ಸಾರಾಂಶ
- ಸರ್ಕಾರಿ ನೌಕರರ ಸಂಘದ ಬೆಂಬಲಿತ ಎಲ್ಲ 13 ಅಭ್ಯರ್ಥಿಗಳಿಗೆ ಜಯ
ಕನ್ನಡಪ್ರಭ ವಾರ್ತೆ ಧಾರವಾಡಕಳೆದ ಎರಡು ದಶಕಗಳಿಂದ ಒಂದೇ ಗುಂಪು ಅಧಿಕಾರ ವಹಿಸಿಕೊಂಡು ಬರುತ್ತಿದ್ದ ಇಲ್ಲಿಯ ಸರ್ಕಾರಿ ನೌಕರರ ಸಹಕಾರಿ ಬ್ಯಾಂಕ್ ನಿರ್ದೇಶಕರ ಮಂಡಳಿ ಇದೀಗ ಬದಲಾಗಿದೆ. ನೌಕರರ ಸಂಘದ ಬೆಂಬಲಿತ 13 ನಿರ್ದೇಶಕರ ಸಂಪೂರ್ಣ ಪ್ಯಾನೆಲ್ ಬಹುಮತದೊಂದಿಗೆ ಚುನಾವಣೆಯಲ್ಲಿ ಜಯಗಳಿಸಿತು.
ಎರಡು ದಿನಗಳ ಹಿಂದೆ ಶಾಂತಿಯುತವಾಗಿ ಮತದಾನ ನಡೆದಿತ್ತು. ಮತ ಎಣಿಕೆ ಆರಂಭದಿಂದಲೇ ನೌಕರರ ಸಂಘದ ಬೆಂಬಲಿತ ಅಭ್ಯರ್ಥಿಗಳು ಮುಂಚೂಣಿಯಲ್ಲಿದ್ದರು. ಅಲ್ಲದೇ ಕೊನೆಯ ವರೆಗೆ ಪ್ರತಿ ಕ್ಷೇತ್ರದ ಅಭ್ಯರ್ಥಿಗಳು ಜಯ ಗಳಿಸುತ್ತಲೇ ಬಂದಿದ್ದು, 20 ವರ್ಷಗಳಿಂದ ಆಡಳಿತ ನಡೆಸುತ್ತ ಬಂದಿದ್ದ ಪ್ಯಾನೆಲ್‌ಗೆ ತೀವ್ರ ಹಿನ್ನಡೆ ಉಂಟಾಯಿತು. ನೌಕರರ ಸಂಘದ ಬೆಂಬಲಿತ 13 ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿದ್ದು, ಎಲ್ಲ 13 ಅಭ್ಯರ್ಥಿಗಳು ಜಯ ಗಳಿಸುವ ಮೂಲಕ ದಾಖಲೆ ನಿರ್ಮಿಸಿದರು.ಸಾಮಾನ್ಯ ಕ್ಷೇತ್ರದಿಂದ ಬಸವರಾಜ ವಾಸನದ (157), ಮಂಜುನಾಥ ನಡುವಿನಮನಿ (156), ಎನ್.ಟಿ. ಕಾಖಂಡಕಿ (155), ಜಿ.ವಿ. ದಿನಮಣಿ (153), ಎಂ.ಎಂ. ಮೊರಬ (143), ರಾಮಸ್ವಾಮಿ ಗರಗ (142), ಶಶಿಧರ ಕಂಬಾರ (135). ಪರಿಶಿಷ್ಟ ಜಾತಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಶಿನಾಥ ಹವಳಪ್ಪ (163), ಪರಿಶಿಷ್ಟ ಪಂಗಡದಿಂದ ಸ್ಪರ್ಧಿಸಿದ್ದ ಎ.ಎಸ್. ವಾಲ್ಮೀಕಿ (146), ಮಹಿಳಾ ಕ್ಷೇತ್ರದಿಂದ ಉಮಾ. ಕೆ. (158), ಚೆನ್ನಮ್ಮ ಹರಿಜನ (156), ಅ ವರ್ಗದಿಂದ ಸ್ಪರ್ಧಿಸಿದ್ದ ಗೋಪಾಲ ಸದರಲು (137), ಬ ವರ್ಗದಿಂದ ಸ್ಪರ್ಧಿಸಿದ್ದ ವೀರಯ್ಯ ಕಂಬಿ (153) ಬಹುಮತದಿಂದ ಆಯ್ಕೆಯಾದರು.
ಧಾರವಾಡ, ಗದಗ ಮತ್ತು ಹಾವೇರಿ ಮೂರು ಜಿಲ್ಲೆ ಸೇರಿ ಅಂದಾಜು 2900 ಸದಸ್ಯರಿದ್ದರೂ ಕೇವಲ 370 ಜನ ಮಾತ್ರ ಮತದಾನದ ಹಕ್ಕನ್ನು ಹೊಂದಿದ್ದರು. ಈ ಕಡಿಮೆ ಮತದಾರರ ಸಂಖ್ಯೆಯಲ್ಲಿಯೇ ಸರ್ಕಾರಿ ನೌಕರರ ಸಂಘದ ಬೆಂಬಲಿತ ಸದಸ್ಯರೆಲ್ಲರೂ ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ.ಗೆಲುವು ಸಾಧಿಸಿದ ಎಲ್ಲ ನೂತನ ನಿರ್ದೇಶಕರಿಗೆ ನೌಕರರ ಸಂಘದ ಅಧ್ಯಕ್ಷ ಎಸ್.ಎಫ್. ಸಿದ್ಧನಗೌಡರ, ನಿಕಟಪೂರ್ವ ಅಧ್ಯಕ್ಷ ಎಸ್.ಕೆ. ರಾಮದುರ್ಗ, ಎಫ್.ಬಿ. ಮಂಜಣ್ಣವರ, ದೇವಿದಾಸ ಶಾಂತಿಕರ, ರಾಜಶೇಖರ ಕೋನರಡ್ಡಿ, ಮಂಜುನಾಥ ಯಡಳ್ಳಿ, ವಿರೂಪಾಕ್ಷ ಕಾಳೆ, ರವಿ ಕಟ್ಟಿ, ಸಿದ್ದು ಹಿರೇಮಠ ಸೇರಿದಂತೆ ಸಂಘದ ಎಲ್ಲ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದರು.