ಜಾಮರ್‌ನಿಂದ ನೆಟ್‌ವರ್ಕ್‌ ಸಮಸ್ಯೆ: ಕಾರಾಗೃಹಕ್ಕೆ ಸ್ಥಳೀಯರ ಮುತ್ತಿಗೆ

| Published : Jun 09 2024, 01:32 AM IST

ಜಾಮರ್‌ನಿಂದ ನೆಟ್‌ವರ್ಕ್‌ ಸಮಸ್ಯೆ: ಕಾರಾಗೃಹಕ್ಕೆ ಸ್ಥಳೀಯರ ಮುತ್ತಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಅಳವಡಿಸಿರುವ ಮೊಬೈಲ್‌ ಜಾಮರ್‌ನಿಂದ ಸುತ್ತಮುತ್ತಲ ಪ್ರದೇಶಗಳಲ್ಲಿ ನೆಟ್‌ ವರ್ಕ್‌ ಸಮಸ್ಯೆಯಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಶನಿವಾರ ಕೇಂದ್ರ ಕಾರಾಗೃಹಕ್ಕೆ ಮುತ್ತಿಗೆ ಹಾಕಲು ಯತ್ನಿಸಿ ಬಳಿಕ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಅಳವಡಿಸಿರುವ ಮೊಬೈಲ್‌ ಜಾಮರ್‌ನಿಂದ ಸುತ್ತಮುತ್ತಲ ಪ್ರದೇಶಗಳಲ್ಲಿ ನೆಟ್‌ ವರ್ಕ್‌ ಸಮಸ್ಯೆಯಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಶನಿವಾರ ಕೇಂದ್ರ ಕಾರಾಗೃಹಕ್ಕೆ ಮುತ್ತಿಗೆ ಹಾಕಲು ಯತ್ನಿಸಿ ಬಳಿಕ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು.

ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಮೊಬೈಲ್‌ ಬಳಸದಂತೆ ಕಾರಾಗೃಹದಲ್ಲಿ ಜಾಮರ್‌ ಅಳವಡಿಸಲಾಗಿದೆ. ಇದರಿಂದ ಕಾರಾಗೃಹದ ಸುತ್ತಮುತ್ತಲ ಸುಮಾರು ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಸಾರ್ವಜನಿಕರ ಮೊಬೈಲ್‌ಗಳಿಗೆ ನೆಟ್‌ ವರ್ಕ್ ಸಿಗದೆ ಸಮಸ್ಯೆಯಾಗಿದೆ. ಈ ಸಮಸ್ಯೆ ಬಗ್ಗೆ ಜೈಲಿನ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದರು.

ಆಕ್ರೋಶ ಭರಿತ ಸ್ಥಳೀಯ ನಿವಾಸಿಗಳು ವಿವಿಧ ಘೋಷಣೆ ಕೂಗುತ್ತಾ ಕೇಂದ್ರ ಕಾರಾಗೃಹಕ್ಕೆ ಮುತ್ತಿಗೆ ಹಾಕಲು ಮುಂದಾದರು. ಈ ವೇಳೆ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಮುತ್ತಿಗೆಗೆ ಹೊರಟ್ಟಿದ್ದ ಪ್ರತಿಭಟನಾಕಾರನ್ನು ತಡೆದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ಬಳಿಕ ರಸ್ತೆ ಮಾಡಿದ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.

ಕಾರಾಗೃಹದಲ್ಲಿ ಜಾಮರ್‌ ಅಳವಡಿಸಿರುವುದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ಕಳೆದ ಏಳು ತಿಂಗಳಿಂದ ಮೊಬೈಲ್‌ ನೆಟ್‌ ವರ್ಕ್‌ ಸಮಸ್ಯೆಯಾಗಿದೆ. ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಆ್ಯಂಬುಲೆನ್ಸ್‌ಗೆ ಕರೆ ಮಾಡಲು ಸಾಧ್ಯವಾಗುತ್ತಿಲ್ಲ. ರಸ್ತೆಯ ಬದಿಯ ವ್ಯಾಪಾರಿಗಳ ಯುಪಿಐ ಹಣ ಪಾವತಿಗೂ ಸಮಸ್ಯೆಯಾಗಿದೆ. ಇತ್ತೀಚೆಗೆ ಸ್ಥಳೀಯ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೆ ಒಳಗಾಗಿ ಸಕಾಲಕ್ಕೆ ಆಸ್ಪತ್ರೆಗೆ ಕರೆದೊಯ್ಯಲ್ಲು ಸಾಧ್ಯವಾಗದೆ ಮೃತಪಟ್ಟಿದ್ದಾರೆ. ಮೊಬೈಲ್ ನೆಟ್‌ವರ್ಕ್‌ ಇದ್ದಿದ್ದರೆ ಆ್ಯಂಬುಲೆನ್ಸ್‌ ಕರೆಸಿಕೊಂಡು ಸಕಾಲಕ್ಕೆ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಪ್ರಾಣ ಉಳಿಸಬಹುದಿತ್ತು. ಈ ನೆಟ್‌ ವರ್ಕ್‌ ಸಮಸ್ಯೆಯಿಂದ ಸ್ಥಳೀಯ ನಿವಾಸಿಗಳಿಗೆ ಸಾಕಷ್ಟು ಸಮಸ್ಯೆಯಾಗಿದೆ. ಕೂಡಲೇ ಈ ಸಮಸ್ಯೆ ಬಗೆಹರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.