ಸಿಎಂ ಸಿದ್ದರಾಮಯ್ಯ ಬಗ್ಗೆ ಕೆಟ್ಟದ್ದಾಗಿ ಮಾತನಾಡಿಲ್ಲ: ಸಂಜಯ ಪಾಟೀಲ

| Published : Aug 24 2024, 01:16 AM IST

ಸಿಎಂ ಸಿದ್ದರಾಮಯ್ಯ ಬಗ್ಗೆ ಕೆಟ್ಟದ್ದಾಗಿ ಮಾತನಾಡಿಲ್ಲ: ಸಂಜಯ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ನಾನು ಕೆಟ್ಟದ್ದಾಗಿ ಹೇಳಿಕೆ ನೀಡಿಲ್ಲ. ಒಂದು ವೇಳೆ ಏನಾದರೂ ಬಾಯಿತಪ್ಪಿ ಹೇಳಿಕೆ ನೀಡಿದ್ದರೆ ಅದಕ್ಕಾಗಿ ವಿಷಾದಿಸುತ್ತೇನೆ ಎಂದು ಮಾಜಿ ಶಾಸಕ ಸಂಜಯ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ನಾನು ಕೆಟ್ಟದ್ದಾಗಿ ಹೇಳಿಕೆ ನೀಡಿಲ್ಲ. ಒಂದು ವೇಳೆ ಏನಾದರೂ ಬಾಯಿತಪ್ಪಿ ಹೇಳಿಕೆ ನೀಡಿದ್ದರೆ ಅದಕ್ಕಾಗಿ ವಿಷಾದಿಸುತ್ತೇನೆ ಎಂದು ಮಾಜಿ ಶಾಸಕ ಸಂಜಯ ಪಾಟೀಲ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡ ಬಳಿಕ ನಾನು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದೆ. ನಾನು ಗಾದೆ ಮಾತು ಪ್ರಸ್ತಾಪಿಸಿದ್ದೆ. ನನ್ನ ಹೇಳಿಕೆಯನ್ನೂ ಅಪಪ್ರಚಾರ ಮಾಡಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅ‍ವರ ಬಗ್ಗೆ ಗೌರವವಿದೆ. ಹೆಮ್ಮೆಯೂ ಇದೆ. ನಾನು ಮಾತನಾಡುವ ವೇಳೆ ಬಾಯಿತಪ್ಪಿ ಹೇಳಿಕೆ ನೀಡಿದ್ದರೆ ವಿಷಾದಿಸುತ್ತೇನೆ. ನಾನು ಕೆಟ್ಟದ್ದಾಗಿ ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

ಈ ಹಿಂದೆ ಕಾಂಗ್ರೆಸ್‌ ಕಾರ್ಯಕರ್ತೆಯರಿಗೆ ದುಡ್ಡು ಕೊಟ್ಟು ನನ್ನ ಮನೆಯ ಎದುರು ಧರಣಿ ನಡೆಸಿದರು. ಕಾಂಗ್ರೆಸ್‌ ಸರ್ಕಾರ ಇದೆ ಎಂದು ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು, ನನ್ನ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದರು. ನನ್ನ ಭಾವನೆಯನ್ನು ಹೋರಾಟದಲ್ಲಿ ವ್ಯಕ್ತಪಡಿಸಿದ್ದೇನೆ. ಏನೇ ತಪ್ಪಿದ್ದರೆ ಬಳಿಕ ವಿಷಾದ ವ್ಯಕ್ತಪಡಿಸಿದ್ದೇನೆ. ಈ ವಿಚಾರವಾಗಿ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್‌ ಇಲಾಖೆ ಮತ್ತು ಕೋರ್ಟ್‌ ಇದೆ. ಮಹಿಳೆಯರೇ ದಬ್ಬಾಳಿಕೆ ಮಾಡುತ್ತಿದ್ದಾರೆ. ನಾನೊಬ್ಬ ಮಾಜಿ ಜನಪ್ರತಿನಿಧಿಯಾಗಿದ್ದರೂ ನಮಗೆ ಸುರಕ್ಷತೆ ಸಿಗುತ್ತಿಲ್ಲ ಎಂದು ಹೇಳಿದರು.