ಮಾರುತಿ ಶಿಡ್ಲಾಪೂರ

ಕನ್ನಡಪ್ರಭ ವಾರ್ತೆ ಹಾನಗಲ್ಲ

ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ, ಅಭಾವ ಸೃಷ್ಟಿ ತಡೆಗಾಗಿ ಹೊಸ ಆ್ಯಪ್ ಮೂಲಕ ಮಾರಾಟಕ್ಕೆ ಅವಕಾಶ ನೀಡಲಾಗುತ್ತಿದ್ದು, ಹಾನಗಲ್ಲ ತಾಲೂಕಿನ ೩೮ ಸಾವಿರ ರೈತರು ೪೭ ಸಾವಿರ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬೆಳೆ ಬೆಳೆಯಲು ಈ ಬಾರಿ ಇದೇ ಆ್ಯಪ್ ಮೂಲಕವೇ ಖರೀದಿಸುವುದು ಅನಿವಾರ್ಯವಾಗಿದೆ. ತಾಲೂಕಿನ ೧೧೭ ಕೃಷಿ ಪರಿಕರ ಮಾರಾಟಗಾರ ಖಾಸಗಿ ಹಾಗೂ ಸೊಸೈಟಿಗಳಲ್ಲಿ ರಸಗೊಬ್ಬರ ಮಾರಾಟ ನಡೆಯುತ್ತದೆ.

ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟದ ದೂರುಗಳು ಕೇಳಿ ಬರುತ್ತಲೇ ಇದ್ದವು. ರಸಗೊಬ್ಬರದ ಅಭಾವ ಸೃಷ್ಟಿಯಾಗಿ ಹಲವು ರೀತಿಯ ಆತಂಕಗಳು ಕೃಷಿ ಇಲಾಖೆ ಹಾಗೂ ರೈತರನ್ನು ಕಾಡುತ್ತಿದ್ದವು. ಇದನ್ನು ತಡೆಯಲು ಆಧಾರ ಕಾರ್ಡ್‌ ಆಧರಿಸಿ ರಸಗೊಬ್ಬರ ನೀಡುವ ನಿಯಮ ಬಂದು, ಇದರಲ್ಲಿ ಕೃಷಿಕರಲ್ಲದವರೂ ರಸಗೊಬ್ಬರ ಖರೀದಿಸುವಂತಾಗಿತ್ತು. ಮತ್ತೆ ಈ ಕಾಳಸಂತೆ ತಡೆಯಲು ರೈತರಿಗೆ ಫಾರ್ಮರ್ ಐಡೆಂಟಿಫಿಕೇಶನ್ ನಂಬರ್ ನೀಡಲಾಗಿದೆ. ಹಾನಗಲ್ಲ ತಾಲೂಕಿನಲ್ಲಿ ಈಗಾಗಲೇ ಶೇ. ೯೯.೯ರಷ್ಟು ರೈತರಿಗೆ ಈ ನಂಬರ್ ನೀಡಲಾಗಿದೆ.

ಈ ಫಾರ್ಮರ್‌ ಐಡೆಂಟಿಫಿಕೇಶನ್ ನಂಬರನಲ್ಲಿ ರೈತರ ಹೆಸರು, ಗ್ರಾಮ, ಕೃಷಿ ಕ್ಷೇತ್ರ, ಬ್ಯಾಂಕ್ ಅಕೌಂಟ್ ನಂಬರ್, ಆಧಾರ್‌ ನಂಬರ್ ಮಾಹಿತಿಯನ್ನು ಉಳ್ಳದ್ದಾಗಿದೆ. ಈ ನಂಬರ್ ಆಧರಿಸಿಯೇ ಬೆಳೆಹಾನಿ, ವಿಮಾ ಸೌಲಭ್ಯ, ಸಾಲ, ಬೆಂಬಲ ಬೆಲೆ ಖರೀದಿ ಸೌಲಭ್ಯಗಳು ರೈತರಿಗೆ ದೊರೆಯುತ್ತಿವೆ. ಈಗ ರಸಗೊಬ್ಬರವನ್ನೂ ಕೂಡ ಇದೇ ಫಾರ್ಮರ್ ಐಡೆಂಟಿಫಿಕೇಶನ್ ನಂಬರ್‌ನೊಂದಿಗೆ ಹೊಸ ಆ್ಯಪ್ ತಾಳೆ ಮಾಡಿ ವಿತರಿಸುವ ಹೊಸ ಯೋಜನೆ ರೂಪಿತವಾಗಿದ್ದು, ಈ ಬಾರಿ ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ಬಹುಪಾಲು ತಡೆಯಲು ಸಾಧ್ಯ ಎಂಬ ಮಾಹಿತಿ ಇದೆ. ಮಾರಾಟದಲ್ಲಿ ಯಾವುದೇ ಮೋಸಕ್ಕೂ ಅವಕಾಶವಿಲ್ಲ. ಜಮೀನು ಇಲ್ಲದವರಿಗೆ ಈ ಬಾರಿ ರಸಗೊಬ್ಬರವೂ ಇಲ್ಲ.ಒಂದು ಎಕರೆ ಕೃಷಿಭೂಮಿಯ ಬೆಳೆಗೆ ಅಂದಾಜು ಎರಡು ಚೀಲ ಯೂರಿಯಾ, ಒಂದು ಚೀಲ ಡಿಎಪಿ, ೧ ಚೀಲ ಪೊಟ್ಯಾಶ್ ಬೇಕು. ಇಲ್ಲವೆ ಇವೆಲ್ಲದರ ಬದಲಾಗಿ ೩ ಬ್ಯಾಗ್ ಕಾಂಪ್ಲೆಕ್ಸ್‌ ರಸಗೊಬ್ಬರ ಬೇಕು ಎಂದು ಅಂದಾಜಿಸಲಾಗಿದೆ. ಈ ಅಂಕಿ-ಅಂಶ ಆಧರಿಸಿ ಮುಂಗಾರು ಹಾಗೂ ಹಿಂಗಾರು ಬೆಳೆಗಳಿಗೆ ೧೪,೦೩೫ ಟನ್ ಯೂರಿಯಾ, ೮,೩೪೦ ಟನ್ ಡಿಎಪಿ, ೧,೯೦೨ ಟನ್ ಎಂಓಪಿ, ೯೬೭ ಟನ್ ಕಾಂಪ್ಲೆಕ್ಸ್‌ ರಸಗೊಬ್ಬರ ಸೇರಿದಂತೆ ಒಟ್ಟು ೩೩,೯೫೦ ಟನ್ ರಸಗೊಬ್ಬರ ಬೇಕು ಎಂದು ಅಂದಾಜಿಸಲಾಗಿದೆ. ಹೊಸ ಆ್ಯಪ್ ಆಧರಿಸಿ ರಸಗೊಬ್ಬರ ಮಾರಾಟ ನಡೆದರೆ ಕಾಳಸಂತೆಯಲ್ಲಿ ಮಾರಾಟ ಹಾಗೂ ಅಭಾವ ಸೃಷ್ಟಿಯಿಂದಲೂ ಮುಕ್ತಿ ಸಾಧ್ಯ ಎಂದು ಕೃಷಿ ಇಲಾಖೆಯು ಅಂದಾಜಿಸಿದೆ.ಹೊಸ ಆ್ಯಪ್ ಕುರಿತಂತೆ ತಾಲೂಕಿನ ಎಲ್ಲ ಕೃಷಿ ಪರಿಕರ ಮಾರಾಟಗಾರರಿಗೆ, ರೈತ ಸಂಘದ ಪದಾಧಿಕಾರಿಗಳಿಗೆ, ಕೃಷಿ ಸಮಾಜದ ಸದಸ್ಯರಿಗೆ ಕೃಷಿ ಇಲಾಖೆ ಮುಖಾಂತರ ತರಬೇತಿ ಹಾಗೂ ಮಾಹಿತಿ ನೀಡಲಾಗುತ್ತದೆ. ರೈತರಿಗೂ ಈ ಬಗ್ಗೆ ಮಾಹಿತಿ ನೀಡುವ ಯೋಜನೆ ಇದೆ. ಈ ಬಗ್ಗೆ ರೈತ ಸಮುದಾಯಕ್ಕೆ ಸರಿಯಾದ ಮಾಹಿತಿ ನೀಡುವುದರಿಂದ ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ಹಾಗೂ ಅಭಾವ ಸೃಷ್ಟಿಯನ್ನು ತಪ್ಪಿಸಲು ಸಾಧ್ಯ. ಈ ಹೊಸ ಆ್ಯಪ್ ರೈತ ಸ್ನೇಹಿ ಆಗಿದೆ ಸಹಾಯಕ ಕೃಷಿ ನಿರ್ದೇಶಕ ಸಿ.ಟಿ. ಸುರೇಶ ಹೇಳಿದರು.ಸರ್ಕಾರ ಹೇಳುವಷ್ಟು ಕಾಳಸಂತೆ ನಮ್ಮಲ್ಲಿ ಇಲ್ಲ. ಲಾವಣಿ ಜಮೀನು ಮಾಡುವವರಿಗೆ ಈ ಆ್ಯಪ್ ತೊಂದರೆ ಮಾಡುತ್ತದೆ. ಎಫ್‌ಐಡಿಯಿಂದಲೂ ತೊಂದರೆ. ಕೆಲವರು ಹೆಚ್ಚು ರಸಗೊಬ್ಬರ ಬಳಸುತ್ತಾರೆ, ಕೆಲವರು ಬಳಸುವುದೇ ಇಲ್ಲ. ಇದರಿಂದ ರೈತರಿಗೆ ಸಕಾಲಿಕವಾಗಿ ಗೊಬ್ಬರ ವಿತರಣೆ ಕಷ್ಟ. ನೆಟ್ ಸಮಸ್ಯೆ, ವಿತರಣೆಗೂ ವಿಳಂಬ, ಭೂಮಿ ಹದ ಬಂದ ಸಮಯದಲ್ಲಿ ಇದು ಸಮಸ್ಯೆ. ಸರ್ಕಾರ ಹೇಳಿದ್ದನ್ನು ನಾವು ಒಪ್ಪಿಕೊಳ್ಳುತ್ತೇವೆ. ಪ್ರಯೋಗದಿಂದ ಅನುಕೂಲ, ಅನನುಕೂಲ ಕಾದು ನೋಡಬೇಕು ಎಂದು ಪರಿಕರ ಮಾರಾಟಗಾರರ ಸಂಘದ ತಾಲೂಕು ಅಧ್ಯಕ್ಷ ಸುರೇಶಗೌಡ ಪಾಟೀಲ ಹೇಳಿದರು.