ಕರಡೊಳ್ಳಿ ಗ್ರಾಮಕ್ಕೆ ನೂತನ ಬಸ್ ಸಂಚಾರಕ್ಕೆ ಚಾಲನೆ

| Published : Jun 18 2025, 11:48 PM IST

ಸಾರಾಂಶ

ಇದು ಹುಣಶೆಟ್ಟಿಕೊಪ್ಪದ ವಿದ್ಯಾರ್ಥಿಗಳಿಗೂ ಹೆಚ್ಚಿನ ಅನುಕೂಲವಾಗಲಿದೆ.

ಯಲ್ಲಾಪುರ: ಮದನೂರು ಗ್ರಾಪಂ ವ್ಯಾಪ್ತಿಯ ಕರಡೊಳ್ಳಿಯಲ್ಲಿ ನೂತನವಾಗಿ ಕರಡೊಳ್ಳಿ-ಯಲ್ಲಾಪುರ ಬಸ್ಸಿಗೆ ಶಾಸಕ ಶಿವರಾಮ ಹೆಬ್ಬಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಇಲ್ಲಿಂದ ೫೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಶಾಲೆಗೆ ಹೋಗುವುದನ್ನು ಸ್ಥಳೀಯ ಮುಖಂಡರ ವಿನಂತಿಯಂತೆ ಸಾರಿಗೆ ಇಲಾಖೆಯ ಅಧಿಕಾರಿಗಳ ಜೊತೆ ಮಾತಾಡಿ ಈ ಬಸ್ ಬಿಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಇದು ಹುಣಶೆಟ್ಟಿಕೊಪ್ಪದ ವಿದ್ಯಾರ್ಥಿಗಳಿಗೂ ಹೆಚ್ಚಿನ ಅನುಕೂಲವಾಗಲಿದೆ. ವಿದ್ಯುತ್ ತಂತಿ ತಗುಲಿ ಬೃಹತ್ ಆನೆಯೊಂದು ಸಾವನ್ನಪ್ಪಿದ ಸಂದರ್ಭದಲ್ಲಿ ಇಡೀ ಊರಿನವರೇ ಜೈಲಿಗೆ ಹೋಗಬೇಕಿತ್ತು. ಆಗ ಯಾವ ಭಾಷಣ ಮಾಡುವವರೂ ನಿಮ್ಮ ಬಳಿಗೆ ಬರಲಿಲ್ಲ. ನಾನು ನಿಂತು ನಿಮ್ಮನ್ನು ರಕ್ಷಣೆ ಮಾಡಿದ್ದೇನೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.

ಹುಣಶೆಟ್ಟಿಕೊಪ್ಪದಲ್ಲಿ ಪ್ರೌಢಶಾಲೆಯನ್ನು ಈ ಪ್ರದೇಶದ ಬಡವರಿಗಾಗಿ ಪ್ರಾರಂಭಿಸಲಾಗಿದೆ. ಇಲ್ಲಿ ಕರಡಿಯ ಆತಂಕ ಇರುವುದರಿಂದ ಮಕ್ಕಳು ಶಾಲೆಗೆ ಹೋಗುವುದು ಕಷ್ಟ. ಹಾಗಾಗಿಯೇ ಬಸ್ಸನ್ನು ಪ್ರಾರಂಭಿಸಿದ್ದೇನೆ. ನನಗೆ ಮೋಸ ಮಾಡಬಹುದು, ದೇವರಿಗೆ ಮೋಸ ಮಾಡಲಾಗದು. ಕಷ್ಟ, ಸುಖದಲ್ಲಿ ಯಾರೂ ಉಪಕಾರ ಮಾಡುತ್ತಾರೆ ಅವರ ಕುರಿತು ನೆನಪಿಟ್ಟುಕೊಳ್ಳಬೇಕು. ನಿಮ್ಮಿಂದ ಏನನ್ನೂ ಬಯಸುವುದಿಲ್ಲ. ಚುನಾವಣೆಯ ಸಂದರ್ಭದಲ್ಲಿ ಕೇವಲ ಒಂದು ಮತ ಕೇಳುತ್ತೇನಷ್ಟೆ. ನಿಮ್ಮ ಮಕ್ಕಳು ಶಿಕ್ಷಣವಂತನಾಗಬೇಕು. ಅಲ್ಲದೇ ಸರ್ಕಾರ ಮಹಿಳೆಯರಿಗೆ ಎಲ್ಲ ರೀತಿಯ ಉಚಿತ ಭಾಗ್ಯ ನೀಡಿ, ಅವರ ಭವಿಷ್ಯಕ್ಕೆ ಅನುಕೂಲ ಕಲ್ಪಿಸಿರುವುದು ಕೂಡ ಜನ ನೆನಪಿಟ್ಟುಕೊಳ್ಳಬೇಕು ಎಂದರು.

ನಂತರ ವಿಧ್ಯುಕ್ತವಾಗಿ ಬಸ್ ಚಾಲನೆ ನೀಡಿ ಕರಡೊಳ್ಳಿಯಿಂದ ಯಲ್ಲಾಪುರದವರೆಗೂ ಶಾಸಕ ಶಿವರಾಮ ಹೆಬ್ಬಾರ ಬಸ್ಸಿನಲ್ಲೇ ಪ್ರಯಾಣ ಬೆಳೆಸಿದರು.

ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರಾದ ವಿಜಯ ಮಿರಾಶಿ, ವಿನಾಯಕ ತಿನೇಕರ, ಸಾಂದು ಪಟಕಾರೆ, ಸಾರಿಗೆ ನಿಗಮದ ಡಿಪೋ ವ್ಯವಸ್ಥಾಪಕ ಸಂತೋಷ ವೆರ್ಣೇಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕರಡೊಳ್ಳಿ ಗ್ರಾಮಕ್ಕೆ ನೂತನ ಬಸ್ ಸಂಚಾರಕ್ಕೆ ಶಾಸಕ ಶಿವರಾಮ ಹೆಬ್ಬಾರ್ ಚಾಲನೆ ನೀಡಿದರು.