ಬಿಜೆಪಿ ಸರಕಾರದ 2018ರಿಂದ 2023ರ ತನಕ ಶಿರಸಿ ವಿಭಾಗಕ್ಕೆ 87 ಮತ್ತು ಶಿರಸಿ ಡಿಪೋಗೆ 28 ಹೊಸ ಬಸ್ ಬಿಟ್ಟ ಬಗ್ಗೆ ದಾಖಲೆ ಇದೆ.
ಸಚಿವ ಮಂಕಾಳ ವೈದ್ಯ ಮಾರಿಕಾಂಬೆಯ ಕ್ಷಮೆಯಾಚಿಸಲಿ
ಕನ್ನಡಪ್ರಭ ವಾರ್ತೆ ಭಟ್ಕಳಶಿರಸಿ ಮಾರಿ ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ಶಿರಸಿ ಡಿಪೋಕ್ಕೆ ಹೊಸ ಬಸ್ ಬಿಟ್ಟಿದ್ದರೆ ದಾಖಲೆ ಬಿಡುಗಡೆಗೊಳಿಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರು ಸವಾಲು ಹಾಕಿದ್ದು, ಬಿಜೆಪಿ ಸರಕಾರದ 2018ರಿಂದ 2023ರ ತನಕ ಶಿರಸಿ ವಿಭಾಗಕ್ಕೆ 87 ಮತ್ತು ಶಿರಸಿ ಡಿಪೋಗೆ 28 ಹೊಸ ಬಸ್ ಬಿಟ್ಟ ಬಗ್ಗೆ ದಾಖಲೆ ಇದೆ ಎಂದು ಬಿಜೆಪಿ ಕಿಸಾನ್ ಮೋರ್ಚಾದ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಸಂಜೆ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಸಚಿವ ಮಂಕಾಳ ವೈದ್ಯರು ಶಿರಸಿ ಜಾತ್ರಾ ಪೂರ್ವಭಾವಿ ಸಭೆಯಲ್ಲಿ ರಾಜಕೀಯದ ಬಗ್ಗೆ ಮಾತನಾಡಿದ್ದಾರೆ. ಈ ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದು, ಸಚಿವರು ರಾಜಕೀಯ ಮಾತನಾಡಿರುವುದು ಸರಿಯಲ್ಲ. ಸಚಿವರು ಮಂಕಿ ಚುನಾವಣೆ ಆದ ಬಳಿಕ ಸಭೆ ಸಮಾರಂಭಗಳಲ್ಲಿ ಹತಾಷರಾಗಿ ಮಾತನಾಡುತ್ತಿದ್ದಾರೆ. ಬಿಜೆಪಿ ಸರಕಾರದ ಅವಧಿಯಲ್ಲಿ ಶಿರಸಿಗೆ ಹೊಸ ಬಸ್ ಬಂದಿಲ್ಲ ಎಂದಿದ್ದಕ್ಕೆ ಮಾರಿಕಾಂಬೆಯ ಕ್ಷಮೆ ಯಾಚಿಸಬೇಕು. ಬಿಜೆಪಿ ಸರಕಾರದ ಅವಧಿಯಲ್ಲಿ ಶಿರಸಿಗೆ ಹೊಸ ಬಸ್ ಬಿಟ್ಟಿಲ್ಲ ಎಂದು ಸಚಿವರು ಸಭೆಯಲ್ಲಿ ಸುಳ್ಳು ಹೇಳಿದ್ದಾರೆ. ಹೊಸ ಬಸ್‌ಗಳನ್ನು ಬಿಟ್ಟ ಬಗ್ಗೆ ದಾಖಲೆ ಇದ್ದರೆ ಬಿಡುಗಡೆಗೊಳಿಸಿ ಎಂದು ಸಭೆಯಲ್ಲೇ ಸವಾಲು ಹಾಕಿದ್ದರು. ನಾವು ದಾಖಲೆ ಬಿಡುಗಡೆಗೊಳಿಸಿದ್ದೇವೆ ಎಂದರು.ಸಚಿವರು ಬೇಡ್ತಿ ವರದಾ ನದಿ ತಿರುವ ಯೋಜನೆ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಬಗ್ಗೆ ಡಬ್ಬಲ್ ಗೇಮ್ ಮಾಡುತ್ತಿದ್ದಾರೆ. ಇವರು ಯೋಜನೆ ಬಗ್ಗೆ ಸ್ಪಷ್ಟ ವಿರೋಧ ವ್ಯಕ್ತಪಡಿಸಬೇಕು. ಇದು ಸಚಿವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ನಾನು ಕುಮಟಾದಿಂದ ಭಟ್ಕಳದ ವರೆಗೆ ಪಾದಯಾತ್ರೆ ಮಾಡಿದ್ದೆ. ನಮ್ಮ ಮನವಿಗೆ ಸಚಿವರಿಂದ ಇನ್ನೂ ತನಕ ಉತ್ತರ ಬಂದಿಲ್ಲ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಇವರು ವೈಯಕ್ತಿಕ ಮಾಡುವುದಕ್ಕಿಂತ ಸರಕಾರದಿಂದಲೇ ಮಾಡಿಸಿದರೆ ಜನರಿಗೆ ಅನುಕೂಲವಾಗಲಿದೆ. ಸಮುದ್ರದಲ್ಲಿನ ಪ್ಲಾಸ್ಟಿಕ್ ಸ್ವಚ್ಛತೆಗೆ ₹730 ಕೋಟಿ ಮಂಜೂರಿಯಾಗಿತ್ತು. ಈ ಕೆಲಸ ಎಲ್ಲಿ ನಡೆದಿದೆ. ಪ್ಲಾಸ್ಟಿಕ್ ಸ್ವಚ್ಛತೆ ಪೂರ್ಣ ಆಗಿದೆಯೇ ಎನ್ನುವುದರ ಬಗ್ಗೆ ಯಾರಿಗೂ ಮಾಹಿತಿ ಇಲ್ಲ ಎಂದ ಅವರು, ಸಚಿವರಾದಿಯಾಗಿ ಜಿಲ್ಲೆಯ ಜನಪ್ರತಿನಿಧಿಗಳು ಒಟ್ಟಾಗಿ ಜನರಿಗೆ ಮಾರಕವಾಗುವ ಯೋಜನೆಗಳನ್ನು ನಿಲ್ಲಿಸಬೇಕು. ಅದನ್ನು ಬಿಟ್ಟು ಬೇರೆಯವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಬಾರದು ಎಂದು ಹೇಳಿದರು.
ಪ್ರಮುಖರಾದ ಶ್ರೀನಿವಾಸ ನಾಯ್ಕ ಭಟ್ಕಳ, ಗಣೇಶ ಹೆಗಡೆ, ಮಂಜುನಾಥ ನಾಯ್ಕ, ರಮೇಶ ನಾಯ್ಕ, ರಾಘವೇಂದ್ರ ನಾಯ್ಕ, ವಿವೇಕ ನಾಯ್ಕ ಮುಂತಾದವರಿದ್ದರು.