ಸಾರಾಂಶ
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ ಪಟ್ಟಣದಲ್ಲಿ ಬೀದಿನಾಯಿಗಳ ಕಾಟ ನಿಯಂತ್ರಿಸಲಾಗದ ಮಟ್ಟಕ್ಕೆ ತಲುಪಿದೆ. ಅಲ್ಲದೇ, ಎಳೆಯ ಮಕ್ಕಳು ಬೀದಿನಾಯಿಗಳ ದಾಳಿಗೆ ತುತ್ತಾಗುತ್ತಿರುವುದು ಆತಂಕದ ಸಂಗತಿ. ರಾಜ್ಯದಲ್ಲಿಯೇ ಮೊಟ್ಟಮೊದಲ ಬಾರಿಗೆ ಪಟ್ಟಣ ಪಂಚಾಯಿತಿ ಮಟ್ಟದಲ್ಲಿ ಬೀದಿನಾಯಿಗಳಿಗೆ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ ಮಾಡಿಸುತ್ತಿರುವ ಕಾರ್ಯ ಪ್ರಶಂಸನೀಯ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಶಿವಮೊಗ್ಗ ಜಿಲ್ಲಾ ಪಶು ಆಸ್ಪತ್ರೆ ಮತ್ತು ಸ್ಥಳೀಯ ಪಶು ವೈದ್ಯ ಇಲಾಖೆಯ ಸಹಯೋಗದೊಂದಿಗೆ ನಡೆಸಲಾದ ಬೀದಿನಾಯಿಗಳ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ, ಪಾದಾಚಾರಿಗಳ ಮೇಲೆ ಎರಗಿ ದಾಳಿ ನಡೆಸುವ ಹಂತಕ್ಕೆ ಬೀದಿನಾಯಿಗಳ ಕಾಟ ಹೆಚ್ಚಿದೆ. ಅಗಾಧ ಸಂಖ್ಯೆಯಲ್ಲಿ ಹೆಚ್ಚುತ್ತಿರುವ ಬೀದಿನಾಯಿಗಳ ಹಾವಳಿ ತಡೆಗಟ್ಟುವ ಅನಿವಾರ್ಯತೆ ಇದೆ. ಈಚಿನ ದಿನಗಳಲ್ಲಿ ರಾಜ್ಯದಲ್ಲಿಯೇ ದಾಖಲೆ ಎಂಬಂತೆ ಸ್ಥಳೀಯ ಪಟ್ಟಣ ಪಂಚಾಯಿತಿ ನಡೆಸುತ್ತಿರುವ ಈ ಶಸ್ತ್ರಚಿಕಿತ್ಸೆ ಕಾರ್ಯ ಇತರ ಸ್ಥಳೀಯ ಆಡಳಿತಗಳಿಗೂ ಮಾದರಿಯಾಗಿದೆ ಎಂದರು.ಜಿಲ್ಲಾ ಪಶು ಆಸ್ಪತ್ರೆ ಉಪನಿರ್ದೆಶಕ ಡಾ. ಬಸವೇಶ್ ಹೂಗಾರ್ ಮಾತನಾಡಿ, ಪ್ರಾಣಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಪ್ರಕ್ರಿಯೆ ತಜ್ಞವೈದ್ಯರ ಮೂಲಕ ಮನುಷ್ಯರ ರೀತಿಯಲ್ಲಿಯೇ ನಡೆಸಬೇಕಿದೆ. 2030 ರೊಳಗೆ ಸಂಪೂರ್ಣ ರೇಬಿಸ್‌ಮುಕ್ತ ರಾಷ್ಟ್ರ ಮಾಡುವ ಕೇಂದ್ರ ಸರ್ಕಾರದ ಸೂಚನೆಯಂತೆ ಪ್ರತಿ ಸ್ಥಳೀಯ ಆಡಳಿತದ ಮೂಲಕ ಈ ಕಾರ್ಯ ನಡೆಸಬೇಕಿದೆ ಎಂದರು.
ಪ.ಪಂ. ಅಧ್ಯಕ್ಷೆ ಗೀತಾ ರಮೇಶ್ ಮಾತನಾಡಿ, ಪಟ್ಟಣ ವ್ಯಾಪ್ತಿಯಲ್ಲಿ ಬೀದಿನಾಯಿಗಳ ವಿಪರೀತ ಕಾಟದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಈ ದಿನ ಪ್ರಥಮ ಹಂತದಲ್ಲಿ 50 ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಲಾಗುತ್ತಿದೆ. ಇದಕ್ಕೆ ಸಾಕಷ್ಟು ವೆಚ್ಚವೂ ತಗಲುತ್ತಿದ್ದು, ಮುಂದಿನ ಹಂತದಲ್ಲಿ ಉಳಿದ ಬೀದಿನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸುವುದಾಗಿ ತಿಳಿಸಿದರು.ಪಪಂ ಉಪಾಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಸದಸ್ಯರಾದ ರತ್ನಾಕರ ಶೆಟ್ಟಿ, ಸೊಪ್ಪುಗುಡ್ಡೆ ರಾಘವೇಂದ್ರ, ಜ್ಯೋತಿ ಮೋಹನ್, ಶಬನಂ ಇದ್ದರು.
ಶಸ್ತ್ರಚಿಕಿತ್ಸೆ ಕಾರ್ಯದಲ್ಲಿ ಡಾ.ನಾಗರಾಜ್, ಡಾ.ರುದ್ರೇಶ್, ಡಾ.ಯುವರಾಜ್, ಡಾ.ದಯಾನಂದ್. ಡಾ. ಅರವಿಂದ್ ಮತ್ತು ಡಾ. ಮುರಳೀಧರ್ ಪಾಲ್ಗೊಂಡಿದ್ದರು.- - - -16ಟಿಟಿಎಚ್01: ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವತಿಯಿಂದ 50 ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಸ್ಥಳಕ್ಕೆ ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿ, ಪರಿಶೀಲಿಸಿದರು.