ಸಾರಾಂಶ
ನಿರಂತರ ಮತ್ತು ಸುದೀರ್ಘ ಮಳೆಯಿಂದಾಗಿ ನದಿಗಳೆರಡರ ಜಲಮಟ್ಟವು ಪೂರ್ತಿಯಾಗಿತ್ತು. ಕಳೆದ ಒಂದು ವಾರದಲ್ಲಿ ಮಳೆಯ ಪ್ರಮಾಣ ಕಡಿಮೆಯಾದ ಕಾರಣಕ್ಕೆ ಇದೀಗ ನದಿಯ ಒಡಲಿನಲ್ಲಿ ಮರಳು ಕಾಣುವಷ್ಟು ನೀರಿನ ಪ್ರಮಾಣ ಕಡಿಮೆಯಾಗಿದೆ.
ಉಪ್ಪಿನಂಗಡಿ: ಕಳೆದ ಜೂನ್ ತಿಂಗಳಾರಂಭದಿಂದ ಪ್ರಾರಂಭಗೊಂಡ ಮಳೆಯು ನವೆಂಬರ್ ತಿಂಗಳ ಆರಂಭದ ತನಕ ಮುಂದುವರಿದ ಕಾರಣ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳ ಒಡಲು ನೀರಿನಿಂದಾವೃತವಾಗಿತ್ತು. ಕಳೆದ ನಾಲ್ಕೈದು ದಿನಗಳಿಂದ ಮಳೆ ದೂರವಾದ ಹಿನ್ನೆಲೆಯಿಂದಾಗಿ ನದಿಯಲ್ಲಿ ನೀರಿನ ಮಟ್ಟ ಇಳಿಕೆಯಾಗಿ ಮರಳು ಕಾಣಿಸಲಾರಂಭಿಸಿದೆ.
ನಿರಂತರ ಮತ್ತು ಸುದೀರ್ಘ ಮಳೆಯಿಂದಾಗಿ ನದಿಗಳೆರಡರ ಜಲಮಟ್ಟವು ಪೂರ್ತಿಯಾಗಿತ್ತು. ಕಳೆದ ಒಂದು ವಾರದಲ್ಲಿ ಮಳೆಯ ಪ್ರಮಾಣ ಕಡಿಮೆಯಾದ ಕಾರಣಕ್ಕೆ ಇದೀಗ ನದಿಯ ಒಡಲಿನಲ್ಲಿ ಮರಳು ಕಾಣುವಷ್ಟು ನೀರಿನ ಪ್ರಮಾಣ ಕಡಿಮೆಯಾಗಿದೆ. ಕಳೆದ ವರ್ಷ ಬಿಳಿಯೂರು ಅಣೆಕಟ್ಟಿನ ಹಿನ್ನೀರಿನಿಂದಾಗಿ ಉಪ್ಪಿನಂಗಡಿ ಗ್ರಾಮದಂಚಿನವರೆಗೆ ನದಿಯಲ್ಲಿ ಹಿನ್ನೀರು ತುಂಬಿ ಮರಳುಗಾರಿಕೆಗೆ ಹಿನ್ನಡೆಯುಂಟಾಗಿತ್ತು. ಮತ್ತೆ ಮಳೆಗಾಲ ಪ್ರಾರಂಭವಾದ ಕಾರಣಕ್ಕೆ ನದಿ ತುಂಬಾ ನೀರಿದ್ದ ಹಿನ್ನಲೆಯಲ್ಲಿ ಮರಳುಗಾರಿಕೆ ಅಸಾಧ್ಯವಾಗಿತ್ತು. ಈ ಬಾರಿ ನದಿಯಲ್ಲಿ ಮರಳು ಭಾರೀ ಪ್ರಮಾಣದಲ್ಲಿ ಸಂಗ್ರಹವಾಗಿರಬಹುದೆಂಬ ನಿರೀಕ್ಷೆಯು ಸುಳ್ಳಾಗಿದ್ದು, ನದಿಯ ಒಡಲಿನಲ್ಲಿ ಹೊಸ ಮರಳಿಲ್ಲದೆ ಯಥಾಸ್ಥಿತಿ ಮುಂದುವರೆದಿರುವುದು ಕಂಡು ಬಂದಿದೆ. ನೇತ್ರಾವತಿ ನದಿಗೆ ಬಿಳಿಯೂರು ಎಂಬಲ್ಲಿ ನಿರ್ಮಿಸಿರುವ ಅಣೆಕಟ್ಟಿಗೆ ಮಳೆಯಿಂದಾಗಿ ನದಿಯಲ್ಲಿ ನೀರಿನ ಹರಿವು ಹೆಚ್ಚಳಗೊಂಡ ಕಾರಣಕ್ಕೆ ಗೇಟು ಅಳವಡಿಕೆ ವಿಳಂಬವಾಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ ನವೆಂಬರ್ ತಿಂಗಳಲ್ಲಿ ಅಣೆಕಟ್ಟಿಗೆ ಗೇಟು ಅಳವಡಿಸಿ ನೀರು ಸಂಗ್ರಹಗೊಳ್ಳುವಂತೆ ಮಾಡುವುದು ವಾಡಿಕೆಯಾದರೂ ಈ ಬಾರಿ ಇನ್ನೂ ಅಲ್ಲಲ್ಲಿ ಮಳೆ ಸುರಿಯುತ್ತಿದ್ದು, ನದಿಯಲ್ಲಿ ನೀರಿನ ಹರಿವು ಹೆಚ್ಚುುವ ಸಾಧ್ಯತೆಯೂ ಇರುವುದರಿಂದ ನವೆಂಬರ್ ತಿಂಗಳಲ್ಲಿ ಮಾಡಬೇಕಾಗಿದ್ದ ಗೇಟು ಅಳವಡಿಕೆ ಕಾರ್ಯವನ್ನು ಪರಿಸ್ಥಿತಿ ನೋಡಿ ಮುಂದಿನ ದಿನಗಳಲ್ಲಿ ಮಾಡಲಾಗುವುದೆಂದು ನೀರಾವರಿ ಇಲಾಖಾಧಿಕಾರಿ ಶಿವಪ್ರಸನ್ನ ತಿಳಿಸಿದ್ದಾರೆ.