ನೆಲ್ಯಹುದಿಕೇರಿ: ಒತ್ತುವರಿ ಹಿಂದೂ ಸ್ಮಶಾನ ಜಾಗ ತೆರವಿಗೆ ಸಿಪಿಎಂ ಆಗ್ರಹ

| Published : Aug 30 2024, 01:09 AM IST

ಸಾರಾಂಶ

ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ 10 ಸಾವಿರಕ್ಕಿಂತಲೂ ಹೆಚ್ಚು ಜನಸಂಖ್ಯೆ ಇದ್ದು. ಶೇ.45ರಷ್ಟಿರುವ ಹಿಂದೂಗಳು ಸಾವು ಸಂಭವಿಸಿದಾಗ ಶವಸಂಸ್ಕಾರ ನಡೆಸಲು ಹಿಂದೂ ಸ್ಮಶಾನವೇ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಟ್ಟದಕಾಡು ರಸ್ತೆಯ ಕಾವೇರಿ ನದಿಯ ದಡದಲ್ಲಿ ಇರುವ 48 ಸೆಂಟು ಜಾಗದಲ್ಲಿ ಶವಸಂಸ್ಕಾರ ಮಾಡಬೇಕಾಗಿದೆ ಎಂದು ಪಿ.ಆರ್. ಭರತ್ ವಿವರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಹಿಂದೂ ಸ್ಮಶಾನ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು ಕೂಡಲೇ ಒತ್ತುವರಿದಾರರಿಂದ ಸ್ಮಶಾನ ಜಾಗ ತೆರವುಗೊಳಿಸಬೇಕು. ಇಲ್ಲದಿದ್ದಲೆ ಸಿಪಿಎಂ ವತಿಯಿಂದ ಪ್ರತಿಭಟನೆ ನಡೆಸಲಾಗುವುದೆಂದು ಪಕ್ಷದ ಪ್ರಮುಖ ಪಿ.ಆರ್‌. ಭರತ್ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ 10 ಸಾವಿರಕ್ಕಿಂತಲೂ ಹೆಚ್ಚು ಜನಸಂಖ್ಯೆ ಇದ್ದು. ಶೇ.45ರಷ್ಟಿರುವ ಹಿಂದೂಗಳು ಸಾವು ಸಂಭವಿಸಿದಾಗ ಶವಸಂಸ್ಕಾರ ನಡೆಸಲು ಹಿಂದೂ ಸ್ಮಶಾನವೇ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಟ್ಟದಕಾಡು ರಸ್ತೆಯ ಕಾವೇರಿ ನದಿಯ ದಡದಲ್ಲಿ ಇರುವ 48 ಸೆಂಟು ಜಾಗದಲ್ಲಿ ಶವಸಂಸ್ಕಾರ ಮಾಡಬೇಕಾಗಿದೆ. ಸ್ಥಳದ ಕೊರತೆಯಿಂದ ಶವಸಂಸ್ಕಾರ ಮಾಡಿರುವ ಶವದ ಮೇಲೆ ಕಾಲಿಟ್ಟು ಶವಸಂಸ್ಕಾರ ಮಾಡ ಬೇಕಾದ ದುಃಸ್ಥಿತಿ ಎದುರಾಗಿದೆ ಎಂದು ಗಮನ ಸೆಳೆದಿದ್ದಾರೆ.

ಕಾವೇರಿ ನದಿ ಪ್ರವಾಹದ ಸಂಧರ್ಭದಲ್ಲಿ ನದಿ ದಡದ ಮಣ್ಣು ಕುಸಿದು ಶವದ ಅಸ್ಥಿಗಳು ಕಾವೇರಿ ನದಿಯಲ್ಲಿ ತೇಲುತ್ತಿದ್ದು ಇದರಿಂದ ಕಾವೇರಿ ನದಿ ಕೂಡ ಕಲುಷಿತಗೊಳ್ಳುತ್ತಿದೆ. ಈಗಾಗಲೇ ಸರ್ಕಾರ ಹಿಂದೂಗಳ ಶವ ಸಂಸ್ಕಾರಕ್ಕೆ ಮಂಜೂರು ಮಾಡಿದ 1.8 ಎಕರೆ ಜಾಗ ಸಾರ್ವಜನಿಕ ಸ್ಮಶಾನ ಎಂದು ಆರ್‌ಟಿಸಿ ಇದ್ದರೂ ಕೆಲವರು ಅದನ್ನು ಒತ್ತುವರಿ ಮಾಡಿಕೊಂಡು ಹಿಂದೂಗಳಿಗೆ ಶವಸಂಸ್ಕಾರಕ್ಕೆ ನೀಡುತ್ತಿಲ್ಲ ಎಂದು ಆರೋಪಿಸಿದರು.

ಹಿಂದೂ ಸ್ಮಶಾನಭೂಮಿ ಒತ್ತುವರಿ ಮಾಡಿಕೊಂಡಿರುವವರಿಂದ ಬಿಡಿಸಿ, ಹಿಂದೂಗಳ ಶವಸಂಸ್ಕಾರಕ್ಕೆ ಜಾಗ ಒದಗಿಸಿಕೊಡುವಂತೆ ಸಂಬಂದಿಸಿದ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಸಮಸ್ಯೆಗೆ ಪರಿಹಾರ ದೊರಕದಿದ್ದರೆ ಪಕ್ಷದ ವತಿಯಿಂದ ಸಾರ್ವಜನಿಕರನ್ನು ಒಗ್ಗೂಡಿಸಿ ಶವಸಂಸ್ಕಾರದ ಅಣುಕು ಪ್ರದರ್ಶನ ಮಾಡಿ ಪ್ರತಿಭಟಿಸಲಾಗುವುದೆಂದು ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಉದಯ ಕುಮಾರ್ , ಜೋಸ್, ಮಣಿ, ಶಿವರಾಮ ಇದ್ದರು‌.