ಶೀಘ್ರದಲ್ಲೇ ಹೊಸ ಬಿಪಿಎಲ್‌ ಕಾರ್ಡ್‌ ವಿತರಣೆ : ಈ ತಿಂಗಳಿನಿಂದ ಬಡವರಿಗೆ ಹಣದ ಬದಲು ಅಕ್ಕಿ

| N/A | Published : Mar 17 2025, 12:35 AM IST / Updated: Mar 17 2025, 11:59 AM IST

ಶೀಘ್ರದಲ್ಲೇ ಹೊಸ ಬಿಪಿಎಲ್‌ ಕಾರ್ಡ್‌ ವಿತರಣೆ : ಈ ತಿಂಗಳಿನಿಂದ ಬಡವರಿಗೆ ಹಣದ ಬದಲು ಅಕ್ಕಿ
Share this Article
  • FB
  • TW
  • Linkdin
  • Email

ಸಾರಾಂಶ

ಕೆಜಿಎಫ್‌ ತಾಲೂಕಿನ ಎಲ್ಲ ನ್ಯಾಯಬೆಲೆ ಅಂಗಡಿಗಳ ಮುಂದೆ ಅನ್ನಭಾಗ್ಯ ಕಾರ್ಯಕ್ರಮದ ಅಡಿ ಕಳೆದ ತಿಂಗಳ 5 ಕೆಜಿ ಅಕ್ಕಿಯನ್ನು ಸೇರಿಸಿ ತಲಾ 15 ಕೆಜಿ ಅಕ್ಕಿಯನ್ನು ಈ ತಿಂಗಳು ನೀಡಲಾಗುತ್ತಿದೆ.  

 ಕೆಜಿಎಫ್   : ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಕೇವಲ ಒಂದೆರಡು ದಿನದಲ್ಲಿ ಬಿಪಿಎಲ್ ಕಾರ್ಡ್‌ಗಳನ್ನು ಮಾಡಿಕೊಡುವಂತಹ ಕೆಲಸವನ್ನು ಮಾಡಲಾಗುತ್ತಿದೆ. ಒಂದು ವೇಳೆ ಒಟ್ಟು ಕುಟುಂಬದಿಂದ ಸದಸ್ಯರು ಬೇರೆಯಾದ ಸಂದರ್ಭದಲ್ಲಿ ಅವರಿಗೂ ಬಿಪಿಎಲ್ ಪಡಿತರ ಚೀಟಿ ವಿತರಿಸುವುದಕ್ಕೆ ಕುರಿತಂತೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಆದಷ್ಟು ಬೇಗ ಹೊಸ ಬಿಪಿಎಲ್ ಕಾರ್ಡ್‌ಗಳನ್ನು ವಿತರಿಸುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಶಾಸಕಿ ರೂಪಕಲಾ ಶಶಿಧರ್ ಹೇಳಿದರು. 

ನಗರದ ಕೋರಮಂಡಲ್ ಪ್ರದೇಶದಲ್ಲಿ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪಡಿತರ ಚೀಟಿದಾರರಿಗೆ ೧೫ ಕೆಜಿ ಅಕ್ಕಿಯನ್ನು ವಿತರಿಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳು ನೆಲಕಚ್ಚಿವೆ ಎಂದು ಟೀಕಿಸಲಾಗುತ್ತಿತ್ತು. ಹೀಗಿರುವಾಗ ಕೇವಲ ನನ್ನ ಕ್ಷೇತ್ರದ ನಗರ ಭಾಗದಲ್ಲಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ಗಳನ್ನು 84134  ಫಲಾನುಭವಿಗಳಿಗೆ ವಿತರಣೆ ಮಾಡಲಾಗುತ್ತಿದೆ ಎಂದರು. 

ಬಡವರಿಗೆ ಅನ್ನ ಭಾಗ್ಯ

ತಾಲೂಕಿನ ಎಲ್ಲ ನ್ಯಾಯಬೆಲೆ ಅಂಗಡಿಗಳ ಮುಂದೆ ಅನ್ನಭಾಗ್ಯ ಕಾರ್ಯಕ್ರಮದ ಅಡಿ ಕಳೆದ ತಿಂಗಳ ೫ ಕೆಜಿ ಅಕ್ಕಿಯನ್ನು ಸೇರಿಸಿ ತಲಾ ೧೫ ಕೆಜಿ ಅಕ್ಕಿಯನ್ನು ಈ ತಿಂಗಳು ನೀಡಲಾಗುತ್ತಿದೆ. ಅಕ್ಕಿಯನ್ನು ನೀಡುತ್ತಿರುವುದರಿಂದ ಬಡ ಜನರು ಜೀವನ ಉಪವಾಸವಿಲ್ಲದೇ ಮೂರು ಹೊತ್ತು ಹೊಟ್ಟೆ ತುಂಬ ಊಟ ಮಾಡಲು ಸಾಧ್ಯವಾಗುತ್ತಿದೆ ಎಂದರು. ಕೆಜಿಎಫ್ ನಗರ ಭಾಗದಲ್ಲಿ ೮೯೦ ಅಂತ್ಯೋದಯ ಪಡಿತರ ಚೀಟಿಗಳನ್ನು ಹೊಂದಿರುವವ ಕುಟುಂಬಗಳು ಮತ್ತು ಬಿಪಿಎಲ್ ಕಾರ್ಡ್ಗಳನ್ನು ಹೊಂದಿರುವ ಕುಟುಂಬಗಳ ಸಂಖ್ಯೆ ೨೦೩೮೩ ಸಾವಿರ ಇದೆ. ಒಟ್ಟು ೮೪೧೩೪ ಮಂದಿ ಸದಸ್ಯರಿಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಿಂದ ಫೆಬ್ರವರಿ ಮತ್ತು ಮಾರ್ಚ್ ಎರಡು ತಿಂಗಳು ಸೇರಿ ಒಟ್ಟು ೧೫ ಕೆಜಿ ಅಕ್ಕಿಯನ್ನು ವಿತರಿಸಲಾಗುತ್ತಿದೆ ಎಂದರು. 

ಹಣದ ಬದಲು ಅಕ್ಕಿ ವಿತರಣೆ

ಇಲ್ಲಿಯವರೆಗೆ ಅಕ್ಕಿಗೆ ಬದಲಾಗಿ ಡಿಬಿಟಿ ಮೂಲಕ ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತಿತ್ತು. ಆದರೆ ಈ ತಿಂಗಳಿನಿಂದ ಬಡವರಿಗೆ ಅನುಕೂಲವಾಗಲೀ ಎನ್ನುವ ದೂರದೃಷ್ಟಿಯಿಂದ ಕಳೆದ ತಿಂಗಳು ಹಾಗೂ ಈ ತಿಂಗಳು ಎರಡು ತಿಂಗಳುಗಳು ಸೇರಿ 15 ಕೆಜಿ ಅಕ್ಕಿಯನ್ನು ವಿತರಿಸುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ ಎಂದರು. 

ಈಗ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಮನ್ವಯತೆಯಿಂದ ಫಲಾನುಭವಿಗಳಿಗೆ ಅಕ್ಕಿಯನ್ನು ವಿತರಿಸುವ ಕಾರ್ಯವನ್ನು ಮಾಡುತ್ತಿದ್ದು, ಕೆಜಿಎಫ್ ವಿಧಾನಸಭಾ ಕ್ಷೇತ್ರದ ನಗರ ಭಾಗದಲ್ಲಿ 84 ಸಾವಿರಕ್ಕೂ ಮಿಗಿಲಾದ ಫಲಾನುಭವಿಗಳಿಗೆ ಇಂದು ಅಕ್ಕಿಯನ್ನು ವಿತರಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.ಮನೆ ಬಾಗಿಲಿಗೇ ತಲುಪಿದ ಗ್ಯಾರಂಟಿ

ರಾಜ್ಯ ಸರ್ಕಾರ ನೂತನವಾಗಿ ಜಾರಿಗೊಳಿಸಿದ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮೀ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಗಳು ನೇರವಾಗಿ ಫಲಾನುಭವಿಗಳ ಮನೆ ಬಾಗಿಲಿಗೆ ಪಾರದರ್ಶಕವಾಗಿ ತಲುಪಿಸುವ ಕೆಲಸವನ್ನು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಮತ್ತು ನ್ಯಾಯಬೆಲೆ ಅಂಗಡಿಗಳ ಮಾಲೀಕರು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ ಎಂದರು. ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್, ಆಹಾರ ನಿರೀಕ್ಷಕ ರಘು, ವ್ಯವಸ್ಥಾಪಕಿ ವೆಂಕಟಲಕ್ಷ್ಮಮ್ಮ ಮೊದಲಾದವರು ಇದ್ದರು.