ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸುವ ವಿಧಾನ ಪರಿಷತ್ ಸ್ಥಾನದ ಉಪ ಚುನಾವಣೆಗೆ ಬಿಜೆಪಿ ಹೈಕಮಾಂಡ್ ತನ್ನ ‘ಘಟಾನುಘಟಿ’ ನಾಯಕರನ್ನು ಕೈಬಿಟ್ಟು ಹೊಸ ಮುಖವನ್ನು ಕಣಕ್ಕಿಳಿಸುವ ಮೂಲಕ ಈ ಬಾರಿಯೂ ಅಚ್ಚರಿಯ ತೀರ್ಮಾನ ಕೈಗೊಂಡಿದೆ. ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ದ.ಕ. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಪುತ್ತೂರು ಅವರಿಗೆ ಟಿಕೆಟ್ ಘೋಷಿಸಲಾಗಿದೆ.ಕರಾವಳಿಯಲ್ಲಿ ವಿಧಾನಸಭೆ, ಲೋಕಸಭೆ ಸೇರಿದಂತೆ ಕಳೆದ 2-3 ಚುನಾವಣೆಗಳಲ್ಲಿ ಹೊಸ ಮುಖಗಳಿಗೆ ಬಿಜೆಪಿ ಮಣೆ ಹಾಕುವ ಸಂಪ್ರದಾಯ ಈ ಉಪಚುನಾವಣೆಯಲ್ಲೂ ಮುಂದುವರಿದಿದೆ.
ಆರೆಸ್ಸೆಸ್ ಕಟ್ಟಾಳು ಕಿಶೋರ್ ಕುಮಾರ್:ಕಿಶೋರ್ ಕುಮಾರ್ ಪುತ್ತೂರು ಮೂಲತಃ ಆರೆಸ್ಸೆಸ್ ಕಟ್ಟಾಳು. ಪುತ್ತೂರಿನ ಸರ್ವೆ ಗ್ರಾಮದ ಬೊಟ್ಯಾಡಿಯವರು. 1979ರಲ್ಲಿ ಜನನ, ಎಂಎ ರಾಜ್ಯಶಾಸ್ತ್ರ ಪದವೀಧರರು. ಆರೆಸ್ಸೆಸ್ ಕಲ್ಪನೆ ಶಾಖೆಯ ಹೆಡ್ ಟ್ರೈನರ್ ಆಗಿದ್ದ ಅವರು, 1994ರಿಂದ 1998ರವರೆಗೆ ಪುತ್ತೂರಿನ ನರಿಮೊಗರು ಪ್ರದೇಶದ ಆರೆಸ್ಸೆಸ್ ಮಂಡಲ ಪ್ರವಾಸಿಯಾಗಿ ಕಾರ್ಯ ನಿರ್ವಹಿಸಿದ್ದರು. 2000ರಿಂದ 2004ರವರೆಗೆ ಎಬಿವಿಪಿ ತಾಲೂಕು ಪ್ರಮುಖ್ ಆಗಿ ವಿವಿಧ ವಿದ್ಯಾರ್ಥಿ ಚಳವಳಿಗಳನ್ನು ಸಂಘಟಿಸಿದ್ದರು.
ಮಂಗಳೂರು, ಉಡುಪಿ, ಕೊಡಗು, ಕಾಸರಗೋಡು ಜಿಲ್ಲೆಗಳನ್ನೊಳಗೊಂಡ ಬಜರಂಗದಳದ ಮಂಗಳೂರು ವಿಭಾಗ ಸಹಸಂಚಾಲಕರಾಗಿ, 2008ರಿಂದ 2013ರವರೆಗೆ ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷರಾಗಿದ್ದರು. 2014ರಿಂದ 2016ರವರೆಗೆ ಯುವಮೋರ್ಚಾ ರಾಜ್ಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಕಿಶೋರ್ ಕುಮಾರ್, ಬಿಜೆಪಿ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಇದೀಗ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.ಈ ನಡುವೆ ಕಿಶೋರ್ ಕುಮಾರ್ ಅವರು ಸೌತ್ ಕೆನರಾ ಆರ್‌ಟಿಐ ಕಾರ್ಯಕರ್ತರ ಘಟಕದ ಜಿಲ್ಲಾಧ್ಯಕ್ಷರಾಗಿ, ಪುತ್ತೂರು ಸಾಹಿತ್ಯ ಸಂಗಮದ ಗೌರವಾಧ್ಯಕ್ಷರಾಗಿ, ದ.ಕ. ಜಿಲ್ಲಾ ಕಟ್ಟಡ ಸಾಮಗ್ರಿಗಳ ಪೂರೈಕೆದಾರರ ಸಂಘಟನೆ ಗೌರವಾಧ್ಯಕ್ಷರಾಗಿ, 2021ರಿಂದ 2023ರವರೆಗೆ ಮೆಸ್ಕಾಂನ ನಾಮನಿರ್ದೇಶಿತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜತೆಗೆ ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್‌ನ ವಿದ್ಯಾರ್ಥಿ ಕಲ್ಯಾಣಾಧಿಕಾರಿಯಾಗಿಯೂ ಆಗಿದ್ದರು.
ಕೈಗೂಡದ ನಳಿನ್ ಪ್ರಯತ್ನ:ಕಿಶೋರ್ ಕುಮಾರ್ ಪುತ್ತೂರು ಅವರಿಗೆ ಟಿಕೆಟ್ ಘೋಷಣೆ ಮಾಡುವುದರೊಂದಿಗೆ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಅವರ ಪ್ರಯತ್ನ ಈ ಬಾರಿಯೂ ಕೈಗೂಡಿಲ್ಲ. ದ.ಕ. ಲೋಕಸಭೆ ಕ್ಷೇತ್ರದ ಇತಿಹಾಸದಲ್ಲೇ ದಾಖಲೆಯ ಮತ ಗಳಿಕೆ ಮಾಡಿದ ಹೆಗ್ಗಳಿಕೆ ಇದ್ದರೂ ಕಳೆದ ಲೋಕಸಭೆ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಈ ಉಪಚುನಾವಣೆಯಲ್ಲಾದರೂ ಟಿಕೆಟ್ ಸಿಗಲೇಬೇಕು ಎಂಬ ಶತಪ್ರಯತ್ನ ಮಾಡಿದ್ದರೂ ಈಗಲೂ ನಿರಾಸೆಯಾಗಿದೆ.
ಏಳು ಮಂದಿಯ ಹೆಸರಿತ್ತು:ನಳಿನ್ ಕುಮಾರ್ ಕಟೀಲು, ಪ್ರಮೋದ್ ಮಧ್ವರಾಜ್, ಸತೀಶ್ ಕುಂಪಲ, ಉದಯಕುಮಾರ್ ಶೆಟ್ಟಿ ಜತೆಯಲ್ಲಿ ಕಿಶೋರ್ ಕುಮಾರ್ ಹೆಸರು ಬಿಜೆಪಿಗೆ ಹೈಕಮಾಂಡ್‌ಗೆ ಹೋಗಿತ್ತು. ಈ ನಡುವೆ ಅರುಣ್ ಕುಮಾರ್ ಪುತ್ತಿಲ ಹೆಸರೂ ಕೇಳಿಬಂದಿದ್ದು, ಆರೋಪ ಬಂದ ಮೇಲೆ ಅವರ ಹೆಸರು ಹಿನ್ನೆಲೆಗೆ ಸರಿದಿತ್ತು. ಈಗ ಕಿಶೋರ್ ಕುಮಾರ್ ಅವರ ಆಯ್ಕೆ ಪಕ್ಷದ ಮುಖಂಡರನ್ನೇ ಅಚ್ಚರಿಗೆ ತಳ್ಳಿದೆ. ಅದರಲ್ಲೂ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದವರಿಗೆ ತೀವ್ರ ನಿರಾಸೆಯಾಗಿದೆ.
ಆರೆಸ್ಸೆಸ್ ಆಯ್ಕೆ:ಕಿಶೋರ್ ಕುಮಾರ್ ಕರಾವಳಿಯ ಸಣ್ಣ ಸಮುದಾಯವಾದ ಸವಿತಾ ಸಮಾಜಕ್ಕೆ ಸೇರಿದವರು. ಅವರ ಆಯ್ಕೆ ಆರೆಸ್ಸೆಸ್ ಪ್ರಭಾವದ ಮೂಲಕ ನಡೆದಿದೆ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ. ಬಹುಸಂಖ್ಯಾತ ಬಂಟ, ಬಿಲ್ಲವ, ಮೊಗವೀರ ಸಮುದಾಯದ ಅಭ್ಯರ್ಥಿಗಳಿದ್ದರೂ, ಅವರನ್ನು ಕೈಬಿಟ್ಟು ಸಣ್ಣ ಒಬಿಸಿ ಸಮುದಾಯಕ್ಕೆ ಮಣೆ ಹಾಕಿರುವುದು ಮತ್ತೊಂದು ಅಚ್ಚರಿಯ ಸಂಗತಿ.
ಟಿಕೆಟ್ ಘೋಷಣೆಯಾದ ಬಳಿಕ ಕಿಶೋರ್ ಕುಮಾರ್ ಮಂಗಳವಾರ ಸಂಜೆ ಬಿಜೆಪಿ ಜಿಲ್ಲಾ ಕಚೇರಿಗೆ ಆಗಮಿಸಿದರು. ಅವರನ್ನು ಅಭಿನಂದಿಸುವ ಕಾರ್ಯಕ್ರಮ ನಡೆಯಿತು. ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಭರತ್ ಶೆಟ್ಟಿ, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮತ್ತಿತರರು ಇದ್ದರು.ಕಪ್ಪು ಚುಕ್ಕೆ ಇಲ್ಲದಂತೆ ಕೆಲಸ ನಿರ್ವಹಿಸುತ್ತೇನೆ: ಕಿಶೋರ್
ಬಿಜೆಪಿಯನ್ನು ತಾಯಿ ಎಂದು ಸ್ವೀಕರಿಸಿ ಕೆಲಸ ಮಾಡಿಕೊಂಡು ಬಂದ ನನಗೆ ಪಕ್ಷದ ಹಿರಿಯರು ಚುನಾವಣೆ ಸ್ಪರ್ಧಿಸುವ ಅವಕಾಶ ನೀಡಿದ್ದಾರೆ. ಸವಿತಾ ಸಮಾಜದಂತಹ ಸಣ್ಣ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿರುವುದು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಜತೆಗೆ ಶ್ರೀಮಂತನೂ ಅಲ್ಲ, ಆದರೂ ಪಕ್ಷ ನನ್ನನ್ನು ಗುರುತಿಸಿ ದೊಡ್ಡ ಜವಾಬ್ದಾರಿ ನೀಡಿದೆ. ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಪಕ್ಷದ ಎಲ್ಲ ಮುಖಂಡರ ಮಾರ್ಗದರ್ಶನದಲ್ಲಿ, ಹಿಂದುತ್ವದ ಆಧಾರದಲ್ಲಿ, ಕಾರ್ಯಕರ್ತರ ಧ್ವನಿಯಾಗಿ, ಸ್ಥಳೀಯ ಸಂಸ್ಥೆ ಪ್ರತಿನಿಧಿಗಳ ಪರವಾಗಿ ಕಪ್ಪು ಚುಕ್ಕೆ ಇಲ್ಲದಂತೆ ಕೆಲಸ ನಿರ್ವಹಿಸುತ್ತೇನೆ ಎಂದು ಕಿಶೋರ್ ಕುಮಾರ್ ಪುತ್ತೂರು ಹೇಳಿದ್ದಾರೆ.3ರಂದು ನಾಮಪತ್ರ ಸಲ್ಲಿಕೆ
ಕಿಶೋರ್ ಕುಮಾರ್ ಅವರು ಅ.3ರಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಎರಡು ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಎಲ್ಲ ಶಾಸಕರು, ಸಂಸದರು, ಹಿರಿಯ ಮುಖಂಡರು, ಕಾರ್ಯಕರ್ತರ ಜತೆಗೂಡಿ ನಾಮಪತ್ರ ಸಲ್ಲಿಸುವುದಾಗಿ ಕಿಶೋರ್ ಕುಮಾರ್ ತಿಳಿಸಿದ್ದಾರೆ.