ಸಾರಾಂಶ
ಕನ್ನಡಪ್ರಭ ವಾರ್ತೆ ಸಿದ್ದಾಪುರ
ನೆಲ್ಯಹುದಿಕೇರಿಯಲ್ಲಿ ಒತ್ತುವರಿಯಾಗಿರುವ ಹಿಂದೂ ಸ್ಮಶಾನ ಜಾಗ ಕೂಡಲೇ ತೆರವುಗೊಳಿಸಲು ಒತ್ತಾಯಿಸಿ 28ರಂದು ಹಿಂದೂ ಸ್ಮಶಾನ ಹೋರಾಟ ಸಮಿತಿ ನೇತೃತ್ವದಲ್ಲಿ ನೆಲ್ಯಹುದಿಕೇರಿ ಗ್ರಾ.ಪಂ. ಮುಂಬಾಗ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಹೋರಾಟ ಸಮಿತಿ ಮುಖಂಡ ಪಿ.ಆರ್.ಭರತ್ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆಲ್ಯಹುದಿಕೇರಿ ಗ್ರಾಮದಲ್ಲಿ ಶೇ 40 ರಷ್ಟು ಹಿಂದುಗಳಿದ್ದು ಅದರಲ್ಲಿ ಬಹುತೇಕರು ತುಂಡು ಭೂಮಿ ಹಾಗೂ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಇಲ್ಲಿನ ಹಿಂದುಗಳ ಕುಟುಂಬಗಳಲ್ಲಿ ಮರಣ ಸಂಭವಿಸಿದ್ದರೆ ಅವರ ಅಂತ್ಯ ಸಂಸ್ಕಾರಕ್ಕೆ ಜಾಗವಿಲ್ಲದ ಪರಿಸ್ಥಿತಿಯಿದೆ. ಈ ಭಾಗದ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕಾವೇರಿ ನದಿ ದಡದಲ್ಲೇ ಮೃತಪಟ್ಟ ಹಿಂದುಗಳ ಅಂತ್ಯ ಸಂಸ್ಕಾರ ನಡೆಯುತ್ತಿದೆ ಎಂದರು.
ಇತ್ತೀಚೆಗೆ ಪ್ರವಾಹದಿಂದ ನದಿ ತೀರದ ಸ್ಮಶಾನ ಜಾಗದ ದಡ ಕುಸಿದು ಶವಸಂಸ್ಕಾರಕ್ಕೆ ಸ್ಥಳವಿಲ್ಲದಂತಾಗಿದೆ ಹಾಗೂ ಕಾವೇರಿ ನದಿ ಪ್ರವಾಹ ಹೆಚ್ಚಾದಲ್ಲಿ ಈಗ ಇರುವ ಸ್ಮಶಾನ ಜಾಗ ಸಂಪೂರ್ಣ ಮುಳುಗಡೆಯಾಗುತ್ತದೆ. ಮಳೆಗಾಲದಲ್ಲಿ ಸಾವು ಸಂಭವಿಸಿದರೆ ಪಕ್ಕದ ಗ್ರಾಮ ಪಂಚಾಯತಿಗೆ ತೆರಳಿ ಅಂತಿಮ ಸಂಸ್ಕಾರ ನೇರವೇರಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಅವರು ವಿವರಿಸಿದರು.ಕಳೆದ ಮಳೆಗಾಲದಲ್ಲಿ ಈ ವ್ಯಾಪ್ತಿಯ ನಾಣು ಎಂಬುವವರ ಮೃತದೇಹವನ್ನು ನೆಲ್ಯಹುದಿಕೇರಿ ಬೆಟ್ಟದಕಾಡು ರಸ್ತೆಯ ಹಿಂದು ಸ್ಮಶಾನದಲ್ಲಿ ಅಂತಿಮಸಂಸ್ಕಾರ ನೆರವೇರಿಸುವ ಸಮಯದಲ್ಲಿ ಗುಂಡಿ ಕುಸಿದು ಅವಾಂತರ ಸಂಭವಿಸಿದೆ. ಈಗ ಅಂತ್ಯಸಂಸ್ಕಾರ ಮಾಡುವ ಸ್ಥಳದ ದಡ ಪ್ರತೀವರ್ಷ ಕುಸಿಯುತ್ತಿದ್ದು ನದಿ ತೀರದ ಸ್ಮಶಾನ ಜಾಗದ ವಿಸ್ತೀರ್ಣ ಕಡಿಮೆಯಾಗುತಿದೆ ಸ್ಮಶಾನ ಜಾಗ ದಿನದಿಂದ ದಿನಕ್ಕೆ ನದಿ ಪಾಲಗುತ್ತಿದೆ ಎಂದರು.
ಈ ಹಿಂದೆ ಸ್ಮಶಾನಕ್ಕಾಗಿ ಇದ್ದ ನೆಲ್ಯಹುದಿಕೇರಿ ಬೆಟ್ಟದಕಾಡು ಸಮೀಪ 1.8 ಎಕರೆ ಜಾಗ ಖಾಸಗಿ ವ್ಯಕ್ತಿಗಳ ವಶದಲ್ಲಿದೆ. ಅದರ ಆರ್ ಟಿ ಸಿ ಕೂಡ ಹಿಂದೂ ಸ್ಮಶಾನದ ಹೆಸರಿನಲ್ಲಿದೆ. ಹಾಗಾಗಿ ಸರ್ಕಾರ ಹಾಗೂ ಜಿಲ್ಲಾಡಳಿತ ಕೂಡಲೇ ಹಿಂದುಗಳ ಸ್ಮಶಾನ ಜಾಗವನ್ನು ಒತ್ತುವರಿದಾರರಿಂದ ಬಿಡಿಸಿ ಸ್ಮಶಾನಕ್ಕೆ ಅನುಕೂಲ ಮಾಡಿಕೊಡಬೇಕೆಂದು ಅವರು ಒತ್ತಾಯಿಸಿದರು.ಈ ನಿಟ್ಟಿನಲ್ಲಿ 28ರಂದು ಬೆಳಗ್ಗೆ 10.30ಕ್ಕೆ ನೆಲ್ಯಹುದಿಕೇರಿ ಶ್ರೀ ಮುತ್ತಪ್ಪ ದೇವಸ್ಥಾನದಿಂದ ಗ್ರಾ.ಪಂ ಕಚೇರಿ ವರೆಗೆ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಲಾಗುವುದೆಂದರು. ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಉಪವಿಭಾಗ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಬಗೆ ಹರಿಸುವವರೆಗೂ ಪ್ರತಿಭಟನೆ ಮುಂದುವರಿಯಲಿದೆ ಎಂದು ಎಚ್ಚರಿಸಿದರು.
ಸ್ಮಶಾನ ಹೋರಾಟ ಸಮಿತಿ ಪ್ರಮುಖರಾದ ಪಿ.ಜಿ. ಸುರೇಶ್, ಸಂದೀಪ್ ಕುಮಾರ್, ಉದಯ, ಶಿವರಾಮನ್, ಚಂದ್ರನ್, ಅಬೀಬ್ ಇದ್ದರು.