ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ರಾ.ಹೆ. 66ರ ನೇತ್ರಾವತಿ ನದಿಯ ಹಳೆ ಸೇತುವೆಯಲ್ಲಿ ತೇಪೆ ಕಾಮಗಾರಿ ನಡೆಯುತ್ತಿದೆ. ಇದರಿಂದಾಗಿ ತೊಕ್ಕೊಟ್ಟಿನಿಂದ ನೇತ್ರಾವತಿ ಸೇತುವೆ ಸಂಪರ್ಕದ ಹೆದ್ದಾರಿಯ ಎಡ ಪಾರ್ಶ್ವದ ರಸ್ತೆಯುದ್ದಕ್ಕೂ ಕಳೆದೆರಡು ದಿನಗಳಿಂದ ದಿನವಿಡೀ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಟ್ರಾಫಿಕ್ ಜಾಮಲ್ಲಿ ಸಿಲುಕಿ ಸುಸ್ತಾದ ವಾಹನ ಸವಾರರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.ಹಳೆಯ ನೇತ್ರಾವತಿ ಸೇತುವೆಯ ಗುಂಡಿಗಳಲ್ಲಿ ಕಬ್ಬಿಣದ ಸಲಾಕೆಗಳು ಕಿತ್ತುಹೋದ ಕಾರಣ ಕಾರೊಂದರ ಟಯರ್ ಸಿಡಿದಿದ್ದು, ಸೇತುವೆಯ ದುಸ್ಥಿತಿಯ ಬಗ್ಗೆ ಕಾರು ಚಾಲಕ ಮಾಡಿದ ವೀಡಿಯೋ ತುಣುಕು ಮೂರು ದಿನಗಳ ಹಿಂದೆ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವಿಡಿಯೋ ನೋಡಿ ಎಚ್ಚೆತ್ತ ಅಧಿಕಾರಿಗಳು ಸ್ಪೀಕರ್ ಯು.ಟಿ.ಖಾದರ್ ಸೂಚನೆ ಮೇರೆಗೆ ಸೇತುವೆಯ ತೇಪೆ ಕಾಮಗಾರಿ ನಡೆಸುತ್ತಿದ್ದಾರೆ.ಬುಧವಾರ ಬೆಳಗ್ಗಿನಿಂದಲೂ ಸೇತುವೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಗುರುವಾರವೂ ಅದೇ ಸ್ಥಿತಿ ಮುಂದುವರಿದಿದೆ. ಬೆಳಗ್ಗೆ ಶಾಲೆ, ಕಾಲೇಜು, ಕೆಲಸಗಳಿಗೆ ತೆರಳುವವರು ಪರದಾಡುವಂತಾಗಿದೆ. ಸಹಸ್ರಾರು ವಾಹನಗಳು ಓಡಾಡುವ ಸೇತುವೆಯಲ್ಲಿ ಹಗಲಿನ ವೇಳೆ ದುರಸ್ತಿ ಕಾಮಗಾರಿ ನಡೆಸುವುದು ಎಷ್ಟು ಸರಿ ಎಂದು ಟ್ರಾಫಿಕ್ ಜಾಮಲ್ಲಿ ಸಿಲುಕಿದ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಬೆಳಗ್ಗಿನಿಂದ ರಾತ್ರಿ ವರೆಗೂ ಸೇತುವೆಯಲ್ಲಿ ಮೊಕ್ಕಾಂ ಹೂಡಿದ್ದು ಸುಗಮ ಸಂಚಾರಕ್ಕೆ ಹರಸಾಹಸ ಪಡುತ್ತಿದ್ದಾರೆ. ತೊಕ್ಕೊಟ್ಟಿನಿಂದ ಮಂಗಳೂರಿಗೆ ತೆರಳುತ್ತಿದ್ದ ಆಂಬ್ಯುಲೆನ್ಸ್ ತುರ್ತು ವಾಹನಗಳು ಕಲ್ಲಾಪುವಿನಿಂದ ವಿರುದ್ಧ ದಿಕ್ಕಿನ ರಸ್ತೆಯಲ್ಲಿ ಅಪಾಯ ಲೆಕ್ಕಿಸದೆ ಸಾಗಿವೆ. ಕೆಲವು ದ್ವಿಚಕ್ರ ವಾಹನ ಸವಾರರು ಕೂಡ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದಾರೆ. ನಿರಂತರ ಟ್ರಾಫಿಕ್ ಜಾಮ್ ನಿಂದ ಎಚ್ಚೆತ್ತ ಸಂಚಾರಿ ವಿಭಾಗದ ಎಸಿಪಿ ನಜ್ಮಾ ಫಾರೂಕಿ ಖುದ್ದಾಗಿ ಕಲ್ಲಾಪು ಹೆದ್ದಾರಿಯಲ್ಲಿ ಸಂಚಾರ ನಿಯಂತ್ರಣಕ್ಕೆ ಮುಂದಾಗಿದ್ದಾರೆ.
ಕಲ್ಲಾಪಿನಿಂದ ಮಂಗಳೂರಿಗೆ ತೆರಳಲು ಎರಡು ಬದಿಯ ಹೆದ್ದಾರಿ ರಸ್ತೆಯಿಂದಲೂ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ತೊಕ್ಕೊಟ್ಟಿನಿಂದ ಮಂಗಳೂರಿಗೆ ತೆರಳುವ ಸರಕು ಘನ ವಾಹನಗಳನ್ನು ಮಾತ್ರ ಹಳೆಯ ಸೇತುವೆಯ ಮೇಲಿಂದ ಬಿಡಲಾಗಿದೆ. ಒಟ್ಟು ನಾಲ್ಕು ದಿನಗಳ ಕಾಲ ಸೇತುವೆಯ ಕಾಮಗಾರಿ ನಡೆಯಲಿದ್ದು, ಪೂರ್ವ ಸಿದ್ಧತೆ ಇಲ್ಲದೆ ಕಾಮಗಾರಿ ನಡೆಸಿದ್ದರಿಂದ ವಾಹನ ಸವಾರರು ಸಂಕಷ್ಟ ಅನುಭವಿಸುವಂತಾಗಿದೆ.----------------ನೇತ್ರಾವತಿ ಸೇತುವೆ ದುರಸ್ತಿ ಕಾಮಗಾರಿ:
ನಾಗರಿಕರ ಸಹಕಾರಕ್ಕೆ ಪೊಲೀಸರ ವಿನಂತಿಮಂಗಳೂರು: ಡಿ.19ರಿಂದ ಸುಮಾರು 10 ದಿನಗಳ ಕಾಲ ಮಂಗಳೂರು ನಗರ ವ್ಯಾಪ್ತಿಯ ಉಳ್ಳಾಲದಲ್ಲಿ ನೇತ್ರಾವತಿ ಸೇತುವೆ ಮೇಲ್ಭಾಗ ರಸ್ತೆ ಕಾಮಗಾರಿಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವತಿಯಿಂದ ನಡೆಯುತ್ತಿದೆ.ಕೇರಳ, ತಲಪಾಡಿ ಹಾಗೂ ತೊಕ್ಕೊಟ್ಟು ಕಡೆಯಿಂದ ಮಂಗಳೂರು ನಗರದ ಕಡೆಗೆ ವಾಹನಗಳು ಪೀಕ್ ಅವರ್‌ಗಳಲ್ಲಿ ನೇತ್ರಾವತಿ ಸೇತುವೆ ಕಾಮಗಾರಿ ನಿಮಿತ್ತ ವಾಹನಗಳ ಸಂಚಾರ ನಿಧಾನ ಗತಿಯಲ್ಲಿ ಸಾಗುತ್ತಿದೆ. ಮಂಗಳೂರು ನಗರ ಸಂಚಾರ ಪೊಲೀಸರು ವಾಹನಗಳ ಸುಗಮ ಸಂಚಾರಕ್ಕೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿದ್ದು, ಸಂಚಾರಕ್ಕೆ ತೀರಾ ಅಡಚಣೆಯಾಗುವುದರಿಂದ ಸೇತುವೆಯ ಬಳಿಯ ತೆರೆದ ವಿಭಜಕದ ಮೂಲಕ ಪೂರ್ವ ರಸ್ತೆಯನ್ನು (ಮತ್ತೊಂದು ಕಡೆಯ ರಸ್ತೆಯಲ್ಲಿ) ದ್ವಿಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಆದ್ದರಿಂದ ಸಾರ್ವಜನಿಕರು, ವಾಹನ ಚಾಲಕರು/ಸವಾರರು ಎಚ್ಚರಿಕೆ ವಹಿಸಿ ಸೂಕ್ತ ಸಹಕಾರ ನೀಡುವಂತೆ ಪೊಲೀಸ್ ಕಮಿಷನರ್ ಪ್ರಕಟಣೆಯಲ್ಲಿ ಕೋರಿದ್ದಾರೆ.------------