ಪ್ರಯಾಣಿಕರ ಸುಗಮ ಪ್ರಯಾಣಕ್ಕಾಗಿ ನಗರದ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್ ನಿಲ್ದಾಣದ ಬಳಿ ನೂತನವಾಗಿ ಆಟೋ ರಿಕ್ಷಾ ಪ್ರೀ ಪೇಯ್ಡ್ ಕೌಂಟರ್‌ಗಳನ್ನು ತೆರೆಯಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.

ಶಿವಮೊಗ್ಗ: ಪ್ರಯಾಣಿಕರ ಸುಗಮ ಪ್ರಯಾಣಕ್ಕಾಗಿ ನಗರದ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್ ನಿಲ್ದಾಣದ ಬಳಿ ನೂತನವಾಗಿ ಆಟೋ ರಿಕ್ಷಾ ಪ್ರೀ ಪೇಯ್ಡ್ ಕೌಂಟರ್‌ಗಳನ್ನು ತೆರೆಯಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಆಟೋ ರಿಕ್ಷಾ ಸಂಘಗಳು ಮತ್ತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರಿದ ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಈಗಾಗಲೇ ನಗರದ ರೈಲ್ವೆ ನಿಲ್ದಾಣದ ಬಳಿ ಆಟೋ ರಿಕ್ಷಾ ಪ್ರೀ ಪೇಯ್ಡ್‌ ಕೌಂಟರ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗುತ್ತಿದೆ. ಇದೇ ರೀತಿಯಲ್ಲಿ ನಗರದ ಸರ್ಕಾರಿ ಹಾಗೂ ಖಾಸಗಿ ಬಸ್ ನಿಲ್ದಾಣಗಳಲ್ಲೂ ಆಟೋ ರಿಕ್ಷಾ ಪ್ರೀ ಪೈಯ್ಡ್ ಕೌಂಟರ್ ತೆರೆಯಲು ಮುಂದಾಗಿದ್ದು, ಇನ್ನು ಮುಂದೆ ಬಸ್ ಪ್ರಯಾಣಿಕರು ಇದರ ಅನುಕೂಲ ಪಡೆಯಬಹುದು ಎಂದರು.

ಜ.15ರ ನಂತರ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್ ನಿಲ್ದಾಣಗಳ ಬಳಿ ಪ್ರಿ-ಪೈಯ್ಡ್ ಕೌಂಟರ್ ಪ್ರಾರಂಭಿಸುವಂತೆ ಚೈತನ್ಯ ರೂರಲ್ ಡೆವಲಪ್‌ಮೆಂಟ್ ಕಾರ್ಯದರ್ಶಿಯವರಿಗೆ ಅನುಮೋದನೆ ನೀಡಲಾಗಿದ್ದು, ಪೊಲೀಸ್ ಹಾಗೂ ಆರ್‌ಟಿಒ ಇಲಾಖೆಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ ಕೌಂಟರ್‌ಗಳಿಗೆ ಸ್ಥಳ ನಿಗದಿಪಡಿಸಿಕೊಡಬೇಕು. ಈ ಬಗ್ಗೆ ಪೊಲೀಸ್ ಹಾಗೂ ಆರ್‌ಟಿಓ ಇಲಾಖೆಗಳು ಜಂಟಿಯಾಗಿ ತಪಾಸಣೆ ನಡೆಸಿ ಜಾಹಿರಾತು ಫಲಕಗಳು ಹಾಗೂ ಘೋಷಣೆಯ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಮುಂಜಾನೆ 4.45, ಬೆಳಗ್ಗೆ 11 ಗಂಟೆ, ಸಂಜೆ 7.30 ಹಾಗೂ ರಾತ್ರಿ 9.30 ರ ಸಮಯದಲ್ಲಿ ಪ್ರಯಾಣಿಕರು ಮನೆಗೆ ತೆರಳಲು ಆಟೋ ರಿಕ್ಷಾಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಹಾಗಾಗಿ ರೈಲ್ವೆ ನಿಲ್ದಾಣದ ಬಳಿ ಇರುವ ಆಟೋ ರಿಕ್ಷಾ ಪ್ರೀ ಪೇಯ್ಡ್ ಕೌಂಟರ್‌ಗೆ ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಿ ಹಾಗೂ ಕೌಂಟರ್‌ನಲ್ಲಿ ಯಾವುದೇ ರೀತಿಯ ತಾಂತ್ರಿಕ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಿ ಪ್ರಯಾಣಿಕರ ಸಂಚಾರವನ್ನು ಸುಗಮ ಮಾಡಬೇಕು ಎಂದು ಚೈತನ್ಯ ರೂರಲ್ ಡೆವಲಪ್‌ಮೆಂಟ್ ಕಾರ್ಯದರ್ಶಿಗೆ ಸೂಚಿಸಿದರು.

ಜಿಲ್ಲೆಯಲ್ಲಿರುವ ಆಟೋ ಚಾಲಕರು ಕಡ್ಡಾಯವಾಗಿ ಪರವಾನಗಿ ಮತ್ತು ಬ್ಯಾಡ್ಜ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಸರಿಯಾಗಿಟ್ಟುಕೊಂಡು ಶಿಸ್ತಿನಿಂದ ಕಾರ್ಯನಿರ್ವಹಿಸಬೇಕು. ಪ್ರೀ ಪೇಯ್ಡ್‌ ಆಟೋ ರಿಕ್ಷಾಗಳನ್ನು ನೋಂದಣಿ ಮಾಡಿಕೊಳ್ಳಬೇಕು. ರೈಲ್ವೆ ಹಾಗೂ ಬಸ್ ನಿಲ್ದಾಣಗಳ ಒಳಗೂ ಹೊರಗೂ ಆಟೋ ರಿಕ್ಷಾ ಪ್ರಿ ಪೇಯ್ಡ್ ಕುರಿತು ಫಲಕಗಳು ಹಾಗೂ ಘೋಷಿಸುವ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಇದಕ್ಕೆ ಆಟೋ ಸಂಘಗಳು ಕೂಡ ಸಹಕಾರ ನೀಡಬೇಕು ಎಂದು ಹೇಳಿದರು.

ಸಭೆಯಲ್ಲಿ ಅಪರ ಪೊಲೀಸ್ ಅಧೀಕ್ಷಕ ಕಾರ್ಯಪ್ಪ, ಆರ್‌ಟಿಓ ಅಧೀಕ್ಷಕ ಶಶಿಧರ್, ಸಂಚಾರಿ ಪೊಲೀಸ್ ನಿರೀಕ್ಷಕ ದೇವರಾಜ್, ಮಹಾನಗರಪಾಲಿಕೆಯ ಅಧಿಕಾರಿ, ಚೈತನ್ಯ ರೂರಲ್ ಡೆವಲಪ್‌ಮೆಂಟ್ ಅಧಿಕಾರಿಗಳು ಹಾಗೂ ಆಟೋ ರಿಕ್ಷಾ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಜರಿದ್ದರು.