಗಳನ್ನು ವಶಕ್ಕೆ ಪಡೆಯಲಾಗಿದೆ.