ರಾಜ್ಯ ಸರ್ಕಾರ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳ ದಂಡವನ್ನು ಶೇ. 50ರಷ್ಟು ರಿಯಾಯಿತಿಯಡಿ ಪಾವತಿಸಲು ನೆಟ್ವರ್ಕ್‌ ಸಮಸ್ಯೆ ಎದುರಾಗಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ರಾಜ್ಯ ಸರ್ಕಾರ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳ ದಂಡವನ್ನು ಶೇ. 50ರಷ್ಟು ರಿಯಾಯಿತಿಯಡಿ ಪಾವತಿಸಲು ನೆಟ್ವರ್ಕ್‌ ಸಮಸ್ಯೆ ಎದುರಾಗಿದೆ. ದಂಡ ಪಾವತಿಸಿಕೊಳ್ಳಲು ವಾಹನ ತಡೆಯುವ ಪೊಲೀಸರು, ದಂಡ ಪಾವತಿಸಬೇಕೆಂಬ ಸವಾರರು ಕಂಗಾಲಾಗುತ್ತಿದ್ದಾರೆ.

ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಬಾಕಿ ಉಳಿದಿರುವ ದಂಡ ಪಾವತಿಸಲು ವಾಹನ ಮಾಲೀಕರಿಗೆ ರಾಜ್ಯ ಸರ್ಕಾರ ಶೇ. 50ರಷ್ಟು ರಿಯಾಯಿತಿ ನೀಡಿದೆ. ಜೂ. 21ರಿಂದ ಪ್ರಾರಂಭವಾಗಿರುವ ಈ ವಿಶೇಷ ಯೋಜನೆಯು ಜು. 10ರ ವರೆಗೆ ಜಾರಿಯಲ್ಲಿರಲಿದೆ. 2026ರ ಮೇ ಮೊದಲು ಇಲಾಖೆಯ ಸಂಚಾರ ಇ-ಚಲನ್‌ಗಳಲ್ಲಿ ಬಾಕಿ ಕೇಸ್‌ಗಳ ದಂಡದ ಮೊತ್ತ ಯೋಜನೆಯಡಿ ಮತ್ತು 1991ರಿಂದ 2022ರ ವರೆಗೆ ದಾಖಲಾಗಿರುವ 1.87 ಲಕ್ಷಕ್ಕೂ ಹೆಚ್ಚು ಡಿಪಾರ್ಟ್‌ಮೆಂಟ್‌ ಸ್ಟ್ಯಾಟ್ಯುಟರಿ ಆ್ಯಕ್ಷನ್‌ ಪ್ರಕರಣಗಳ ದಂಡ ಪಾವತಿಸಿಕೊಳ್ಳಲಾಗುತ್ತಿದೆ. ಆದರೆ ಜೂ. 21ಕ್ಕೆ ಇದು ಪ್ರಾರಂಭವಾಗಿದ್ದು ದಂಡ ಪಾವತಿಸಿಕೊಳ್ಳಲು ಆನ್‌ಲೈನ್‌ನಲ್ಲಿ ಸಾಧ್ಯವೇ ಆಗುತ್ತಿಲ್ಲ

ಅಂದಿನಿಂದಲೇ ಬೆಳಗ್ಗೆಯಿಂದ ಸಂಜೆ ವರೆಗೂ ಸಂಚಾರಿ ಪೊಲೀಸರು ಆಯಕಟ್ಟಿನ ಸ್ಥಳಗಳಲ್ಲಿ ನಿಂತು ವಾಹನಗಳನ್ನು ತಡೆದು ಬಾಕಿಯುಳಿದಿರುವ ದಂಡ ಎಷ್ಟು ಎಂದು ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ದಂಡ ಪಾವತಿಸಿಕೊಳ್ಳಲು ಮಾತ್ರ ಸಾಧ್ಯವೇ ಆಗುತ್ತಿಲ್ಲ.

ನೆಟ್ವರ್ಕ್‌ ಸಮಸ್ಯೆ:

ಕೆಎಸ್‌ಪಿ ಫೈನ್‌ (ksp fine- karnataka state police) ವೆಬ್‌ಗೆ ಹೋದರೆ ದಂಡ ಪಾವತಿಯ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ವಾಹನದ ಸಂಖ್ಯೆ ಹಾಕಿದರೆ ಕ್ಯಾಪ್ಚಾ ನಮೂದಿಸುವಂತೆ ಬರುತ್ತದೆ. ಆದರೆ ಕ್ಯಾಪ್ಚಾ ಬಟನ್‌ ಕ್ಲಿಕ್‌ ಮಾಡಿದರೆ ಸಾಕು "ನೆಟ್ವರ್ಕ್‌ ಎರರ್‌ " (network error) ಎಂದೇ ಬರುತ್ತಿದೆ. ಕೆಲವೊಮ್ಮೆ ಬ್ರೌಸಿಂಗ್‌ ಎಂದು ಸುತ್ತುತ್ತಲೇ ಇರುತ್ತವೆ. ಇಲ್ಲವೇ ಸರ್ವರ್‌ ಡೌನ್‌ ಎಂದು ಕೂಡ ತೋರಿಸುತ್ತಿರುತ್ತದೆ. ಹೀಗಾಗಿ. ಈ ವರೆಗೂ ಸರಿಯಾಗಿ ದಂಡ ಪಾವತಿಸಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ. ಇನ್ನು ನಾವೇ ಆನ್‌ಲೈನ್‌ನಲ್ಲಿ ಮಾಡಲು ಪ್ರಯತ್ನಿಸಿದರೂ ಇದೇ ಪರಿಸ್ಥಿತಿ.

ಕಳೆದ ನಾಲ್ಕು ದಿನಗಳಿಂದ ಪೊಲೀಸರು ವಾಹನಗಳನ್ನು ಹಿಡಿದು ನಿಲ್ಲಿಸುತ್ತಾರೆ. ಆದರೆ ದಂಡ ಪಾವತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಿಡಿದವರನ್ನು ಹಾಗೆ ಬಿಟ್ಟು ಕಳುಹಿಸುವುದೇ ಆಗಿದೆ. 10- 15 ಸಲ ಪ್ರಯತ್ನಿಸಿದರೆ ಒಂದೋ ಅಥವಾ ಎರಡು ಸಲವೋ ಪಾವತಿಸಿಕೊಳ್ಳಬಹುದಾಗಿದೆ. ಹೀಗಾಗಿ ನಾಳೆ ಬನ್ನಿ ಎಂದು ವಾಹನ ಸವಾರರಿಗೆ ಹೇಳಿ ಕಳುಹಿಸುವುದೇ ಆಗಿದೆ ಎಂಬ ಗೋಳು ಪೊಲೀಸರದ್ದು.

ಈ ವರೆಗೂ ಅಲ್ಲೊಬ್ಬರು ಇಲ್ಲೊಬ್ಬರಿಂದ ಮಾತ್ರ ದಂಡ ಪಾವತಿಸಿಕೊಳ್ಳಲಾಗಿದೆ. ಹಿಂದೆ ಅನೌನ್ಸ್‌ ಮಾಡಿದಾಗ ಈ ರೀತಿ ಇರಲಿಲ್ಲ. ಆದರೆ, ಈಗ ಬಹಳ ಸಮಸ್ಯೆಯಾಗುತ್ತಿದೆ. ದಂಡ ಪಾವತಿಸಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ. ದಂಡ ಪಾವತಿಸಬೇಕಾದ ಸವಾರರು ಏನ್‌ ಸರ್‌ ಸರ್ವರ್‌ ಸರಿಯಿಲ್ಲ. ಸರ್ವರ್‌ ಸರಿಯಾದ ಬಳಿಕ ಎಲ್ಲಿಯಾದರೂ ಪಾವತಿಸುತ್ತೇನೆ ಬಿಡಿ ಎಂದು ಅಲ್ಲಿಂದ ಕಾಣೆಯಾಗುತ್ತಿದ್ದಾರೆ.

ಒಟ್ಟಿನಲ್ಲಿ ದಂಡ ಪಾವತಿಸಿಕೊಳ್ಳಲು ಪೊಲೀಸರು ಪರದಾಡುತ್ತಿರುವುದಂತೂ ಸತ್ಯ. ಇನ್ನಾದರೂ ಸರ್ಕಾರ ಉಂಟಾಗಿರುವ ತಾಂತ್ರಿಕ ಸಮಸ್ಯೆ ಬಗೆಹರಿಸಿ ಸುಸೂತ್ರವಾಗಿ ದಂಡ ಪಾವತಿಸಿಕೊಳ್ಳಲು ವ್ಯವಸ್ಥೆ ಮಾಡಬೇಕು ಎಂಬುದು ಪೊಲೀಸರು, ಸಾರ್ವಜನಿಕರ ಅಂಬೋಣ.ಮೂರು ದಿನಾ ಆಯ್ತು ಸರ್‌. ಸರಿಯಾಗಿ ದಂಡ ಪಾವತಿಸಿಕೊಳ್ಳಲು ಆಗುತ್ತಲೇ ಇಲ್ಲ. ಬರೀ ನೆಟ್ವರ್ಕ್‌ ಎರರ್‌ ಅಂತಾನೇ ತೋರಿಸುತ್ತಿದೆ. ಹೀಗಾದರೆ ಹೇಗೆ ತುಂಬಿಸಿಕೊಳ್ಳಬೇಕು.

ಎಎಸ್‌ಐ

ಎರಡು ದಿನ ಆಯ್ತು ಸರ್‌. ನನ್ನ ಬೈಕ್‌ ಹಿಡಿತಾರೆ. ಚೆಕ್‌ ಮಾಡಲು ಪ್ರಯತ್ನಿಸುತ್ತಾರೆ. ಆದರೆ ದಂಡ ಎಷ್ಟಿದೆ ಎಂದು ಹೇಳಲು ಪೊಲೀಸರಿಗೂ ಸಾಧ್ಯವಾಗುತ್ತಿಲ್ಲ. ಇನ್ನು ದಂಡ ಪಾವತಿಸುವುದೆಲ್ಲಿ.

ರಾಘವೇಂದ್ರ ಕುಲಕರ್ಣಿ, ಬೈಕ್‌ ಸವಾರ