ಚಾಮರಾನಗರದಲ್ಲಿ ಎಂಎಸ್‌ಐಎಲ್ ಚಿಟ್ ಫಂಡ್ ನೂತನ ಶಾಖೆ ಆರಂಭ

| Published : Aug 31 2024, 01:31 AM IST

ಚಾಮರಾನಗರದಲ್ಲಿ ಎಂಎಸ್‌ಐಎಲ್ ಚಿಟ್ ಫಂಡ್ ನೂತನ ಶಾಖೆ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ಸರ್ಕಾರಿ ಸ್ವಾಮ್ಯದ ಎಂಎಸ್ಐಎಲ್ ಸಂಸ್ಥೆಯ ಚಿಟ್ ಫಂಡ್ ನೂತನ ಶಾಖೆಯನ್ನು ಚಾಮರಾಜನಗರದಲ್ಲಿ ಎಂಎಸ್‌ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕರ್ನಾಟಕ ಸರ್ಕಾರಿ ಸ್ವಾಮ್ಯದ ಎಂಎಸ್ಐಎಲ್ ಸಂಸ್ಥೆಯ ಚಿಟ್ ಫಂಡ್ ನೂತನ ಶಾಖೆಯನ್ನು ಚಾಮರಾಜನಗರದಲ್ಲಿ ಎಂಎಸ್‌ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಉದ್ಘಾಟಿಸಿದರು. ನಗರದ ಚಿಕ್ಕ ಅಂಗಡಿ ಬೀದಿಯ ರಂಗಶ್ರೀ ಕಾಂಪ್ಲೆಕ್ಸ್‌ನಲ್ಲಿ ನೂತನ ಚಿಟ್ ಫಂಡ್ ಶಾಖೆಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು, ಚೀಟಿ ವ್ಯವಹಾರದಲ್ಲಿ ಹಣ ಹೂಡಿ ಹಲವರು ಮೋಸ ಹೋಗಿರುವ ಪ್ರಕರಣಗಳು ಇವೆ. ಆದರೆ ಎಂಎಸ್‌ಐಎಲ್ ಚಿಟ್ ಫಂಡ್ ಸರ್ಕಾರದ ಸಂಸ್ಥೆಯಾಗಿದ್ದು, ಇಲ್ಲಿನ ವ್ಯವಹಾರವು ಪಾರದರ್ಶಕವಾಗಿದ್ದು ಹಣಕ್ಕೆ ಭದ್ರತೆ ಇದೆ. ಇಲ್ಲಿನ ಜನರ ಆರ್ಥಿಕ ಅಭಿವೃದ್ದಿಗೆ ಸಹಾಯಕವಾಗಲೆಂದು ಶಾಖೆ ತೆರೆಯಲಾಗಿದೆ ಎಂದರು.

ಎಂಎಸ್‌ಐಎಲ್ ಸಂಸ್ಥೆಯ ಅಧ್ಯಕ್ಷನಾಗಿ ನಾನು ಚಾಮರಾಜನಗರದಲ್ಲಿ ಚಿಟ್ ಫಂಡ್ ಸಂಸ್ಥೆ ಸ್ಥಾಪಿಸಬೇಕೆಂದು ಸೂಚಿಸಿದ್ದೆ. ಎಂಎಸ್‌ಐಎಲ್ ಸಂಸ್ಥೆಯು ಚಿಟ್ ಫಂಡ್, ಮದ್ಯ ಮಾರಾಟ ಕಾರ್ಯಾಚರಣೆ, ನೋಟ್ ಪುಸ್ತಕ, ಲೇಖನ ಸಾಮಾಗ್ರಿ, ಜನೌಷಧಿ, ಟೂರ್ಸ್‌ ಮತ್ತು ಟ್ರಾವಲ್ಸ್ ಸೇರಿದಂತೆ ಇನ್ನಿತರ ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದು ಲಾಭದಾಯಕವಾಗಿ ಮುಂದುವರೆದಿದೆ. ಅಲ್ಲದೇ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದೆ ಎಂದರು.

ಎಂಎಸ್‌ಐಎಲ್ ಸಂಸ್ಥೆಯು ರಾಜ್ಯದಲ್ಲಿ 26 ಶಾಖೆಗಳನ್ನು ಈಗಾಗಲೇ ಹೊಂದಿದ್ದು, ಚಾಮರಾಜನಗರದಲ್ಲಿ 27ನೇ ಶಾಖೆಯನ್ನು ಆರಂಭಿಸಿದೆ. ಜಿಲ್ಲೆಯ ಜನರು ನೂತನ ಚಿಟ್ ಫಂಡ್ ಶಾಖೆಯ ಪ್ರಯೋಜನ ಪಡೆಯಬೇಕು. ಅತ್ಯಂತ ವಿಶ್ವಾಸಾರ್ಹವಾಗಿರುವ ಚಿಟ್ ಫಂಡ್ ಯೋಜನೆಯನ್ನು ಸ್ವ ಸಹಾಯ ಗುಂಪುಗಳೂ ಸಹ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಎಂಎಸ್‌ಐಎಲ್ ಚಿಟ್ ಫಂಡ್ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡುವುದರಿಂದ ನಿಶ್ಚಿತವಾಗಿ ಲಾಭವಾಗಲಿದೆ. ಚಿಟ್ ಫಂಡ್‌ನಲ್ಲಿ ತೊಡಗಿಸುವ ಹಣದಿಂದ ಬರುವ ಲಾಭವನ್ನು ಒಳ್ಳೆಯ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಬೇಕು. ಇದರಿಂದ ಇನ್ನಷ್ಟು ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿರುವ ಚಟುವಟಿಕೆಗಳನ್ನು ಗ್ರಾಹಕರು ಕೈಗೊಳ್ಳಬೇಕು ಎಂದರು.

ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ತೆರೆಯಲಾಗಿರುವ ಸರ್ಕಾರಿ ಸ್ವಾಮ್ಯದ ಚಿಟ್ ಫಂಡ್ ಸಂಸ್ಥೆಯು ಸ್ಥಳೀಯ ಜನರಿಗೆ ಅನುಕೂಲವಾಗಲಿದೆ. ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ತಿಳಿಸಿದರು. ನಗರಸಭೆ ಸದಸ್ಯ ಚಂದ್ರಶೇಖರ್ ಮಾತನಾಡಿ, ನೂತನ ಚಿಟ್ ಫಂಡ್ ಸಂಸ್ಥೆಯು ಯಶಸ್ವಿಯಾಗಿ ಕಾರ್ಯ ನಡೆಸಲಿ. ಜಿಲ್ಲೆಯ ಜನತೆಗೆ ಹೆಚ್ಚು ಉಪಯೋಗವಾಗಲೆಂದು ಹಾರೈಸಿದರು. ಎಂಎಸ್‌ಐಎಲ್‌ನ ವ್ಯವಸ್ಥಾಪಕ ಮನೋಜ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಅಧಿಕೃತ, ಅನಧಿಕೃತ ಚಿಟ್ ಫಂಡ್‌ಗಳಿಂದ ಅಂದಾಜು ₹50 ಸಾವಿರ ಕೋಟಿ ವ್ಯವಹಾರ ನಡೆಯುತ್ತಿದೆ. ಎಂಎಸ್‌ಐಎಲ್ ಚಿಟ್ ಫಂಡ್ 400ಕ್ಕೂ ಹೆಚ್ಚು ಕೋಟಿ ರು.ಗಳ ವಹಿವಾಟು ನಡೆಸುತ್ತಿದೆ. ಮುಂಬರುವ ದಿನಗಳಲ್ಲಿ 550 ಕೋಟಿ ರು.ಗಳ ವಹಿವಾಟು ನಡೆಸುವ ಯೋಜನೆ ಹೊಂದಿದೆ ಎಂದರು.

ಎಂಎಸ್‌ಐಎಲ್ ಚಿಟ್ ಫಂಡ್‌ನಲ್ಲಿಯೂ ಬ್ಯಾಂಕುಗಳು ನಡೆಸುವಂತೆ ಆನ್ ಲೈನ್ ವ್ಯವಸ್ಥೆಯನ್ನು ಸಹ ಅಳವಡಿಸಿಕೊಳ್ಳುತ್ತಿದೆ. ಗ್ರಾಹಕರಿಗೆ ಅನುಕೂಲವಾಗುವ ಅನೇಕ ತಂತ್ರಜ್ಞಾನಗಳನ್ನು ಬಳಸಿ ಇನ್ನಷ್ಟು ಸರಳವಾಗಿ ವ್ಯವಹಾರ ನಡೆಸಲು ಎಲ್ಲ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ನೂತನ ಚಿಟ್ ಫಂಡ್ ಸಂಸ್ಥೆಯನ್ನು ಬೆಳೆಸುವ ಮೂಲಕ ಸಂಸ್ಥೆ ಇನ್ನಷ್ಟು ಬೆಳೆಯಲು ಜಿಲ್ಲೆಯ ಜನತೆ ಸಹಕರಿಸಬೇಕು ಎಂದು ತಿಳಿಸಿದರು.

ಎಂಎಸ್‌ಐಎಲ್ ಚಿಟ್ ಫಂಡ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ರಮಾಕಾಂತ್, ಡಿಸಿಎಫ್ ಡಾ. ಸಂತೋಷ್ ಕುಮಾರ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.