ಸಾರಾಂಶ
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು : ಮಾರ್ಗಸೂಚಿ ದರದ ಮೇಲೆ ಜಾಹೀರಾತು ಶುಲ್ಕ ನಿಗದಿ, ರಸ್ತೆ, ಸರ್ಕಲ್ ಮತ್ತು ವಲಯವಾರು ಟೆಂಡರ್ ಮೂಲಕ ಜಾಹೀರಾತು ಪ್ರದರ್ಶನಕ್ಕೆ ಅವಕಾಶ, ಟೆಂಡರ್‌ನಲ್ಲಿ ಭಾಗವಹಿಸಲು ಕಡ್ಡಾಯ ನೋಂದಣಿ ಸೇರಿದಂತೆ ಹಲವು ಅಂಶಗಳನ್ನು ಒಳಗೊಂಡ ಬಿಬಿಎಂಪಿಯು ಸಿದ್ಧ ಪಡಿಸಿರುವ ‘ನೂತನ ಜಾಹೀರಾತು ನೀತಿ-2024’ ಶೀಘ್ರದಲ್ಲಿ ಜಾರಿಗೆ ಬರಲಿದೆ.
ಹೊಸ ಜಾಹೀರಾತು ನೀತಿಯಿಂದ ಸುಮಾರು ₹1 ಸಾವಿರ ಕೋಟಿ ಆದಾಯ ನಿರೀಕ್ಷಿಸಲಾಗಿದೆ. ನೂತನ ಕರಡು ಜಾಹೀರಾತು ನೀತಿಗೆ ಈಗಾಗಲೇ ರಾಜ್ಯ ಸರ್ಕಾರ ಅನುಮೋದನೆ ದೊರೆತಿದೆ. ಶೀಘ್ರದಲ್ಲಿ ಪ್ರಕಟಿಸಿ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಸ್ವೀಕರಿಸಿದ ನಂತರ ಅವುಗಳನ್ನು ಪರಿಶೀಲಿಸಿ ಅಂತಿಮ ಅಧಿಸೂಚನೆ ಹೊರಡಿಸಲಿದೆ.
ಹೊಸ ನೀತಿಯ ಪ್ರಮುಖ ಅಂಶಗಳು:
ಮೂಲಗಳ ಪಾವತಿ ಪ್ರಕಾರ, ನೂತನ ನೀತಿಯಲ್ಲಿ ದೆಹಲಿ ಸೇರಿದಂತೆ ದೇಶದ ಇತರೆ ಮಹಾನಗರದ ಮಾದರಿಯಲ್ಲಿ ಜಾಹೀರಾತು ಪ್ರದರ್ಶನಕ್ಕೆ ಬಿಬಿಎಂಪಿ ಆಹ್ವಾನಿಸುವ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಕಡ್ಡಾಯವಾಗಿ ನೋಂದಣಿ ಮಾಡಬೇಕು. ನೋಂದಣಿ ಶುಲ್ಕ ₹5 ಲಕ್ಷ ಆಗಿದೆ. ನೋಂದಣಿ ಸಂಬಂಧಿಸಿದ ಅರ್ಜಿಯನ್ನು ಮುಖ್ಯ ಆಯುಕ್ತರಿಗೆ ಸಲ್ಲಿಕೆ ಮಾಡಬೇಕು. ಒಂದು ಬಾರಿ ನೋಂದಣಿ ಪಡೆದವರು ಪ್ರತಿ ಮೂರು ವರ್ಷಕ್ಕೆ ಒಂದು ಬಾರಿ ನವೀಕರಣ ಮಾಡಬೇಕಿದೆ.
ರಸ್ತೆ, ಸರ್ಕಲ್, ವಲಯವಾರು ಟೆಂಡರ್:
ಹೊಸ ನೀತಿಯಲ್ಲಿ ರಸ್ತೆ, ಸರ್ಕಲ್ ಹಾಗೂ ವಲಯವಾರು ಪ್ಯಾಕೇಜ್ ಮಾದರಿಯಲ್ಲಿ ಟೆಂಡರ್ ನಡೆಸುವುದಕ್ಕೆ ಅವಕಾಶ ಮಾಡಲಾಗಿದೆ. ರಸ್ತೆ ಅಗಲ, ಸರ್ಕಲ್ ಗಾತ್ರಕ್ಕೆ ಅನುಗುಣ ಜಾಹೀರಾತು ಫಲಕ ಅಳವಡಿಕೆಗೆ ತೀರ್ಮಾನಿಸಲಾಗಿದೆ. ಎರಡು ಜಾಹೀರಾತುಗಳ ನಡುವೆ ಕನಿಷ್ಠ 100 ಮೀಟರ್ ಅಂತರ ಕಾಯ್ದುಕೊಳ್ಳುವುದು ಕಡ್ಡಾಯಗೊಳಿಸಲಾಗಿದೆ.
ಮಾರ್ಗಸೂಚಿ ದರ:
ಮಾರ್ಗಸೂಚಿ ದರ ಆಧರಿಸಿ ಜಾಹೀರಾತು ಪ್ರದರ್ಶನಕ್ಕೆ ಶುಲ್ಕ ನಿಗದಿ ಪಡಿಸಲಾಗುವುದು. ಇದರಿಂದ ಹೆಚ್ಚಿನ ಮಾರ್ಗಸೂಚಿ ದರ ಇರುವ ಪ್ರದೇಶದಲ್ಲಿ ಜಾಹೀರಾತು ಪ್ರದರ್ಶನದ ಶುಲ್ಕ ಪ್ರಮಾಣ ಹೆಚ್ಚಾಗಲಿದೆ. ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡಿದವರಿಗೆ ಗುತ್ತಿಗೆ ದೊರೆಯಲಿದೆ.
ಪರಿಸರ ಸ್ನೇಹಿ ಕಡ್ಡಾಯ
ನೂತನ ಜಾಹೀರಾತು ನೀತಿಯಲ್ಲಿ ಕಡ್ಡಾಯವಾಗಿ ಪರಿಸರ ಸ್ನೇಹಿ ಇರುವ ವಸ್ತುಗಳನ್ನು ಬಳಕೆ ಮಾಡಿಕೊಳ್ಳಬೇಕು. ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳ ಮೇಲೆ ಜಾಹೀರಾತು ನೀಡಲು ಅವಕಾಶ ನೀಡಲಾಗುವುದು. ಬಿಬಿಎಂಪಿಗೆ ತೆರಿಗೆ ನೀಡಿ ಖಾಸಗಿ ಕಟ್ಟಡಗಳು ಬಾಡಿಗೆ ನೀಡಬಹುದಾಗಿದೆ.
ಈ ಪ್ರದೇಶದಲ್ಲಿ ಜಾಹೀರಾತು ನಿಷೇಧ
ಹೊಸ ನೀತಿಯಲ್ಲಿಯೂ ವಿಧಾನಸೌಧ ಮತ್ತು ಹೈಕೋರ್ಟ್ ಸುತ್ತಮುತ್ತಲಿನ ರಸ್ತೆಗಳಲ್ಲಿ ಯಾವುದೇ ರೀತಿಯ ಜಾಹೀರಾತು ಅಳವಡಿಕೆಗೆ ಅವಕಾಶ ಇಲ್ಲ. ಕುಮಾರ ಕೃಪಾ ರಸ್ತೆಯಲ್ಲಿ (ವಿಂಡ್ಸರ್ ಜಂಕ್ಷನ್‌ನಿಂದ ಶಿವಾನಂದ ವೃತ್ತದವರೆಗೆ), ರಾಜಭವನ ರಸ್ತೆಯಲ್ಲಿ (ಹೈಗ್ರೌಂಡ್ಸ್‌ನಿಂದ ಮಿನ್ಸ್ ಸ್ಕ್ವೇರ್‌ವರೆಗೆ), ಸ್ಯಾಂಕಿ ರಸ್ತೆಯಲ್ಲಿ (ಹೈ ಗ್ರೌಂಡ್ಸ್‌ನಿಂದ ವಿಂಡ್ಸರ್ ಸಿಗ್ನಲ್‌ವರೆಗೆ), ಅಂಬೇಡ್ಕರ್ ವೀಧಿ (ಕೆಆರ್ ವೃತ್ತದಿಂದ ಇನ್‌ಫೆಂಟ್ರಿ ರಸ್ತೆವರೆಗೆ), ಪೋಸ್ಟ್ ಆಫೀಸ್ ರಸ್ತೆ (ಕೆಆರ್ ಜಂಕ್ಷನ್‌ನಿಂದ ಎಸ್‌ಬಿಐ ಜಂಕ್ಷನ್), ಚಾಲುಕ್ಯ ವೃತ್ತ, ಮಹಾರಾಣಿ ಕಾಲೇಜು ರಸ್ತೆ (ಶೇಷಾದ್ರಿ ರಸ್ತೆ), ಕೆಆರ್ ವೃತ್ತ, ಕಬ್ಬನ್ ಪಾರ್ಕ್ ಮತ್ತು ಲಾಲ್‌ಬಾಗ್ ಸುತ್ತಮುತ್ತ, ನೃಪತುಂಗ ರಸ್ತೆ (ಕೆಆರ್ ವೃತ್ತದಿಂದ ಹಡ್ಸನ್ ವೃತ್ತ) ಮತ್ತು ಅರಮನೆ ರಸ್ತೆ (ಎಸ್‌ಬಿಐ ವೃತ್ತದಿಂದ ಚಾಲುಕ್ಯ ವೃತ್ತ)ದ ವರೆಗೆ ಜಾಹೀರಾತು ಪ್ರದರ್ಶನ ನಿಷೇಧಿಸಲಾಗಿದೆ.
ಆದರೆ, ಹೊಸ ನೀತಿಯು ಮೆಟ್ರೋ ಪಿಲ್ಲರ್‌ಗಳು, ಬಸ್‌ಗಳು, ಮೆಟ್ರೋ ರೈಲುಗಳು, ಟ್ಯಾಕ್ಸಿಗಳು, ಆಟೋಗಳು ಮತ್ತು ಬಸ್ ಶೆಲ್ಟರ್‌ಗಳಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸಲು ಅನುಮತಿ ನೀಡಲಾಗುತ್ತದೆ.ನೂತನ ಜಾಹೀರಾತಿ ನೀತಿ ಸಿದ್ಧಪಡಿಸಲಾಗಿದ್ದು, ಒಂದೆರಡು ದಿನದಲ್ಲಿ ಸಾರ್ವಜನಿಕರ ವೀಕ್ಷಣೆಗೆ ನೀಡಲಾಗುವುದು. ಆಕ್ಷೇಪಣೆ ಸಲ್ಲಿಸುವುದಕ್ಕೆ ಅವಕಾಶ ಇದೆ.
-ಮುನೀಶ್ ಮೌದ್ಗಿಲ್, ವಿಶೇಷ ಆಯುಕ್ತ, ಬಿಬಿಎಂಪಿ ಜಾಹೀರಾತು ವಿಭಾಗ.